ರಾಯಚೂರು: ಜಿಲ್ಲೆಯಲ್ಲಿ ದಟ್ಟ ಕಾಡು ಇಲ್ಲದಿದ್ದರೂ ಕೃಷ್ಣಮೃಗ, ಮುಳ್ಳುಹಂದಿ, ನರಿ, ತೋಳಗಳು ಇಲ್ಲಿಯ ಕುರಚಲು ಕಾಡಿನಲ್ಲಿ ನೆಲೆಯೂರಿವೆ. ಆಹಾರ ಅರಸಿ ಅಲ್ಲಲ್ಲಿ ಅಲೆದಾಡುತ್ತಿರುತ್ತವೆ. ಇವುಗಳ ಮಧ್ಯೆ ನಾಯಿಗಳ ದಾಳಿ ಹಾಗೂ ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಜೀವನ ಮರಣದ ಹೋರಾಟ ನಡೆಸುತ್ತಿರುವ ಕೃಷ್ಣ ಮೃಗಗಳಿಗೆ ಇಲ್ಲಿಯ ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಅರಣ್ಯ ಇಲಾಖೆಯ ರಾಯಚೂರು ವಲಯದಲ್ಲಿ ಇಲಾಖೆಯ ಸಿಬ್ಬಂದಿ ಮೂರು ತಿಂಗಳ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೂರು ಕೃಷ್ಣ ಮೃಗಗಳಿಗೆ ಉಪಚಾರ ಮಾಡಿ ಜೀವ ಉಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ರಾಯಚೂರು ತಾಲ್ಲೂಕಿನ ಗಟ್ಟಿಬಿಚ್ಚಾಲಿಯಲ್ಲಿ ಹಿಂಡಿನಿಂದ ತಪ್ಪಿಸಿಕೊಂಡು ನಾಯಿದಾಳಿಗೆ ಸಿಕ್ಕು ಗಾಯಗೊಂಡಿದ್ದ ಕೃಷ್ಣಮೃಗವನ್ನು ಗ್ರಾಮಸ್ಥರ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ತಿಳಿಸಿದ್ದರು. ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿಗೆ ಪಶು ವೈದ್ಯರಿಂದ ಕೃಷ್ಣಮೃಗಕ್ಕೆ ಚಿಕಿತ್ಸೆ ಕೊಡಿಸಿ ಜಾಗರೂಕತೆಯಿಂದ ವಾಹನದಲ್ಲಿ ತಂದು ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನದಲ್ಲಿರುವ ಕೇಂದ್ರದಲ್ಲಿ ಇಟ್ಟು ಉಪಚಾರ ಮಾಡಿದ್ದರು. ಒಂದು ತಿಂಗಳ ನಂತರ ಅದು ಚೇತರಿಸಿಕೊಂಡಿದೆ.
ರಾಯಚೂರು ತಾಲ್ಲೂಕಿನ ಸಾತಮೈಲ್ ಬಳಿ ಕೃಷ್ಣ ಮೃಗದ ಚಿಕ್ಕಮರಿಯೊಂದು ಹಿಂಡಿನಿಂದ ತಪ್ಪಿಸಿಕೊಂಡಿತ್ತು. ನಾಯಿಗಳ ಹಾವಳಿಯಿಂದ ದೊಡ್ಡ ಕೃಷ್ಣ ಮೃಗಗಳು ಓಡಿ ಹೋಗಿದ್ದವು. ಗ್ರಾಮಸ್ಥರು ಮರಿಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ಕಳೆದ ಜುಲೈ 31 ರಂದು ರಾಯಚೂರು ತಾಲ್ಲೂಕಿನ ಯರಮರಸ್ ಬಳಿ ರಸ್ತೆ ದಾಟುತ್ತಿದ್ದ ಕೃಷ್ಣ ಮೃಗಕ್ಕೆ ಅಪರಿತ ವಾಹನ ಡಿಕ್ಕಿ ಹೊಡೆದು ರಸ್ತೆ ಬದಿಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ದಾರಿಹೋಕರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸ್ ನಿಯಂತ್ರಣ ಕೊಠಡಿಯವರು ನೇರವಾಗಿ ಅರಣ್ಯ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಕೃಷ್ಣ ಮೃಗಕ್ಕೆ ಚಿಕಿತ್ಸೆ ಕೊಡುವಂತೆ ಕೋರಿದ್ದರು.
ವಾಹನ ಜೋರಾಗಿ ಗುದ್ದಿದ ಪರಿಣಾಮ ದೇಹ ಜಜ್ಜಿದಂತಾಗಿ ಕೃಷ್ಣಮೃಗ ಸಂಪೂರ್ಣ ಅಸ್ವಸ್ಥಗೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಜೀಪ್‌ನಲ್ಲಿ ಹಾಕಿಕೊಂಡು ಸಾಲು ಮರದ ತಿಮ್ಮಕ್ಕ ಉದ್ಯಾನಕ್ಕೆ ತಂದು ಆರೈಕೆ ಮಾಡಿದರು. ಮೊದಲ ದಿನ ಅದು ನೀರನ್ನೂ ಸೇವಿಸಿರಲಿಲ್ಲ. ಸಿಬ್ಬಂದಿ ಅದಕ್ಕೆ ಎಳನೀರು ಹಾಗೂ ಓಆರ್‌ಎಸ್ ಕೊಟ್ಟು, ಗಾಯಕ್ಕೆ ಔಷಧಿ ಹಚ್ಚಿ ಉಪಚರಿಸಿದರು. ಇದೀಗ ಅದು ಚಿಕಿತ್ಸೆಗೆ ಸ್ಪಂದಿಸ ತೊಡಗಿದೆ. ಈಗಲೂ ಅದಕ್ಕೆ ಸ್ವತಂತ್ರವಾಗಿ ಎದ್ದು ನಿಲ್ಲುವ ಶಕ್ತಿ ಇಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
‘ಉದ್ಯಾನಕ್ಕೆ ತಂದಿದ್ದಾಗ ಮೊದಲ ದಿನ ಕೃಷ್ಣ ಮೃಗಗಳು ಬಹಳ ಗಾಬರಿಗೊಂಡಿದ್ದವು. ಮೇವು ಕೊಟ್ಟು ಉಪಚಾರ ಮಾಡಿದ ನಂತರ ಅವುಗಳಿಗೆ ನಮ್ಮ ಮೇಲೆ ನಂಬಿಕೆ ಮೂಡಿತು. ಈಗ ನಮ್ಮೊಂದಿಗೆ ಬೆರೆತುಕೊಳ್ಳುತ್ತಿವೆ. ಹೊಸ ವ್ಯಕ್ತಿಗಳನ್ನು ನೋಡಿದರೆ ಮಾತ್ರ ಗಾಬರಿಕೊಳ್ಳುತ್ತವೆ‘ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಆಂಜನೇಯ ತಿಳಿಸಿದರು.
‘ಮೊದಲ ಬಾರಿಗೆ ರಾಯಚೂರಲ್ಲಿ ಈ ರೀತಿ ನಾಯಿ ದಾಳಿ ಹಾಗೂ ಅಪಘಾತದಲ್ಲಿ ಗಾಯಗೊಂಡಿದ್ದ ಕೃಷ್ಣಮೃಗಗಳಿಗೆ ಉಪಚಾರ ಮಾಡಿ ಬದುಕಿಸಿದ್ದೇವೆ. ವನ್ಯಜೀವಿಗಳ ಚಿಕಿತ್ಸೆಗೆಂದು ಪ್ರತ್ಯೇಕ ನಿಧಿ ಇರುವುದಿಲ್ಲ. ಆದರೆ, ನಮ್ಮ ಖರ್ಚಿನಲ್ಲಿ ಅದಕ್ಕೆ ಉಪಚಾರ ಮಾಡುತ್ತಿದ್ದೇವೆ. ಪೂರ್ಣ ಗುಣಮುಖವಾದ ನಂತರ ಕುರುಚಲು ಕಾಡಿನಲ್ಲಿ ಬಿಟ್ಟು ಬರುತ್ತವೆ‘ ಎಂದು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ರಾಜೇಶ ನಾಯಕ ಹೇಳಿದರು.
‘ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಈ ಮೊದಲು ಒಂದು ಚಿಕ್ಕ ಪ್ರಾಣಿ ಸಂಗ್ರಹಾಲಯವಿತ್ತು. ಉದ್ಯಾನದಲ್ಲಿ ಜಿಂಕೆಗಳೂ ಇದ್ದವು. ಮೃಗಾಲಯ ಪ್ರಾಧಿಕಾರ ರಚನೆಯಾದ ನಂತರ ಇಲ್ಲಿಯ ಪ್ರಾಣಿ ಸಂಗ್ರಹಾಲಯ ಮುಚ್ಚಿದೆ. ಆದರೆ, ತಂತಿಜಾಲರಿ ಬಡಿದ ಕೊಠಡಿಗಳು ಈಗಲೂ ಇದೆ. ಅದನ್ನು ವನ್ಯಜೀವಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಸಿಬ್ಬಂದಿ ಪ್ರೀತಿಯಿಂದ ವನ್ಯಜೀವಿಗಳ ಆರೈಕೆ ಮಾಡಿ ಅವು ಬಹುಬೇಗ ಗುಣಮುಖಗೊಳ್ಳುವಂತೆ ಮಾಡಿದ್ದಾರೆ‘ ಎಂದು ತಿಳಿಸಿದರು.
ಮೊದಲ ಬಾರಿಗೆ ರಾಯಚೂರಲ್ಲಿ ನಾಯಿ ದಾಳಿ ಹಾಗೂ ಅಪಘಾತದಲ್ಲಿ ಗಾಯಗೊಂಡಿದ್ದ ಕೃಷ್ಣಮೃಗಗಳಿಗೆ ಉಪಚಾರ ಮಾಡಿ ಬದುಕಿಸಿದ್ದೇವೆ.ಗುಣಮುಖವಾದ ನಂತರ ಕುರುಚಲು ಕಾಡಿನಲ್ಲಿ ಬಿಟ್ಟು ಬರುತ್ತೇವೆ.ರಾಜೇಶ ನಾಯಕ, ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.