ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ; ಅನಧಿಕೃತ ಪಿಯು ಕಾಲೇಜುಗಳು?

ಇಲಾಖೆಯ ಮಾಹಿತಿಯಲ್ಲಿರುವುದು 46 ಕಾಲೇಜು ಮಾತ್ರ
Last Updated 29 ಜೂನ್ 2019, 19:45 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕು ಶೈಕ್ಷಣಿಕವಾಗಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ಜಿಲ್ಲೆಯಲ್ಲಿಯೇ ಅತ್ಯಧಿಕ, ಅಂದರೆ 46 ಪದವಿಪೂರ್ವ ಕಾಲೇಜುಗಳನ್ನು ಹೊಂದಿದೆ.

ಸಿಂದಗಿ ಪಟ್ಟಣದಲ್ಲಿಯೇ 12 ಪಿಯು ಕಾಲೇಜುಗಳಿವೆ. ಇದರಲ್ಲಿ ಒಂದು ಮಹಿಳಾ ಕಾಲೇಜು ಇದೆ. ಇವು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರ್ಯಾಲಯದ ದಾಖಲೆಯಲ್ಲಿರುವ ಅಧಿಕೃತವಾದ ಕಾಲೇಜುಗಳು. ಆದರೆ, ಪಟ್ಟಣದಲ್ಲಿ ಅಲ್ಲಲ್ಲಿ ಹೊಸ, ಹೊಸ ವಿಜ್ಞಾನ ಕಾಲೇಜುಗಳ ನಾಮಫಲಕಗಳು ಎದ್ದು ಕಾಣುತ್ತಿವೆ. ಅಷ್ಟೇ ಅಲ್ಲ ಪ್ರವೇಶ ಪಡೆದುಕೊಂಡು ಪಿಯು ವಿಜ್ಞಾನ ವರ್ಗಗಳು ಕೂಡ ನಡೆದಿವೆ.

ವಿಜಯಪುರ ರಸ್ತೆಯ ಬಿರಾದಾರ ಬಡಾವಣೆಯಲ್ಲಿ ಎಲೈಟ್ ಹೆಸರಿನ ನಾಮಫಲಕ ಹಾಕಿ ಅಲ್ಲಿ ವಿಜ್ಞಾನ ಪಿಯು ಕಾಲೇಜುಗಳ ವರ್ಗಗಳು ನಡೆದಿವೆ. ಪ್ರಥಮ ಪಿಯುಗೆ 80 ವಿದ್ಯಾರ್ಥಿಗಳು, ದ್ವಿತೀಯ ಪಿಯುಗೆ 70 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಅಲ್ಲದೇ, ವಿಜನ್ ಮಹಿಳಾ ಪಿಯು ಕಾಲೇಜು ಎಂಬ ನಾಮಫಲಕವೊಂದು ಎಪಿಎಂಸಿ ಎದುರು ಕಾಣುತ್ತದೆ.

‘ಎಲೈಟ್ ಹಾಗೂ ವಿಜನ್ ಮಹಿಳಾ ಪಿಯು ಕಾಲೇಜುಗಳ ಹೆಸರುಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ದಾಖಲೆಯಲ್ಲಿ ಇಲ್ಲ’ ಎಂದು ಇಲಾಖೆಯ ಉಪನಿರ್ದೇಶಕ ಜೆ.ಎಸ್.ಪೂಜಾರಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಚಿಕ್ಕಸಿಂದಗಿ ಗ್ರಾಮದಲ್ಲಿನ ಎಚ್.ಎಸ್.ಬಿರಾದಾರ ಪಿಯು ಕಾಲೇಜನ್ನು ಖರೀದಿಸಲಾಗಿದ್ದು, ಅದೇ ಕಾಲೇಜನ್ನು ಸಿಂದಗಿಯಲ್ಲಿ ನಡೆಸಲಾಗುತ್ತಿದೆ. ದಾಖಲೆಯಲ್ಲಿ ಎಚ್.ಎಸ್.ಬಿರಾದಾರ ಎಂದೇ ಇದೆ. ಆದರೆ, ಹೊರಗೆ ನಾಮಫಲಕ ಮಾತ್ರ ಎಲೈಟ್ ಅಂತ ಹಾಕಲಾಗಿದೆ. ಹೊಸ ಕಾಲೇಜು ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಆದರೆ, ಅದು ತಿರಸ್ಕೃತವಾಗಿದೆ ಎಂಬ ಮಾಹಿತಿ ‘ಪ್ರಜಾವಾಣಿ ಪ್ರತಿನಿಧಿ’ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲೈಟ್ ಕಾಲೇಜು ಮುಖ್ಯಸ್ಥ ಮಹಿಬೂಬ ಅಸಂತಾಪುರ ಅವರಿಂದ ಕೇಳಿ ಬಂದಿತು.

ಅಧಿಕೃತವಾಗಿ ಪಟ್ಟಣದಲ್ಲಿರುವುದು ಪದ್ಮರಾಜ ಮಹಿಳಾ ಪಿಯು ಕಾಲೇಜು ಒಂದೇ. ಆದರೆ, ವಿಜನ್ ಮಹಿಳಾ ಪಿಯು ಕಾಲೇಜು ಎಂಬ ಹೆಸರಿನಲ್ಲೂ ಪ್ರವೇಶ ಪಡೆಯುತ್ತಿರುವುದು ಕಂಡು ಬಂದಿದೆ. ನಾಮಫಲಕದಲ್ಲಿ ಈ ಕಾಲೇಜಿನ ಕೋಡ್ ಸಂಖ್ಯೆ ಇಇ283 ಎಂದಿದೆ. ಆದರೆ, ಈ ಕಾಲೇಜಿನ ಕೋಡ್ ಸಂಖ್ಯೆ ಅಬು ಪಿಯು ಕಾಲೇಜು ಅಂತ ಇದೆ.

‘ಇಂಥ ಪಿಯು ಕಾಲೇಜುಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು’ ಎಂಬುದು ಪಾಲಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT