ಸೋಮವಾರ, ಅಕ್ಟೋಬರ್ 26, 2020
23 °C

ಕಣ್ಮನ ಸೆಳೆಯುವ ಪಕ್ಷಿಗಳ ಗೂಡು

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ಸ್ಥಳೀಯ ಶಾಲಾ ಕಾಲೇಜು, ಕೆರೆ, ಹಳ್ಳ, ನಾಲಾ ಸೇರಿದಂತೆ ನದಿ ಪಾತ್ರದಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದ ವೈವಿಧ್ಯಮಯ ಪಕ್ಷಿಗಳ ಗೂಡುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಹದಿನೈದು ವರ್ಷಗಳಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷಿಗಳ  ಚಿಂವ್‍-ಚಿಂವ್ ಶಬ್ದದ ಕಲರವ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಪಕ್ಷಿಗಳನ್ನು ಮನೆ, ಶಾಲಾ ಕಾಲೇಜುಗಳತ್ತ ಸೆಳೆಯಲು ಜನರು ಕಾಳು ಹಾಕುವುದು, ಕುಡಿವ ನೀರಿನ ವ್ಯವಸ್ಥೆ ಮಾಡುತ್ತಿದ್ದರು.

ಪಟ್ಟಣ ಪ್ರದೇಶಗಳಲ್ಲಿ ಮೊಬೈಲ್‍ ಟಾವರ್ ಹಾವಳಿಯಿಂದ ಪಕ್ಷಿ ಸಂಕುಲ ನಶಿಸಿದೆ ಎಂಬ ಆರೋಪ ಕೇಳಿಬರುತ್ತಿದ್ದವು. ಆದರೆ, ಈ ವರ್ಷ ಪಟ್ಟಣದ ಗಿಡ–ಮರಗಳು, ಉದ್ಯಾನ, ಶಾಲಾ ಕಾಲೇಜುಗಳ ಹಸಿರುಮಯ ವಾತಾವರಣ ಇರುವಲ್ಲಿ ವೈವಿಧ್ಯಮಯ ಬಣ್ಣ ಬಣ್ಣದ ಗುಬ್ಬಚ್ಚಿಗಳು, ಕಾಗೆ ಇತರೆ ಪಕ್ಷಿಗಳ ಹಾರಾಟ, ಕಲರವ ಎಲ್ಲೆಡೆ ಕಾಣುವ ಜೊತೆಗೆ ಅವುಗಳ ಕಲರವನ್ನೂ ಕೇಳಲೂ ಬಹುದು.

ಪಕ್ಷಿಗಳು ಗಿಡ– ಮರಗಳ ಟೊಂಗೆಗಳ ತುತ್ತ ತುದಿಯಲ್ಲಿ ಹುಲ್ಲು ಕಟ್ಟಿ, ಸ್ಪಂಜು, ಹತ್ತಿಯಂತ ಮೆತ್ತನೆ ವಸ್ತುಗಳಿಂದ ವಿವಿಧ ಬಗೆ ಗೂಡುಗಳನ್ನು ಕಟ್ಟಿಕೊಳ್ಳುತ್ತಿರುವ ಕೌಶಲ ವೀಕ್ಷಣೆಗೆ ಪಕ್ಷಿ ಪ್ರಿಯರು ತಂಡೋಪ ತಂಡವಾಗಿ ಹೋಗುತ್ತಿದ್ದಾರೆ. ಶಾಲೆಗಳು ರಜೆ ಇರುವುದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಗೂಡು ನಿರ್ಮಿಸಿಕೊಳ್ಳುತ್ತಿರುವುದನ್ನು ವೀಕ್ಷಿಸಬಹುದಾಗಿದೆ.

‘ಕೆಂಬ್ರಿಡ್ಜ್‌ ಪ್ರಾಥಮಿಕ ಶಾಲೆ, ಪಿಬಿಎ ಕಾಲೇಜು, ಲಿಟಲ್‍ ಫ್ಲಾವರ್ ಸೇರಿದಂತೆ ಇತರೆ ಹಸಿರು ವಾತಾವರಣ ಹೊಂದಿರುವ ಶಾಲೆಯ ಆವರಣದ ಗಿಡ–ಮರಗಳಲ್ಲಿ ನೂರಾರು ಸಂಖ್ಯೆಯ ಪಕ್ಷಿಗಳು ಗೂಡುಗಳನ್ನು ನೋಡಬಹುದಾಗಿದೆ’ ಎಂದು ಪಕ್ಷಿಪ್ರಿಯ ಅಕ್ರಮಪಾಷ ಹರ್ಷ ಹಂಚಿಕೊಂಡಿದ್ದಾರೆ.

‘ಒಂದೂವರೆ ದಶಕಗಳ ಅವಧಿಯಲ್ಲಿ 500ಕ್ಕೂ ಹೆಚ್ಚು ವಿವಿಧ ಬಗೆಯ ಗಿಡ–ಮರ, ಹೂ ಬಳ್ಳಿ ಬೆಳೆಸಿದ್ದೇವೆ. ಪಕ್ಷಿಗಳು ಬೆರಳೆಣಿಕೆಯಷ್ಟು ಇರುತ್ತಿದ್ದವು. ಈ ವರ್ಷ ರಜೆಯಲ್ಲಿ ಮಕ್ಕಳಿಲ್ಲದೆ ಇರುವುದಕ್ಕೋ ಏನೊ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಕಾಣಸಿಗುತ್ತವೆ. ವಿವಿಧ ಬಗೆಯ ಗುಬ್ಬಚ್ಚಿ ಗೂಡು ಎಣೆದುಕೊಳ್ಳುತ್ತಿರುವ ಚಿತ್ರಣ ನೋಡುಗರ ಕಣ್ಮನ ಸೆಳೆಯುತ್ತಿರುವುದು ವಿಶೇಷ. ಪಕ್ಷಿಗಳ ಸಂರಕ್ಷಣೆಗೆ ಹೆಚ್ಚಿನ ಆಸಕ್ತಿ ವಹಿಸಿದ್ದೇವೆ’ ಎಂದು ಕೆಂಬ್ರಿಡ್ಜ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಗೌಡರ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.