ಶೀಘ್ರದಲ್ಲೆ 13 ಓವರ್‌ ಟ್ಯಾಂಕ್‌ಗಳ ನಿರ್ಮಾಣ

7
ರಾಯಚೂರು ನಗರದಲ್ಲಿ ನಿರಂತರ ನೀರು ಪೂರೈಸಲು ಸಿದ್ಧತೆ

ಶೀಘ್ರದಲ್ಲೆ 13 ಓವರ್‌ ಟ್ಯಾಂಕ್‌ಗಳ ನಿರ್ಮಾಣ

Published:
Updated:
Prajavani

ರಾಯಚೂರು: ನಗರದಲ್ಲಿ 24/7 ನಿರಂತರ ನೀರು ಪೂರೈಸಲು ಪೂರ್ವಸಿದ್ಧತೆ ಮಾಡುವ ನಿಟ್ಟಿನಲ್ಲಿ ವಿವಿಧೆಡೆ ಹೊಸದಾಗಿ 13 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣಕ್ಕೆ ಬೇಕಾಗುವ ನಿವೇಶನ ಗುರುತಿಸಲಾಗಿದೆ. ಕೆಲವೆಡೆ ಶಿಥಿಲಗೊಂಡ ಟ್ಯಾಂಕ್‌ಗಳನ್ನು ನೆಲಸಮಗೊಳಿಸಿ ಮರು ನಿರ್ಮಾಣ ಮಾಡಲಾಗುತ್ತಿದೆ. ಅಮೃತ ಯೋಜನೆಯಡಿ ನಗರಸಭೆಯಿಂದ ಕ್ರಿಯಾಯೋಜನೆ ಮಾಡಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ.

ಸದ್ಯಕ್ಕೆ ನಗರದಲ್ಲಿ ದಿನ ಬಿಟ್ಟು ದಿನಕ್ಕೆ ನೀರು ಪೂರೈಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಒಂದು ಓವರ್‌ಹೆಡ್‌ ಟ್ಯಾಂಕ್‌ ಮೂಲಕ ಹಲವು ಬಡಾವಣೆಗಳಿಗೆ ವೇಳಾಪಟ್ಟಿ ಅನುಸಾರ ನೀರು ಪೂರೈಕೆ ಆಗುತ್ತಿದೆ. ಸದ್ಯಕ್ಕಿರುವ 15 ಓವರ್‌ಹೆಡ್‌ ಟ್ಯಾಂಕುಗಳಿಂದ ನಿರಂತರ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಶಿಥಿಲವಾಗಿರುವ ಏಳು ಓವರ್‌ಹೆಡ್‌ ಟ್ಯಾಂಕ್‌ಗಳು ಮತ್ತು ಹೊಸದಾಗಿ ಆರು ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಇನ್ನುಳಿದ ಎಂಟು ಓವರ್‌ಹೆಡ್‌ ಟ್ಯಾಂಕುಗಳನ್ನು ನವೀಕರಣಗೊಳಿಸಿ ನಿರಂತರ ನೀರು ಪೂರೈಕೆಗೆ ಅನುವು ಮಾಡಲಾಗುತ್ತಿದೆ. ನೀರು ಪೂರೈಸಲು ಮುಖ್ಯ ಪೈಪ್‌ಲೈನ್‌ ಅಳವಡಿಸುವ ಕೆಲಸ ಮುಗಿದಿದ್ದು, ಕೃಷ್ಣಾನದಿಯಿಂದ ನೀರು ಪೂರೈಸಲು ಎರಡು ಪಂಪ್‌ಸೆಟ್‌ ಪೈಕಿ ಒಂದನ್ನು ಅಳವಡಿಸಲಾಗಿದೆ. ಮುಖ್ಯ ಪೈಪ್‌ಲೈನ್‌ನಿಂದ ಮನೆಗಳಿಗೆ ನಲ್ಲಿಗಳನ್ನು ಸಂಪರ್ಕಿಸುವ ಕಾಮಗಾರಿಯಲ್ಲಿ ಕೆಲವು ಬಡಾವಣೆಗಳಲ್ಲಿ ಇನ್ನೂ ಬಾಕಿ ಇದೆ.

ಮುಗಿದ ಗಡುವು: ನಿರಂತರ ನೀರು ಪೂರೈಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಕಂಪೆನಿಗೆ 2018 ರ ಡಿಸೆಂಬರ್‌ ಗಡುವು ನೀಡಲಾಗಿತ್ತು. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಶೇ 80ರಷ್ಟು ಪೈಪ್‌ಲೈನ್‌ ಅಳವಡಿಕೆ ಮುಗಿದಿದ್ದು, ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಗುತ್ತಿಗೆದಾರ ಕಂಪೆನಿಗೆ ಸೂಚನೆ ರವಾನಿಸಿದ್ದಾರೆ.

’ಕಳೆದ ವರ್ಷ ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ರಾಯಚೂರು ನಗರದಲ್ಲಿ ನಿರಂತರ ನೀರು ಬರುತ್ತದೆ ಎಂದು ಪ್ರಚಾರ ಮಾಡಲಾಗಿತ್ತು. ಇವರೆಗೂ ನೀರು ಕೊಟ್ಟಿಲ್ಲ. ಅಧಿಕಾರಿಗಳು, ರಾಜಕಾರಣಿಗಳು ಇಬ್ಬರೂ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಯೋಜನೆಯಲ್ಲಿ ಸಮಸ್ಯೆ ಏನಾಗಿದೆ ಎಂಬುದು ಜನರಿಗೆ ಗೊತ್ತಿಲ್ಲ. ನೀರು ಕೊಡುವ ಕೆಲಸವನ್ನು ನಗರಸಭೆ ಮಾಡಬೇಕು’ ಎನ್ನುತ್ತಾರೆ ಮಹದೇವ ನಗರ ನಿವಾಸಿ ಪ್ರಕಾಶ್‌.

ಹೊಸ ಶುದ್ಧೀಕರಣ ಘಟಕಗಳು
ರಾಯಚೂರು ನಗರದಲ್ಲಿ ಮತ್ತೆ ಐದು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಸ್ಥಾಪಿಸಿರುವ ಘಟಕಗಳು ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿವೆ. ಹೀಗಾಗಿ ಪ್ರತಿಯೊಂದು ವಾರ್ಡ್‌ಗೆ ನೀರು ಶುದ್ಧೀಕರಣ ಘಟಕ ಆರಂಭಿಸಬೇಕೆನ್ನುವ ದೀರ್ಘಾವಧಿ ಯೊಜನೆಯನ್ನು ನಗರಸಭೆ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !