ಭಾನುವಾರ, ಜನವರಿ 19, 2020
27 °C

21ಕ್ಕೆ ಸುಂದರೇಶ್, ಪುಟ್ಟಣ್ಣಯ್ಯ ನೆನಪಿನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಎನ್ಇಎಸ್ ಕಾಲೇಜು ಆವರಣದಲ್ಲಿ ಡಿ.21ರ ಬೆಳಿಗ್ಗೆ 11ಕ್ಕೆ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್‌, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ವಿಶ್ವವಾಣಿಜ್ಯ ಒಪ್ಪಂದ ಮತ್ತು ಆರ್‌ಸಿಇಪಿ ಒಪ್ಪಂದಗಳು ಭಾರತದ ಕೃಷಿ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿವೆ. ಬಗರ್‌ಹುಕುಂ ಸಮಸ್ಯೆಗಳು ತಾರ್ಕಿಕ ಅಂತ್ಯ ಕಾಣದೆ ರೈತರು ಪರಿತಪಿಸುತ್ತಿದ್ದಾರೆ. ಈ ಕುರಿತು ಅಂದು ಸುದೀರ್ಘ ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಕೆ.ಟಿ.ಗಂಗಾಧರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಾಲು ಉತ್ಪಾದಕ ಮಹಿಳೆಯರು ಕಾರ್ಯಕ್ರಮ ಉದ್ಘಾಟಿಸುವರು. ಕಾಟೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರೈತ ಗೀತೆ ಹಾಡುವರು. ಪ್ರಗತಿಪರ ಬರಹಗಾರ, ಚಿಂತಕ ಶಿವಸುಂದರ್ ಮತ್ತು ಮಹಿಳಾ ರೈತ ಮುಖಂಡರಾದ ನಂದಿನಿ ಜಯರಾಮ್ ಅವರು ಆರ್‌ಸಿಇಪಿ ಒಪ್ಪಂದದಿಂದ ಭಾರತದ ಕೃಷಿ ಮತ್ತು ಹೈನು ಉದ್ಯಮದ ಮೇಲಾಗುವ ಪರಿಣಾಮಗಳ ಕುರಿತು ವಿಷಯ ಮಂಡನೆ ಮಾಡುವರು ಎಂದು ವಿವರ ನೀಡಿದರು.

ವಿಶೇಷ ಆಹ್ವಾನಿತರಾಗಿ ಸುನಿತಾ ಪುಟ್ಟಣ್ಣಯ್ಯ, ಚುಕ್ಕಿ ನಂಜುಂಡಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಪಚ್ಚೆ ನಂಜುಂಡಸ್ವಾಮಿ, ಎನ್.ಎಸ್.ಸುಧಾಂಶು ಭಾಗವಹಿಸುವರು ಎಂದರು.

ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಆರ್‌ಸಿಇಪಿ ಒಪ್ಪಂದ ಕುರಿತು ಚರ್ಚಿಸಬೇಕು. ಸ್ಪಷ್ಟ ನಿಲುವು ಪ್ರಕಟಿಸಬೇಕು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ರೈತರ ಸಾಲ ಮನ್ನಾ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವೀರೇಶ್, ಯಶವಂತರಾವ್ ಘೋರ್ಪಡೆ, ಶರತ್‌ಚಂದ್ರ, ಮಂಜುನಾಥ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು