ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿದ 37 ಮದ್ಯದಂಗಡಿಗಳಿಗೆ ಬೀಗ

ಎಂಎಸ್‌ಐಎಲ್‌ ಮಳಿಗೆಗಳಿಗೆ ಮುಗಿ ಬೀಳುತ್ತಿರುವ ಮದ್ಯ ಖರೀದಿ ಗಿರಾಕಿಗಳು
Last Updated 3 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ರಾಯಚೂರು: ನಿಯಮ ಉಲ್ಲಂಘಿಸುತ್ತಿರುವ ಮದ್ಯದಂಗಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲೆಯ ಚುನಾವಣಾ ವೀಕ್ಷಕರು ನೀಡಿದ ಸೂಚನೆ ಅನುಸಾರ ಕ್ರಮ ಜರುಗಿಸಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು 37 ಮದ್ಯದಂಗಡಿಗಳಿಗೆ ನೋಟಿಸ್‌ ಕೊಟ್ಟು ಮಂಗಳವಾರ ಬೀಗ ಜಡಿದಿದ್ದಾರೆ!

ಪರವಾನಿಗೆ ನೀಡುವಾಗ ಮದ್ಯದಂಗಡಿಗಳಿಗೆ ಕೆಲವು ಷರತ್ತುಗಳನ್ನು ಇಲಾಖೆಯು ವಿಧಿಸಿರುತ್ತದೆ. ಈ ಪರವಾನಿಗೆಯಲ್ಲೂ ಹಲವು ಪ್ರಕಾರಗಳಿವೆ. ಮದ್ಯಮಾರಾಟಕ್ಕೆ ಮಾತ್ರ ಪರವಾನಿಗೆ ಪಡೆದವರು, ಗ್ರಾಹಕರು ಕುಳಿತು ಕುಡಿಯುವುದಕ್ಕೆ ಅವಕಾಶ ನೀಡಿದರೆ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಆಹಾರ ಪೂರೈಕೆಯೊಂದಿಗೆ ಮದ್ಯಮಾರಾಟಕ್ಕೆ ಅನುಮತಿ ಪಡೆದವರು ನಿಯಮಾನುಸಾರ ಕೆಲವು ಮೂಲ ಸೌಕರ್ಯಗಳನ್ನು ಹೊಂದಿರಬೇಕು. ಮೂಲ ಸೌಕರ್ಯ ಒದಗಿಸದಿದ್ದರೆ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಪ್ರಮುಖವಾದ ನಿಯಮಗಳಲ್ಲಿ ಒಂದಾದ, ಮದ್ಯವನ್ನು ಗರಿಷ್ಠ ಚಿಲ್ಲರೆ ದರ (ಎಂಆರ್‌ಪಿ)ದಲ್ಲಿ ಮಾರಾಟ ಮಾಡಬೇಕು. ಆದರೆ ಬಹುತೇಕ ಮದ್ಯದಂಗಡಿಗಳಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತದೆ ಎನ್ನುವ ದೂರುಗಳು ಅಬಕಾರಿ ಇಲಾಖೆಗೆ ಮೇಲಿಂದ ಮೇಲೆ ಸಲ್ಲಿಕೆ ಆಗುತ್ತವೆ.

ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು, ಎಂದಿನಂತೆ ದಂಡ ವಿಧಿಸಿ ಮತ್ತೆ ಪರವಾನಗಿ ನೀಡಲು ಸದ್ಯ ನಿರಾಕರಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳ ಸೂಚನೆಯನ್ನು ಪಾಲನೆ ಮಾಡಲಾಗುತ್ತಿದೆ. ಚುನಾವಣಾ ಪ್ರಕ್ರಿಯೆ ಮುಕ್ತಾಯದ ಬಳಿಕ ದಂಡ ವಿಧಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗುವುದು. ಎಲ್ಲಿಯಾದರೂ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೆ ಮತ್ತಷ್ಟು ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಲಾಗುವುದು ಎನ್ನುತ್ತಿದ್ದಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಬೀಗ ಜಡಿಯಲಾದ 37 ಮದ್ಯದಂಗಡಿಗಳ ಪೈಕಿ ರಾಯಚೂರು ತಾಲ್ಲೂಕಿನಲ್ಲಿಯೇ ಗರಿಷ್ಠ 18 ಮದ್ಯದಂಗಡಿಗಳು ಬಾಗಿಲು ಮುಚ್ಚಿಕೊಂಡಿವೆ. ಇದರಿಂದಾಗಿ ಎಂಎಸ್‌ಐಎಲ್‌ ಮಳಿಗೆಗಳಿಗೆ ಗಿರಾಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರಾಯಚೂರು ನಗರದ ರೈಲ್ವೆ ನಿಲ್ದಾಣ ಎದುರಿನ ಎಂಎಸ್‌ಐಎಲ್‌ ಬಳಿ ಪ್ರತಿದಿನ ಸಂಜೆ ಜನಜಂಗುಳಿ ನೆರೆಯುತ್ತಿದೆ. ಸರದಿಯಲ್ಲಿ ನಿಂತು ಜನರು ಮದ್ಯ ಖರೀದಿಸುತ್ತಿದ್ದಾರೆ. ಗೋಶಾಲಾ ರಸ್ತೆಯಲ್ಲಿ ಎಂಎಸ್‌ಐಎಲ್‌ ಮಳಿಗೆ ಬಳಿಯೂ ಜನಸಂದಣಿ ಏರ್ಪಡುತ್ತಿರುವುದನ್ನು ಕಾಣಬಹುದು.

ಜಿಲ್ಲೆಯಲ್ಲಿ ಒಟ್ಟು 217 ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ. ಅದರಲ್ಲಿ ಸದ್ಯ 180 ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟ ನಡೆಯುತ್ತಿದೆ. ಈಗ ಮದ್ಯ ಖರೀದಿಗೆ ಸಾಕಷ್ಟು ಬೇಡಿಕೆಯಿದ್ದರೂ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಪೂರೈಕೆ ಮಾಡುತ್ತಿಲ್ಲ. ಬಿಯರ್‌ ಮಾತ್ರ ಕಳೆದ ವರ್ಷಕ್ಕಿಂತ ಶೇ 10 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಸಿಂಧನೂರು ತಾಲ್ಲೂಕಿನಲ್ಲಿ ಅತಿಹೆಚ್ಚು 47 ಮದ್ಯದಂಗಡಿಗಳಿವೆ. ಮಾನ್ವಿ ತಾಲ್ಲೂಕಿನಲ್ಲಿ 38, ರಾಯಚೂರು ತಾಲ್ಲೂಕಿನಲ್ಲಿ 66, ದೇವದುರ್ಗ ತಾಲ್ಲೂಕಿನಲ್ಲಿ 24 ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ 42 ಮದ್ಯದಂಗಡಿಗಳಿಗೆ ಇಲಾಖೆಯಿಂದ ಪರವಾನಿಗೆ ನೀಡಲಾಗಿದೆ.

ಬೀಗ ಹಾಕಿದ ಅಂಗಡಿಗಳ ವಿವರ

ತಾಲ್ಲೂಕು ಅಂಗಡಿಗಳು

ರಾಯಚೂರು 18

ಮಾನ್ವಿ 7

ಸಿಂಧನೂರು 7

ಲಿಂಗಸುಗೂರು 5

ಒಟ್ಟು 37

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT