ಐತಿಹಾಸಿಕ ಸೇತುವೆಗೆ ಬೇಕಿದೆ ದುರಸ್ತಿ ಭಾಗ್ಯ

7
ರಾಮನಗರ ವಿಸ್ತರಣೆಗೆ ನೆರವಾದ ಇದಕ್ಕಿದೆ ಎರಡು ಶತಮಾನಗಳ ಇತಿಹಾಸ

ಐತಿಹಾಸಿಕ ಸೇತುವೆಗೆ ಬೇಕಿದೆ ದುರಸ್ತಿ ಭಾಗ್ಯ

Published:
Updated:
Deccan Herald

ರಾಮನಗರ: ರಾಮನಗರಕ್ಕೆ ತನ್ನದೇ ಆದ ಇತಿಹಾಸವಿದೆ. ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗೂ ಸರಿಸುಮಾರು ಎರಡು ಶತಮಾನಗಳ ಆಯಸ್ಸು! ಆದರೀಗ ಈ ಸೇತುವೆಯು ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುತ್ತಿದೆ.

ಸೇತುವೆಯ ಮೇಲೆ ಗಿಡಗಂಟಿಗಳು ಬೆಳೆಯುತ್ತಿವೆ. ಇವು ದಿನ ಕಳದಂತೆಲ್ಲ ಸೇತುವೆಯನ್ನು ದುರ್ಬಲಗೊಳಿಸುತ್ತಿವೆ. ರಾಮನಗರದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಸೇತುವೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮುಂದಾಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

‘200 ವರ್ಷಗಳ ಹಿಂದೆ ಅರ್ಕಾವತಿ ನದಿ ಜೀವ ನದಿಯಾಗಿತ್ತು. ಸದಾ ಭೋರ್ಗರೆಯುತ್ತಿತ್ತು. ನಗರ ಮತ್ತು ಐಜೂರು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಸೇತುವೆ ನಿರ್ಮಾಣವಾಗಿದೆ’ ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ತಿಳಿಸಿದರು.

‘1801ರ ಸುಮಾರಿನಲ್ಲಿ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಈ ಭಾಗದ ದಿವಾನರಾಗಿದ್ದ ಬಕ್ಷಿ ಬಾಲಾಜಿ ರಾಯರು ಸೇತುವೆ ನಿರ್ಮಾಣದ ಕಾರಣಕರ್ತರು. 50 ವರ್ಷಗಳ ಹಿಂದೆ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ವಾಹನಗಳು ಇದೇ ಸೇತುವೆಯನ್ನು ಹಾದು ಹೋಗುತ್ತಿದ್ದವು. ನಂತರ ಅರ್ಕಾವತಿ ನದಿಗೆ ಬೇರೊಂದು ಸೇತುವೆಯನ್ನು ನಿರ್ಮಿಸಿದ್ದರಿಂದ ಈ ಸೇತುವೆಯ ಮೇಲೆ ಹೆದ್ದಾರಿ ವಾಹನಗಳ ಹೊರೆ ಕಡಿಮೆಯಾಗಿದೆ’ ಎಂದರು.

‘ನಗರ ಬೆಳೆದಂತೆಲ್ಲ ವಾಹನ ದಟ್ಟಣೆಯೂ ಹೆಚ್ಚಾಗಿದ್ದರಿಂದ ಸದರಿ ಸೇತುವೆಯನ್ನು ಐದಾರು ಅಡಿಗಳಷ್ಟು ವಿಸ್ತರಿಸಲಾಗಿದೆ. ಸದ್ಯ ಈ ಸೇತುವೆಯ ಪ್ಲಾಸ್ಟಿಂಗ್ ಬಿರುಕು ಬಿಟ್ಟುರುವ ಸ್ಥಳದಲ್ಲೆಲ್ಲ ಗಿಡಗಂಟಿಗಳು ಬೆಳೆದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆಯ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಸೇತುವೆಯನ್ನು ದುರಸ್ತಿಗೊಳಿಸಿ ಇತಿಹಾಸದ ಕುರುಹನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

‘ಊರಿನ ಹೃದಯ ಭಾಗದಲ್ಲಿ ಕಟ್ಟಲಾಗಿರುವ ಸೇತುವೆ ಇನ್ನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿದೆ. ‘ಸೇತುವೆ’ ಎಂಬ ಶಬ್ದಕ್ಕೆ ಒಂದು ವಿಶಿಷ್ಟ ರೂಪಕಾತ್ಮಕ ಅರ್ಥವಿದೆ’ ಎನ್ನುತ್ತಾರೆ ಸಾಹಿತಿ ಡಾ.ಎಲ್.ಸಿ. ರಾಜು.

ಪ್ರದೇಶ- ಪ್ರದೇಶಗಳ ನಡುವೆ ಸಂಪರ್ಕ ಮತ್ತು ಮನಸ್ಸು-ಮನಸ್ಸುಗಳ ಮಧ್ಯೆ ಬಾಂಧವ್ಯ ಬೆಸೆಯುವ ಪ್ರತೀಕವಾಗಿಯೂ ಈ ಪದಕ್ಕೆ ವಿಶೇಷ ಅರ್ಥ ಪ್ರಾಪ್ತವಾಗುತ್ತದೆ. ಅರ್ಕಾವತಿ ನದಿಯ ಒಂದು ದಂಡೆಯಲ್ಲಿ ಮಾತ್ರ ಸ್ಥಾಪಿತವಾಗಿದ್ದ ನಗರದ ಅಸ್ತಿತ್ವವನ್ನು ಮತ್ತೊಂದು ದಂಡೆಗೆ ವಿಸ್ತರಿಸಿದ್ದು ಮತ್ತು ಜನಜೀವನದಲ್ಲಿ ಪರಸ್ಪರ ಬಾಂಧವ್ಯವನ್ನು ರೂಪಿಸಿದ್ದು ಈ ಸೇತುವೆಯ ಹೆಗ್ಗಳಿಕೆ ಎಂದು ತಿಳಿಸಿದರು.

ಇಂದು ಅರ್ಕಾವತಿ ನದಿ ಕೊಳಚೆ ತುಂಬಿದ ಗಟಾರವಾಗಿದೆ. ಭಕ್ಷಿ ಬಾಲಾಜಿರಾಯರ ಗರ್ಭಿಣಿ ಸೊಸೆ ಪ್ರಾಣಾರ್ಪಣೆ ಮಾಡಿದ ಪ್ರತೀತಿ ಹೊಂದಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಶಿಥಿಲಗೊಂಡಿರುವ ಸೇತುವೆ ಮರು ಕಾಯಕಲ್ಪ ಒದಗಬೇಕು. ಇದು ಅನಿವಾರ್ಯವಾಗಿ ಆಗಬೇಕಾಗಿರುವ ದುರಸ್ತಿ ಕಾರ್ಯ ಎಂದರು.

**

ಭೋರ್ಗರೆಯುತ್ತಿದ್ದ ಅರ್ಕಾವತಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣವಾಯಿತು. ಇದರಿಂದ ನಗರ ಹಾಗೂ ಐಜೂರು ಭಾಗಕ್ಕೆ ಸಂಪರ್ಕ ಸಾಧ್ಯವಾಯಿತು
ಡಾ.ಎಂ.ಜಿ. ನಾಗರಾಜ್, ಹಿರಿಯ ಸಂಶೋಧಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !