ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಿಲ್ಲೆಯಲ್ಲಿ 12.3 ಮಿಲಿ ಮೀಟರ್‌ ಮಳೆ

ಬಿರುಗಾಳಿಯಿಂದ ವಿವಿಧೆಡೆ ಜನಜೀವನ ಅಸ್ತವ್ಯಸ್ತ
Last Updated 7 ಜೂನ್ 2019, 13:11 IST
ಅಕ್ಷರ ಗಾತ್ರ

ರಾಯಚೂರು:ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿಯಲ್ಲಿ ಬಿರುಗಾಳಿ ಸಹಿತ, ಗುಡುಗು, ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ರೈತ ಸಮೂಹ ಸಂತಸದಲ್ಲಿ ಮುಳುಗಿದೆ. ಆದರೆ, ಬಿರುಗಾಳಿಯಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.

ರಾಯಚೂರು ತಾಲ್ಲೂಕಿನ ಕೊತ್ತದೊಡ್ಡಿಯಲ್ಲಿ ಗುಡಿಸಲು ಮುಂಭಾಗದಲ್ಲಿ ನಿರ್ಮಿಸಿಕೊಂಡಿದ್ದ ಗೋಡೆ ಕುಸಿದು ಎರಡು ಹಸುಳೆಗಳು ಹಾಗೂ ಓರ್ವ ವಯೋವೃದ್ಧೆ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಮೆಡಕುಂದಾದಿಂದ ಮಗಳು ಸುಜಾತಾಳನ್ನು ನೋಡಿಕೊಂಡು ಹೋಗಲು ಬಂದಿದ್ದ ಗೋವಿಂದಮ್ಮ (65) ಅವರು ಗೋಡೆ ಕುಸಿತದಲ್ಲಿ ಮೃತಪಟ್ಟಿದ್ದಾರೆ. ಶಿವಾನಿ ಹಾಗೂ ಮಲ್ಲಿಕಾರ್ಜುನ ಕಂದಮ್ಮಗಳು ಜೀವಬಿಟ್ಟಿವೆ.

ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು 19.1 ಮಿಲಿ ಮೀಟರ್‌ ಮಳೆ ಸುರಿದಿದೆ. ಅದರಲ್ಲೂ ಯರಮರಸ್‌ ಸುತ್ತಮುತ್ತ 79.5 ಮಿಲಿ ಮೀಟರ್‌ ಮಳೆಯಾಗಿದೆ. ಇದರಿಂದ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತುಕೊಂಡಿದ್ದು, ಭೂಮಿಯಲ್ಲಿ ತೇವಾಂಶ ತುಂಬಿದೆ. ಬಿತ್ತನೆ ಕಾರ್ಯ ಕೈಗೊಳ್ಳುವುದಕ್ಕೆ ಇದರಿಂದ ಸಾಧ್ಯವಾಗಲಿದೆ.

ದೇವಸುಗೂರು, ಕಲ್ಮಲಾ, ಗಿಲ್ಲೇಸಗೂರು ಸೇರಿದಂತೆ ತಾಲ್ಲೂಕಿನಾದ್ಯಂತ ಜೂನ್‌ ಆರಂಭದಲ್ಲಿ ಉತ್ತಮ ಮಳೆ ಬಿದ್ದಂತಾಗಿದೆ.

ಮಾನ್ವಿ ತಾಲ್ಲೂಕು ಹಾಗೂ ಸಿಂಧನೂರು ತಾಲ್ಲೂಕಿನಲ್ಲೂ ಕ್ರಮವಾಗಿ 14.9 ಹಾಗೂ 14.4 ಮಿಲಿ ಮೀಟರ್‌ ಮಳೆ ಸುರಿದಿದೆ. ಕವಿತಾಳ ಮತ್ತು ಮಸ್ಕಿ ಪಕ್ಕದ ಗ್ರಾಮಗಳಲ್ಲಿ ಕೆಲವು ಮನೆಗಳು ಕುಸಿದಿವೆ. ಟಿನ್‌ಶೆಡ್‌ಗಳು ಹಾರಿಹೋಗಿವೆ.

ಅತಿ ಕಡಿಮೆ ಮಳೆ 5.1 ಮಿಲಿ ಮೀಟರ್‌ ಲಿಂಗಸುಗೂರು ತಾಲ್ಲೂಕಿನಲ್ಲಿ ದಾಖಲಾಗಿದ್ದರೆ, ದೇವದುರ್ಗ ತಾಲ್ಲೂಕಿನಲ್ಲಿ 8.1 ಮಿಲಿ ಮೀಟರ್‌ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆ 1.8 ಮಿಲಿ ಮೀಟರ್‌ ಮಳೆ ಆಗಬೇಕಿತ್ತು. ಆದರೆ, ಜೂನ್‌ 7 ರವರೆಗೂ ವಾಡಿಕೆ ಮೀರಿ 12.3 ಮಿಲಿ ಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT