ರಾಯಚೂರು: ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮಾಣಿಕನಗರದ ಮಾಣಿಕ ಪ್ರಭು ಶಿಕ್ಷಣ ಸಂಸ್ಥೆಯು ಸುಮಾರು 60 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿಕೊಂಡು ಬಂದಿದೆ. ವಿಶೇಷವಾಗಿ ರಾಯಚೂರು ಮತ್ತು ಬೀದರ್ ಜಿಲ್ಲೆಯಲ್ಲಿ ಅಂಧ ಮಕ್ಕಳಿಗೆ ವಿಶೇಷ ವಸತಿ ಶಾಲೆ ಆರಂಭಿಸಲಾಗಿದೆ. ರಾಯಚೂರಿನ ಮಾಣಿಕ ಪ್ರಭು ಮಂದಿರದ ಆವರಣದಲ್ಲಿ ಮಾಣಿಕ ಪ್ರಭು ಅಂಧ ಮಕ್ಕಳ ವಸತಿ ಶಾಲೆ( ಅಕಾಡೆಮಿ ಫಾರ್ ದಿ ಬ್ಲೈಂಡ್ ಇನ್ ಮೆಮೊರಿ ಆಫ್ ಸತ್ಯನಾರಾಯಣ ಜವಾರ) 8 ವರ್ಷಗಳ ಹಿಂದೆ ಆರಂಭಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ.
ಸದ್ಯ, ಈ ಅಂಧ ಮಕ್ಕಳ ವಸತಿ ಶಾಲೆ ಸ್ವಂತ ಸುಸಜ್ಜಿತ ಕಟ್ಟಡ ಹೊಂದಿದೆ. 1ರಿಂದ 10ನೇ ತರಗತಿಯವರೆಗೆ 60 ಅಂಧ ಮಕ್ಕಳು(ಬಾಲಕ–ಬಾಲಕಿಯರು ಸೇರಿ) ವ್ಯಾಸಂಗ ಮಾಡುತ್ತಿದ್ದಾರೆ. ಈ ಭಾಗದ ಅಂಧ ಮಕ್ಕಳ ಶಿಕ್ಷಣಕ್ಕೆ ಈ ಶಾಲೆ ವರದಾನವಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗೆ ಅಂಧ ಮಕ್ಕಳ ಪ್ರವೇಶಾತಿ ಹೆಚ್ಚಾಗುತ್ತಿದೆ. 9 ಜನ ಶಿಕ್ಷಕರು ಸೇರಿದಂತೆ ಒಟ್ಟು 17 ಜನ ಸಿಬ್ಬಂದಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿಯೇ ಧ್ವನಿವರ್ಧಕ ಆಧಾರಿತ ಶಾಲೆ: ರಾಜ್ಯದಲ್ಲಿಯೇ ಈ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆಯು ಧ್ವನಿವರ್ಧಕ ಆಧಾರಿತ ಪಠ್ಯ ಬೋಧನೆ (ಆಡಿಯೋ ಸಿಸ್ಟಮ್ ಎಜ್ಯುಕೇಷನ್) ಪದ್ಧತಿ ಅಳವಡಿಸಿಕೊಂಡಿರುವ ಶಾಲೆ ಎಂಬ ಹಿರಿಮೆ ಈ ಶಾಲೆಯದ್ದು. ನಗರದ ಜವಾಹರನಗರದಲ್ಲಿರುವ ಎಸ್ಬಿಎಚ್ ಬ್ಯಾಂಕ್ ಶಾಖೆಯು ಈ ಧ್ವನಿವರ್ಧಕ ವ್ಯವಸ್ಥೆ ಅಳವಡಿಸಿಕೊಟ್ಟಿದೆ. ಶಾಲೆ ಮತ್ತು ವಸತಿಯ ಪ್ರತಿ ಕೊಠಡಿಯಲ್ಲಿ ಈ ವ್ಯವಸ್ಥೆ ಇದೆ.
ಅಲ್ಲದೇ ರೇಡಿಯೊ ಪಾಠಗಳನ್ನು ಶಾಲೆಯಲ್ಲಿ, ವಸತಿ ಕೊಠಡಿಯಲ್ಲಿ ಕುಳಿತೇ ಮಕ್ಕಳು ಆಲಿಸಬಹುದು. ಅಂಥ ವ್ಯವಸ್ಥೆಯೂ ಇದೆ.
ಈಗ ಈ ಶಾಲೆಯಲ್ಲಿ 60 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 2014–15ನೇ ಶೈಕ್ಷಣಿಕ ವರ್ಷಕ್ಕೆ 25 ಅಂಧ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಶಾಲೆಯು ಅರ್ಜಿ ಆಹ್ವಾನಿಸಿದೆ. ಅಲ್ಲದೇ ಶಾಲೆಯ ಮುಖ್ಯಾಧ್ಯಾಪಕ ಕುಪೇಂದ್ರ ಹಾಗೂ ಅವರ ಶಿಕ್ಷಕ ಬಳಗವು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಅಂಧಮಕ್ಕಳನ್ನು ಗುರುತಿಸಿ, ಪಾಲಕರಿಗೆ ಮನವೊಲಿಸಿ ಶಾಲೆಗೆ ಕರೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಅಂಧ ಮಕ್ಕಳ ಶಾಲೆ ಇದೆ ಎಂದು ಹೇಳಿದರೆ ಸಾಲದು. ಮಕ್ಕಳಿಗೆ ಮನವೊಲಿಸಬೇಕು. ವಿಶ್ವಾಸ ಮೂಡಿಸಬೇಕು. ಶಾಲೆಯಲ್ಲಿ ವಸತಿ ವ್ಯವಸ್ಥೆ, ನಮ್ಮಲ್ಲಿರುವ ಶಿಕ್ಷಣ ಪದ್ಧತಿ, ಅವರ ಬಗ್ಗೆ ವಹಿಸುವ ಕಾಳಜಿ ಬಗ್ಗೆ ತಿಳಿಸಿ ಹೇಳಬೇಕು. ಅಂದಾಗ ನಮ್ಮ ಶಾಲೆಗೆ ಅಂಧಮಕ್ಕಳನ್ನು ಪಾಲಕರು ಸೇರಿಸುತ್ತಾರೆ. ಇಲ್ಲದೇ ಇದ್ದರೆ ಕಷ್ಟ. ಪ್ರಜ್ಞಾವಂತರು ಅಂಧ ಮಕ್ಕಳ ಪಾಲಕರಿಗೆ ಜಾಗೃತಿ ಮೂಡಿಸಬೇಕು. ‘ಅಂಧತ್ವ ಅಳಿಸಲು ಅಂಧ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ’ ಎಂದು ಮನವರಿಕೆ ಮಾಡಿಕೊಡಬೇಕಿದೆ ಎಂದು ಸ್ವತಃ ಅಂಧರೇ ಆಗಿರುವ ಶಾಲೆಯ ಮುಖ್ಯಾಧ್ಯಾಪಕ ವಿ.ಎಚ್ ಕುಪೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ನಮ್ಮ ಶಾಲೆಯಲ್ಲಿ ಈಗ 5 ಗಣಕ ಯಂತ್ರಗಳಿವೆ. ಗಣಕಯಂತ್ರ ತರಬೇತಿ ನೀಡಲಾಗುತ್ತಿದೆ. ಶಾಸಕ ಶಿವರಾಜ ಪಾಟೀಲ ಅವರೂ ಗಣಕ ಕಲ್ಪಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ರಾಯಚೂರು ನಗರಸಭೆಯು ನಮ್ಮ ಶಾಲೆಯ ಮಕ್ಕಳಿಗೆ ಊಟದ ಕೊಠಡಿಗೆ ₨ 10 ಲಕ್ಷ ಅನುದಾನ ಮಂಜೂರು ಮಾಡಿದೆ. ಜೂನ್ ತಿಂಗಳಾಂತ್ಯಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ. ಹೀಗೆ ಅನೇಕ ಸೌಕರ್ಯಗಳನ್ನು ಸಮಾಜ, ದಾನಿಗಳು ದೊರಕಿಸುತ್ತಿದ್ದಾರೆ. ಶಾಲೆಯ ಮಕ್ಕಳೂ ಪ್ರತಿಭೆ ಮೆರೆಯುತ್ತಿದ್ದಾರೆ. ಉತ್ತಮ ಶಿಕ್ಷಣ ದೊರಕುತ್ತಿದೆ. ಈ ಶಿಕ್ಷಣ ಇನ್ನೂ ಹೆಚ್ಚಿನ ಅಂಧ ಮಕ್ಕಳಿಗೆ ಲಭಿಸಬೇಕು ಎಂಬ ಆಶಯ ನಮ್ಮದಾಗಿದೆ. ಹೀಗಾಗಿ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಕುಪೇಂದ್ರ ವಿ.ಎಚ್, ಮುಖ್ಯಾಧ್ಯಾಪಕರು, ಮಾಣಿಕ ಪ್ರಭು ಅಂಧ ಮಕ್ಕಳ ವಸತಿ ಶಾಲೆ, ರಾಯಚೂರು. ಮೊ: 9448844418, ಕಚೇರಿ ದೂ: 08532–240131 ಮೂಲಕ ಸಂಪರ್ಕಿಸಬಹುದು.
ಮಕ್ಕಳಿಗೆ ಸೌಲಭ್ಯ
ಪ್ರವೇಶ ಪಡೆದ ಎಲ್ಲ ಅಂಧ ಮಕ್ಕಳಿಗೆ ಉಚಿತ ಊಟ–ವಸತಿ ನುರಿತ ಶಿಕ್ಷಕರಿಂದ ಬ್ರೈಲ್ ಲಿಪಿಯಲ್ಲಿ 1ರಿಂದ 10ನೇ ತರಗತಿವರೆಗೆ ಬೋಧನೆ ಸಂಗೀತ, ಚೆಸ್, ಕಬಡ್ಡಿ, ಕ್ರಿಕೆಟ್, ನೃತ್ಯದಂಥ ಕಲೆಯಲ್ಲೂ ಪ್ರೋತ್ಸಾಹ.
ಪ್ರವೇಶ ನಿಯಮಗಳು
ಪ್ರವೇಶ ಪಡೆಯುವ ಅಂಧ ಮಕ್ಕಳು 6ರಿಂದ 14 ವರ್ಷದವರಾಗಿರಬೇಕು
ಇತ್ತೀಚಿನ ಪಾಸ್ ಪೋರ್ಟ್ ಅಳತೆ 4 ಭಾವಚಿತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಅಂಗವಿಕಲರ ದೃಢೀಕರಣ ಪತ್ರ( ವೈದ್ಯರಿಂದ ದೃಢೀಕರಿಸಿದ್ದು)
ವಾಸಸ್ಥಳ ಪ್ರಮಾಣ ಪತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.