ಮೊದಲ ದಿನವೇ ಇಬ್ಬರು ಡಿಬಾರ್‌

ಮಂಗಳವಾರ, ಮಾರ್ಚ್ 26, 2019
32 °C
ದ್ವಿತೀಯ ಪಿ.ಯು. ಪರೀಕ್ಷೆ ಆರಂಭ: ಒಟ್ಟು 470 ವಿದ್ಯಾರ್ಥಿಗಳು ಗೈರು

ಮೊದಲ ದಿನವೇ ಇಬ್ಬರು ಡಿಬಾರ್‌

Published:
Updated:
Prajavani

ರಾಮನಗರ: ಜಿಲ್ಲೆಯಾದ್ಯಂತ ಶುಕ್ರವಾರ ದ್ವಿತೀಯ ಪಿ.ಯು. ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನವೇ ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆದರು.

ಮಾಗಡಿಯ ಸರ್ಕಾರಿ ಪಿ.ಯು. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಭೌತವಿಜ್ಞಾನ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ಜಾಗೃತ ದಳವು ಪತ್ತೆ ಹಚ್ಚಿತು. ಅದೇ ಕೇಂದ್ರದಲ್ಲಿ ಅರ್ಥಶಾಸ್ತ್ರ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಖಾಸಗಿ ಅಭ್ಯರ್ಥಿಯೊಬ್ಬರನ್ನೂ ಡಿಬಾರ್ ಮಾಡಲಾಯಿತು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ದಿನದಂದು ಎರಡು ವಿಷಯಗಳ ಪರೀಕ್ಷೆಗಳು ನಡೆದವು. ಅರ್ಥಶಾಸ್ತ್ರ ಪರೀಕ್ಷೆಗೆ 413 ಹಾಗೂ ಭೌತವಿಜ್ಞಾನ ಪರೀಕ್ಷೆಗೆ 57 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಿತು. ಇದೇ ಮೊದಲ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರಶ್ನೆಪತ್ರಿಕೆ ರವಾನೆ ಮತ್ತು ವಿತರಣೆಯ ಪ್ರತಿ ಹಂತದಲ್ಲಿಯೂ ಅಧಿಕಾರಿಗಳು ಮತ್ತು ಜಾಗೃತಿ ದಳದ ತಂಡಗಳು ಕಣ್ಣಿಟ್ಟಿದ್ದವು. ಪರೀಕ್ಷಾ ಕೇಂದ್ರದ ಆವರಣಕ್ಕೆ ಪರೀಕ್ಷಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.

ಪೋಷಕರೂ ಹಾಜರ್‌: ಪರೀಕ್ಷೆಯ ಆತಂಕದಲ್ಲಿ ಇದ್ದ ವಿದ್ಯಾರ್ಥಿಗಳು ಒಂದು ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ನೋಟಿಸ್‌ ಫಲಕಗಳಲ್ಲಿ ತಮ್ಮ ನೋಂದಣಿ ಸಂಖ್ಯೆ ಹುಡುಕಿ, ಕೊಠಡಿ ಸಂಖ್ಯೆ ಗಮನಿಸಿಕೊಂಡರು. ಸಾಕಷ್ಟು ಮುಂಚಿತವಾಗಿಯೇ ಪರೀಕ್ಷಾ ಕೊಠಡಿಗಳ ಒಳಗೆ ತೆರಳಿದರು.

ಮಕ್ಕಳಿಗೆ ಧೈರ್ಯ ತುಂಬುವ ಸಲುವಾಗಿ ಬೆಳಗ್ಗೆ ಕೆಲವು ಪೋಷಕರೂ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಧೃತಿಗೆಡದೇ ಪರೀಕ್ಷೆ ಬರೆಯುವಂತೆ ಮಕ್ಕಳಿಗೆ ಕಿವಿಮಾತು ಹೇಳಿ ಬೀಳ್ಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !