ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರಕ್ಕೆ ಬೇಕಿದೆ ಕನ್ನಡ ಭವನ

ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾದ ಕಟ್ಟಡ ನಿರ್ಮಾಣಕ್ಕೆ ಜನರ ಒತ್ತಾಯ
Last Updated 4 ನವೆಂಬರ್ 2018, 19:45 IST
ಅಕ್ಷರ ಗಾತ್ರ

ರಾಮನಗರ: ರಾಮನಗರವು ಹಲವು ನೆಲೆಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಜಿಲ್ಲಾ ಕೇಂದ್ರವಾಗಿದೆ. ಆದಾಗ್ಯೂ ಇಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸುಸಜ್ಜಿತವಾದ ಕನ್ನಡ ಭವನ ನಿರ್ಮಾಣವಾಗಿಲ್ಲ.

‘ರಾಮನಗರದಲ್ಲಿ ವಿಭಿನ್ನ ಸಂಸ್ಕೃತಿಗಳಿರುವ ಜನವರ್ಗವಿದೆ. ತಮ್ಮ ವಿಶಿಷ್ಟ ಚಿಂತನಶೀಲತೆಯಿಂದ ನಾಡಿನ ಗಮನ ಸೆಳೆದಿರುವ ಸಾಹಿತಿಗಳ ಪರಂಪರೆ ಈ ಪ್ರದೇಶಕ್ಕಿದೆ. ಇಂಥ ನಗರದಲ್ಲಿ ಒಂದು ಕನ್ನಡ ಭವನ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂದು ಸಾಹಿತಿ ಡಾ.ಎಲ್.ಸಿ.ರಾಜು ವಿಷಾದ ವ್ಯಕ್ತಪಡಿಸುತ್ತಾರೆ.

‘ಈ ಪ್ರದೇಶದಲ್ಲಿ ವಿವಿಧ ಕಲೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಕಲಾವಿದರಿದ್ದಾರೆ. ಸಾಹಿತ್ಯ ಕೃಷಿ ನಡೆಸುತ್ತಿರುವ ಕ್ರಿಯಾಶೀಲ ಸಾಹಿತಿಗಳಿದ್ದಾರೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳನ್ನು ರಂಗಪ್ರದರ್ಶನಕ್ಕೆ ತರುವ ನಟರು ಮತ್ತು ನಿರ್ದೇಶಕರಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

‘ವಿವಿಧ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಮನಗರದ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಗುರುತರ ಕಾರ್ಯಗಳನ್ನು ಇಲ್ಲಿನ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮಾಡುತ್ತಾ ಬಂದಿದ್ದಾರೆ’ ಎಂದು ಸಾಂಸ್ಕೃತಿಕ ಸಂಘಟಕ ಎಂ. ಬೈರೇಗೌಡ ಹೇಳುತ್ತಾರೆ.

‘ನಗರಸಭೆಯ ಅಧೀನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಇಲ್ಲಿದೆಯಾದರೂ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರ್ಣಪ್ರಮಾಣದಲ್ಲಿ ಪೂರಕವಾಗಿರುವಂತೆ ಅದು ರೂಪುಗೊಂಡಿಲ್ಲ’ ಎನ್ನುವುದು ಅವರ ಆರೋಪ.

‘ಜತೆಗೆ ಅದೊಂದೇ ಕಟ್ಟಡದಲ್ಲಿ ಇಡೀ ಜಿಲ್ಲೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ರಾಮನಗರ ಜಿಲ್ಲಾ ಕೇಂದ್ರಕ್ಕೆ ಒಂದು ಸುಸಜ್ಜಿತವಾದ ಕನ್ನಡ ಭವನದ ಅಗತ್ಯವಿದೆ’ ಎನ್ನುತ್ತಾರೆ ಅವರು.

‘ಕನ್ನಡ ಭವನವನ್ನು ನಿರ್ಮಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇನ್ನಿತರ ಕನ್ನಡಪರ ಸಂಘಟನೆಗಳು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿವೆ’ ಎನ್ನುತ್ತಾರೆ ಸಾಂಸ್ಕೃತಿಕ ಸಂಘಟಕ ರಾ.ಬಿ. ನಾಗರಾಜ್.

‘ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸಿ ಅವುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸುತ್ತಲಿದ್ದರೂ ಇದುವರೆಗೂ ಕಾರ್ಯಾನುಷ್ಠಾನ ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈಗ ಇಲ್ಲಿನವರೇ ಆದ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ರಾಮನಗರವನ್ನು ತಮ್ಮ ತವರು ಕ್ಷೇತ್ರ ಎಂದೇ ಭಾವಿಸಿದ್ದಾರೆ. ಈ ನೆಲೆಯಿಂದ ಕನ್ನಡ ಭವನ ನಿರ್ಮಾಣಕ್ಕೆ ಇದು ನಿಜಕ್ಕೂ ಸಕಾಲವಾಗಿದೆ’ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್ ಅವರ ಅಭಿಪ್ರಾಯ.

‘ಜಿಲ್ಲಾಡಳಿತವು ತಕ್ಷಣವೇ ಕನ್ನಡ ಭವನ ನಿರ್ಮಿಸುವ ಹೊಣೆಯನ್ನು ವಹಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಕ್ರಿಯತೆಯಿಂದ ಶ್ರಮಿಸಬೇಕಾಗಿದೆ. ರಾಮನಗರದ ಜನತೆಯ ಬಹು ವರ್ಷಗಳ ಬೇಡಿಕೆಯನ್ನು ಈಗಲಾದರೂ ನೆರವೇರಿಸಲು ಮುಖ್ಯಮಂತ್ರಿಗಳು ಮತ್ತು ಜಿಲ್ಲಾಡಳಿತ ಮುಂದಾಗಬೇಕಾಗಿದೆ’ ಎಂದು ಸಾಂಸ್ಕೃತಿಕ ಸಂಘಟಕಿ ಕವಿತಾ ರಾವ್ ಒತ್ತಾಯಿಸುತ್ತಾರೆ.

* ₹ 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
–ಎಂ. ರಾಜು
ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ಜಿಲ್ಲಾ ಕೇಂದ್ರದಲ್ಲಿ ಈಗ ನಾಟಕ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ಅಂಬೇಡ್ಕರ್ ಭವನ, ಗುರುಭವನಗಳಿದ್ದರೂ ಪ್ರಯೋಜನವಿಲ್ಲ
–ರಾ.ಬಿ. ನಾಗರಾಜ್‌, ಸಾಂಸ್ಕೃತಿಕ ಸಂಘಟಕ

* ಸುಸಜ್ಜಿತವಾದ ಕಡಿಮೆ ಬಾಡಿಗೆ ದರದಲ್ಲಿ ಭವನ ನಿರ್ಮಾಣವಾದರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗುತ್ತದೆ
–ಬಿ.ಟಿ. ದಿನೇಶ್, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್‌

* ಕನ್ನಡ ರಾಜ್ಯೋತ್ಸವದ ಕೊಡಗೆಯಾಗಿಯಾದರೂ ರಾಮನಗರದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು
–ಎಂ. ಬೈರೇಗೌಡ, ಸಾಂಸ್ಕೃತಿಕ ಸಂಘಟಕ

* ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಸಂಘಸಂಸ್ಥೆಗಳಿವೆ. ಜಿಲ್ಲಾಡಳಿತ ಈಗಲಾದರೂ ಕೆಂಪೇಗೌಡ ಅಥವಾ ಕೆಂಗಲ್‌ ಹನುಮಂತಯ್ಯ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಲಿ
–ಕವಿತಾರಾವ್, ಸಾಂಸ್ಕೃತಿಕ ಸಂಘಟಕಿ

* ರಾಮನಗರ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತವಾದ ಕನ್ನಡ ಭವನ ಇಲ್ಲದಿರುವುದು ಈ ನಗರದ ಬಹು ದೊಡ್ಡ ಕೊರತೆಯಾಗಿದೆ
–ಎಲ್.ಸಿ. ರಾಜು, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT