ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮತ್ತೆ 4 ಮಂದಿಗೆ ಕೋವಿಡ್‌

ಮಹಾರಾಷ್ಟ್ರದಿಂದ ಮರಳಿದವರ ಮೇಲೆ ಹೆಚ್ಚಿದ ನಿಗಾ
Last Updated 20 ಮೇ 2020, 13:55 IST
ಅಕ್ಷರ ಗಾತ್ರ

ರಾಯಚೂರು: ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ ವಲಸಿಗರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಬುಧವಾರ ಮತ್ತೆ ನಾಲ್ಕು ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

ಪಿ–1459 (ವಯಸ್ಸು 26), ಪಿ–1460 (ವಯಸ್ಸು 40), ಪಿ–1461 (ವಯಸ್ಸು 12), ಪಿ–1462 (ವಯಸ್ಸು 30) ಎಲ್ಲರೂ ಹೆಣ್ಣುಮಕ್ಕಳಾಗಿದ್ದು, ಮಹಾರಾಷ್ಟ್ರದ ಮುಂಬೈನಿಂದ ವಾಪಸಾಗಿದ್ದರು. ವಿವಿಧ ಕಡೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಿ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌ ದೃಢವಾದವರಲ್ಲಿ ಏಳು ಹೆಣ್ಣುಮಕ್ಕಳು ಮತ್ತು ನಾಲ್ಕು ಗಂಡಸರು ಇದ್ದಾರೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾದವರ ಸಂಖ್ಯೆಯು ಸುಮಾರು ಐದು ಸಾವಿರದಷ್ಟಿದೆ. ಅದರಲ್ಲೂ ಮುಂಬೈನಿಂದ ವಾಪಸಾಗಿರುವವರ ಸಂಖ್ಯೆ ಎರಡು ಸಾವಿರ ಮೇಲ್ಪಟ್ಟಿದೆ. ಎಲ್ಲರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕ್ವಾರಂಟೈನ್‌ ಕೇಂದ್ರದ ಸಿಬ್ಬಂದಿಯ ಕಣ್ಣುತಪ್ಪಿಸಿ ಕೆಲವರು ಮನೆಗಳಿಗೆ ಹೋಗಿ ಬರುತ್ತಿದ್ದಾರೆ. ಸಾಮಾನು ಸರಂಜಾಮಗಳನ್ನು ಮನೆಗೆ ಸಾಗಿಸಿದ್ದಾರೆ. ಕೆಲವರು ಸಂಬಂಧಿಗಳು ಭೇಟಿ ಮಾಡಿದ್ದಾರೆ. ಮೊದಲ ಬಾರಿ ಕೋವಿಡ್‌ ದೃಢವಾಗಿದ್ದ 6 ಜನರ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಮಾಹಿತಿಯನ್ನು ಕಲೆಹಾಕಿದಾಗ, ಇವೆಲ್ಲ ಅಂಶಗಳು ಬಹಿರಂಗವಾಗಿವೆ. ಇದೀಗ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಲಾಕ್‌ಡೌನ್‌ ಎರಡನೇ ಅವಧಿ ಮುಕ್ತಾಯ ಪೂರ್ವ ಬಂದಿರುವವರಲ್ಲಿ, ರೋಗದ ಲಕ್ಷಣಗಳು ಕಂಡು ಬಂದಿದ್ದವರಿಂದ ಮಾತ್ರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಗಳು ನೆಗೆಟಿವ್‌ ಬಂದಿದ್ದವು. ಮೇ 10 ರ ನಂತರ ಮುಂಬೈನಿಂದ ವಾಪಸಾದವರಲ್ಲಿ ಕೋವಿಡ್‌ ದೃಢವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.

ವರದಿಗಳು ಬರಬೇಕಿದೆ: ಜಿಲ್ಲೆಯಿಂದ ಇದೂವರೆಗೆ 5,280 ಜನರ ರಕ್ತ ಹಾಗೂ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅದರಲ್ಲಿ 3,533 ವರದಿಗಳು ನೆಗೆಟಿವ್ ಆಗಿದೆ. ಇನ್ನು 1,742 ಸ್ಯಾಂಪಲ್‌ಗಳ ವರದಿ ಬರಬೇಕಿದೆ.

ಕ್ವಾರಂಟೈನ್‌ ಕೇಂದ್ರಗಳು ಭರ್ತಿ: ಜಿಲ್ಲೆಗೆ ಹೊರರಾಜ್ಯಗಳಿಂದ ಬಂದಿರುವ 10,756 ಜನರನ್ನು ಇದುವರೆಗೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ರಾಯಚೂರು ತಾಲ್ಲೂಕಿನಲ್ಲಿ 4,933, ಸಿಂಧನೂರು ತಾಲ್ಲೂಕಿನಲ್ಲಿ 585, ಮಾನ್ವಿ ತಾಲ್ಲೂಕಿನಲ್ಲಿ 1,639, ದೇವದುರ್ಗ ತಾಲ್ಲೂಕಿನಲ್ಲಿ 1,791 ಹಾಗೂ ಲಿಂಗಸೂಗೂರು ತಾಲ್ಲೂಕಿನಲ್ಲಿ 873 ಜನರು ಸೇರಿದಂತೆ ೯,೮೨೧ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇರಿಸಲಾಗಿದೆ. 915 ಜನರನ್ನು ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT