ಬುಧವಾರ, ಜನವರಿ 19, 2022
26 °C

₹ 50 ಲಕ್ಷ ಪರಿಹಾರ ಘೋಷಣೆಗೆ ಆಗ್ರಹ, ಗಾಂಧಿ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ದೆಹಲಿ ಗಡಿಯಲ್ಲಿ ನಿರಂತರವಾಗಿ ನಡೆದ ರೈತರ ಹೋರಾಟದಲ್ಲಿ ಹುತಾತ್ಮರಾದ 700 ರೈತರ ಕುಟುಂಬಗಳಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು. ಬೆಳೆ ಹಾನಿ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು ಮತ್ತು ಬೆಲೆ ಖಾತ್ರಿ ಕಾನೂನುಬದ್ಧಗೊಳಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಶುಕ್ರವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿತು.

ಇಲ್ಲಿನ ಮಿನಿವಿಧಾನಸೌಧ ಆವರಣದಲ್ಲಿ ನೆರೆದಿದ್ದ ಹೋರಾಟ ಸಮಿತಿ ಮುಖಂಡರು, ರೈತರು ಏಕಾಏಕಿ ಗಾಂಧಿ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಸ್ತೆ ಸಂಚಾರ ತಡೆಯಿಂದ ರಾಯಚೂರು, ಗಂಗಾವತಿ ಮತ್ತು ಕುಷ್ಟಗಿ ಹೆದ್ದಾರಿಗಳಲ್ಲಿ ಒಂದುವರೆಗೆ ಕಿ.ಮೀ.ವರೆಗೆ ವಾಹನಗಳು ನಿಂತಿದ್ದರಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಂತರ ಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟಿಸುವಂತೆ ಹೋರಾಟಗಾರರ ಮನವೋಲಿಸಿದ ಪೊಲೀಸರು ಟ್ರಾಫಿಕ್ ಸುಗಮಗೊಳಿಸಲು ಹರಸಾಹಸಪಟ್ಟರು. ಇದೇ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕಾರಿನಿಂದ ಇಳಿದು ಬಂದು ಹೋರಾಟಕ್ಕೆ ಬೆಂಬಲಿಸಿ, ಕರಪತ್ರ ಪಡೆದು ತೆರಳಿದರು.

‘ರೈತರ ಉತ್ಪನ್ನಗಳಿಗೆ ಎಂಎಸ್‍ಪಿ ಕಾನೂನುಬದ್ಧಗೊಳಿಸಬೇಕು. ವಿದ್ಯುತ್ ಬಿಲ್ ಹಿಂಪಡೆಯಬೇಕು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಎಚ್ಚರಿಸಿದರು.

ಭತ್ತ, ಜೋಳ, ಕಡಲೆ, ಹತ್ತಿ, ತೊಗರಿ ಇತರೆ ಬೆಳೆ ಬೆಳೆದು ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ತಕ್ಷಣ ಎಕರೆಗೆ ₹ 50 ಸಾವಿರ ಪರಿಹಾರ ಕೊಡಬೇಕು. ಷರತ್ತಿಲ್ಲದೆ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸಿ 24 ಗಂಟೆಯೊಳಗೆ ರೈತರ ಖಾತೆಗೆ ಹಣ ಜಮಾಯಿಸಬೇಕು. ಕರ್ನಾಟಕ ಭೂ ಸುಧಾರಣೆ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಷುಮಿಯಾ, ಹೋರಾಟ ಸಮಿತಿ ಸಂಚಾಲಕ ಚಂದ್ರಶೇಖರ ಗೊರಬಾಳ, ಎಐಸಿಸಿಟಿಯು ಸಂಚಾಲಕ ನಾಗರಾಜ್ ಪೂಜಾರ್, ಸಮುದಾಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಕಾರ್ಮಿಕ ಮುಖಂಡ ಅಪ್ಪಣ್ಣ ಕಾಂಬಳೆ ಮಾತನಾಡಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಹೋರಾಟ ಸಮಿತಿ ಸದಸ್ಯರಾದ ಖಾದರ್‍ಸುಭಾನಿ, ಬಸವರಾಜ ಬಾದರ್ಲಿ, ರಾಮಯ್ಯ ಜವಳಗೇರಾ, ಶಿವರಾಜ ಸಾಸಲಮರಿ, ಮಂಜುನಾಥ ಗಾಂಧಿನಗರ, ಶಂಕರ್ ವಾಲೇಕಾರ್, ಯಂಕಪ್ಪ ಕೆಂಗಲ್, ಚಾಂದಪಾಷಾ ಜಾಗೀರದಾರ್, ಬಿ.ಲಿಂಗಪ್ಪ, ಶ್ರೀನಿವಾಸ ಬುಕ್ಕನಹಟ್ಟಿ, ಬಸವರಾಜ ಬೆಳಗುರ್ಕಿ, ಮಹೇಶ, ಶಿವರಾಜ ಉಪ್ಪಲದೊಡ್ಡಿ, ಶಿವಪುತ್ರ ತುರ್ವಿಹಾಳ, ಆರ್.ಎಚ್.ಕಲಮಂಗಿ, ವಿರುಪಮ್ಮ, ಮರಿಯಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು