ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ, ಅಧಿಕಾರ ಬಲಕ್ಕಿಂತ ಬಿಜೆಪಿ ಶಕ್ತಿಯೇ ಅಧಿಕ

ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸಂದರ್ಶನ
Last Updated 27 ಅಕ್ಟೋಬರ್ 2018, 17:30 IST
ಅಕ್ಷರ ಗಾತ್ರ

ಶಿವಮೊಗ್ಗ:ಸಂವಿಧಾನದತ್ತವಾಗಿ ಉಪಚುನಾವಣೆ ನಡೆಯತ್ತಿದೆ. ಕಡಿಮೆ ಅವಧಿ ಇರುವ ಕಾರಣ ಚುನಾವಣೆ ಬೇಡ ಎನಿಸಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ, ಅನಿವಾರ್ಯ. ಎಲ್ಲ ಚುನಾವಣೆಗಳಂತೆ ಇದನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ.

ತಂದೆಯವರಾದ ಯಡಿಯೂರಪ್ಪ, ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 7 ಶಾಸಕರೂ, ವಿಧಾನ ಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಗಲು ಕೊಟ್ಟಿದ್ದಾರೆ. ಹಿಂದಿನ ಎರಡು ಚುನಾವಣೆಗಳ ರೀತಿ ಈ ಬಾರಿಯೂ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣವಿದೆ. 2009ರಲ್ಲಿ ನನ್ನನ್ನು, 2014ರಲ್ಲಿ ತಂದೆಯನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ ಮತದಾರರ ನಂಬಿಕೆ, ವಿಶ್ವಾಸ ಇಂದಿಗೂ ಸ್ವಲ್ಪವೂ ಕಡಿಮೆಯಾಗಿಲ್ಲ.

ದೇಶದ ಹಿತಾಸಕ್ತಿ, ಮೋದಿ ಅವರ ಕಾರ್ಯ ವೈಖರಿ, ನೆಲದ ಸಂಸ್ಕೃತಿ,ಜಾತಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದ ಯೋಜನೆಗಳು, ಮುಖ್ಯಮಂತ್ರಿಯಾಗಿ ತಂದೆ ಮಾಡಿದ್ದ ಒಳ್ಳೆಯ ಕೆಲಸಗಳು. ಸಂಸತ್ ಸದಸ್ಯರಾಗಿಜಿಲ್ಲೆಗೆ ತಂದ ಹತ್ತುಹಲವು ಸೌಲಭ್ಯಗಳು ಜನರ ಮನದಲ್ಲಿ ಬಿಜೆಪಿ ಹಾಗೂ ತಮ್ಮ ಮೇಲೆ ಉತ್ತಮ ಭಾವನೆ ಮೂಡಿಸಿವೆ. ಈ ಅಂಶಗಳೇ ಚುನಾವಣೆ ಎದುರಿಸಲು ಪ್ರೇರಣೆ, ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ.

–ಇದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಲೋಕಸಭಾ ಉಪಚುನಾವಣೆ ಕುರಿತು ವ್ಯಕ್ತಪಡಿಸಿದ ಅನಿಸಿಕೆ.

ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಸದಾ ಗೆಲುವಿನ ಅಲೆಯಲ್ಲೇ ತೇಲುತ್ತಿದ್ದ ಎಸ್. ಬಂಗಾರಪ್ಪ ಅವರನ್ನು 2009ರಲ್ಲಿ ಬಿ.ವೈ. ರಾಘವೇಂದ್ರ ಮಣಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಒಮ್ಮೆ ಸಂಸದರಾಗಿ, ಮತ್ತೊಮ್ಮೆ ಶಾಸಕರಾಗಿ ಅನುಭವವಿರುವ ಅವರು ‘ಪ್ರವಾವಾಣಿ’ಗೆ ನೀಡಿದ ಸಂದರ್ಶನದ ಭಾಗ ಇಲ್ಲಿದೆ.

* 2009 ಹಾಗೂ 2014ರ ಸ್ಥಿತಿ ಈಗ ಇದೆಯೇ?

– ಕ್ಷೇತ್ರದ ಎಲ್ಲೆಡೆ ಅದಕ್ಕಿಂತಲೂ ಉತ್ತಮ ಸ್ಥಿತಿ ಇದೆ. ಇದುವರೆಗೆ ನಡೆದ 17 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದಿದೆ. ಒಂದು ದಶಕದಿಂದ ಬಿಜೆಪಿ ಶಕ್ತಿ ಗಣನೀಯವಾಗಿ ವೃದ್ಧಿಸಿದೆ. ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಿದರೆ ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆ ಸಾಧ್ಯ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಇದೆ. ವಿಧಾನಸಭಾ ಚುನಾವಣೆಯಲ್ಲಿ 8 ಅಭ್ಯರ್ಥಿಗಳಲ್ಲಿ 7 ಬಿಜೆಪಿ ಶಾಸಕರು ಗೆದ್ದಿರುವುದು ಮತ್ತಷ್ಟು ಬಲ ತಂದಿದೆ.

* ಮೈತ್ರಿ ಸರ್ಕಾರ, ಮೈತ್ರಿ ಅಭ್ಯರ್ಥಿ ಸವಾಲಾಗಿದೆಯೇ?

– ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದರೂ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಹಣ, ಅಧಿಕಾರ, ತೋಳ್ಬಲ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಒಬ್ಬ ಅಭ್ಯರ್ಥಿ ಹುಡುಕಲು ಸಾಧ್ಯವಾಗಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಸಂಕಲ್ಪ ಮಾಡಿತ್ತು. ಈಗ ದೇವೇಗೌಡರು ಅಂತಹ ಸಂಕಲ್ಪ ಮಾಡಿರುವಂತೆ ಕಾಣುತ್ತಿದೆ.

* ಬಿಜೆಪಿಗೆ ಪೂರಕ ಅಂಶಗಳು ಯಾವುವು?

– ಜನಸಾಮಾನ್ಯರಿಗೆ ಕೇಂದ್ರ ರೂಪಿಸಿದ ನೂರಾರು ಯೋಜನೆಗಳು, ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು. ಲೋಕಸಭಾ ಕ್ಷೇತ್ರಕ್ಕೆ 10 ವರ್ಷಗಳಿಂದ ಆಗಿರುವ ಕೆಲಸಗಳು. 5 ತಿಂಗಳಿನಿಂದ ಸಂಪೂರ್ಣ ನಿಷ್ಕ್ರಿಯವಾಗಿರುವ ರಾಜ್ಯದ ಸಮ್ಮಿಶ್ರ ಸರ್ಕಾರ. ಎರಡೂ ಪಕ್ಷಗಳ ಆಂತರಿಕ ಕಿತ್ತಾಟ. ಜತೆಗೆ ರಾಷ್ಟ್ರೀಯ ಪಕ್ಷಗಳತ್ತ ಜನರು ಹೊಂದಿರುವಒಲವು.

* ಈ ಬಾರಿ ಜಾತ್ಯತೀತ ಮತಗಳು ಒಟ್ಟಾಗುತ್ತವಲ್ಲ?

– ಅವರದು ಡೋಂಗಿ ಜಾತ್ಯತೀತತೆ. ಧರ್ಮ, ಜಾತಿ, ಸಮಾಜ ಒಡೆಯುವುದೇ ಅವರ ಕೆಲಸ. ಹಾಗೆ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೆ ಪರಿಶಿಷ್ಟರು, ಹಿಂದುಳಿದವರ ಕಲ್ಯಾಣಕ್ಕೆ ಹಲವು ಯೋಜನೆ ರೂಪಿಸಿತ್ತು. ಕನಕ ಜಯಂತಿ, ವಾಲ್ಮಿಕಿ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿತ್ತು. ಹಲವು ಸಮಾಜಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸಿದ ಕೀರ್ತಿಯೂ ಬಿಜೆಪಿಗೆ ಸಲ್ಲುತ್ತದೆ. ಬಿಜೆಪಿಯೇ ನಿಜವಾದ ಜಾತ್ಯತೀತ ಪಕ್ಷ.

* ಈ ಚುನಾವಣೆಯಲ್ಲೂ ಹಿಂದುತ್ವಕ್ಕೆ ಪ್ರಾಮುಖ್ಯತೆಯೇ?

ಹುಟ್ಟಿದ ನೆಲ, ಬೆಳೆದ ಸಂಸ್ಕೃತಿ, ದೇಶಕ್ಕೆ ವಿದೇಯತೆ ತೋರುವುದು ನಿಜವಾದ ಹಿಂದುತ್ವ. ಈ ಚುನಾವಣೆ, ಆ ಚುನಾವಣೆ ಎಂಬ ಪ್ರಶ್ನೆಯೇ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುತ್ವದ ಬಗ್ಗೆ ಹಗುರ ಮಾತು ಆಡುತ್ತಾರೆ. ಹಿಂದುತ್ವ ಹೊಟ್ಟೆ ತುಂಬಿಸುತ್ತದೆಯೇ ಎಂದು ಉಡಾಫೆಯ ಪ್ರಶ್ನೆ ಕೇಳುತ್ತಾರೆ. ಮೋದಿ ಅವರಿಗೆ ಮುಸ್ಲಿಂ ರಾಷ್ಟ್ರಗಳೂ ಪ್ರಶಸ್ತಿ ನೀಡಿ ಗೌರವವಿಸಿವೆ. ಇದೆಲ್ಲ ಕಾಂಗ್ರೆಸ್–ಜೆಡಿಎಸ್ ಮುಖಂಡರಿಗೆ ತಿಳಿದಿಲ್ಲವೇ?

* ಮಾಜಿ ಸಿಎಂ ಪುತ್ರರಲ್ಲಿ ಯಾರು ಪ್ರಬಲರು?

–ಫಲಿತಾಂಶದ ನಂತರ ಉತ್ತರ ಸಿಗುತ್ತದೆ. ಜಿಲ್ಲೆಯ ನಾಲ್ವರು ಮುಖ್ಯಮಂತ್ರಿಗಳೂ ಒಳ್ಳೆಯ ಕೆಲಸ ಮಾಡಿದ್ದಾರೆ. ಈಡಿಗ ಸಮುದಾಯ ಬಿಜೆಪಿ ಜತೆಗಿದೆ. ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಸೇರಿದಂತೆ ಆ ಸಮಾಜದ ಎಲ್ಲ 6 ಶಾಸಕರು ಗೆದ್ದಿರುವುದು ಬಿಜೆಪಿಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT