ಶನಿವಾರ, ಜನವರಿ 28, 2023
15 °C
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಭೆ; ಜನಾರ್ದನರೆಡ್ಡಿ ವಾಗ್ದಾಳಿ

ಬೆನ್ನಿಗೆ ಚೂರಿ ಹಾಕಿದ ಬಿಜೆಪಿ: ಜನಾರ್ದನರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ನನ್ನ ಜೀವನದಲ್ಲಿ ಕಷ್ಟಪಟ್ಟು ದುಡಿದು ಈ ಹಂತಕ್ಕೆ ಬಂದಿದ್ದೇನೆ. ಆದರೆ ಪ್ರಾಮಾಣಿಕವಾಗಿ ದುಡಿದು ಅಧಿಕಾರಕ್ಕೆ ತಂದ ಬಿಜೆಪಿ ಪಕ್ಷ ಹಾಗೂ ನನ್ನ ಜೊತೆಯಲ್ಲೇ ಇದ್ದ ಕೆಲ ಸ್ನೇಹಿತರು ಕುತಂತ್ರ ರೂಪಿಸಿ ಬೆನ್ನಿಗೆ ಚೂರಿ ಹಾಕಿ ದ್ರೋಹ ಬಗೆದ್ದಾರೆ. ಆದರೀಗ ಜನರು ಕೈಕೊಡುವುದಿಲ್ಲವೆಂದು ನಂಬಿ ಹೊಸ ಪಕ್ಷ ಸ್ಥಾಪಿಸಿದ್ದೇನೆ. ಯಾವ ರಾಜಕಾರಣಿಯನ್ನೂ ನಂಬಿ ಅಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನರೆಡ್ಡಿ ಹೇಳಿದರು.

ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಶುಕ್ರವಾರ ನಡೆದ ಕಾರ್ಯಕರ್ತರ ಬೃಹತ್ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿ ಆಗತ್ತೇನೆಂಬ ಭಯದಿಂದ ಜೈಲಿಗೆ ತಳ್ಳಿದರು. ಆದರೆ 12 ವರ್ಷಗಳಿಂದ ನಾನು ಕೈಲಾಗದೆ ಕುಳಿತುಕೊಂಡಿಲ್ಲ. ನನ್ನ ಕೈಯಲ್ಲಿ ಎಲ್ಲವೂ ಆಗುತ್ತದೆ. ಅದು ನನಗೂ-ನಿಮಗೂ ಗೊತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದದ್ದು, ಉತ್ತರ ಕರ್ನಾಟಕದ 110 ಕ್ಷೇತ್ರಗಳಲ್ಲಿ 40 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು ನಾನು’ ಎಂದರು.

‘2018 ರಲ್ಲೇ ಪಕ್ಷ ಸ್ಥಾಪಿಸಲು ಕಾರ್ಯಯೋಜನೆ ಹಾಕಿಕೊಂಡಿದ್ದೆ. ಆಗ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಲು ಅಡ್ಡಿಯಾಗುತ್ತೇನೆಂಬ ದೃಷ್ಟಿಯಿಂದ ಹಿಂದೆ ಸರಿದೆ. ಈಗ ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ದಾಳಿ ನಡೆಸುವ ಭಯ ತೋರಿಸುತ್ತಿದೆ. ಆದರೆ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾದರೆ ನೂರು ಜನ್ಮ ಬೇಕು. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿದ ಹಿನ್ನೆಲೆಯಲ್ಲಿ ಇಂದು ಜನರ ಮುಂದೆ ಬಂದಿದ್ದೇನೆ. ಬೇರೆ ಹಣ ಆಗಿದ್ರೆ ಏನಾದ್ರೂ ಆಗಿ ಹೋಗುತ್ತಿದ್ದೆ’ ಎಂದು ಹೇಳಿದರು.

‘ನಾನಿಂದು ಒಬ್ಬಂಟಿಯಾಗಿಯೇ ಹೊಸ ಪಕ್ಷ ಕಟ್ಟಿದ್ದು, ರಾಜ್ಯದ ಆರು ಕೋಟಿ ಜನ ರೆಡ್ಡಿ ಜೊತೆ ನಾವಿದ್ದೇವೆಂದು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಇನ್ನೂ ನೂರು ದಿನಗಳಲ್ಲಿ ಕಲ್ಯಾಣ ಕರ್ನಾಟಕದ 13 ಜಿಲ್ಲೆ ಸೇರಿ ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರಗಳ ಪ್ರತಿ ಹಳ್ಳಿಯಲ್ಲಿಯೂ ಸಂಚರಿಸಿ ಪಕ್ಷ ಸಂಘಟಿಸಿ ಚುನಾವಣೆ ಕಣಕ್ಕಿಳಿಸಲಾಗು ವುದು’ ಎಂದು ತಿಳಿಸಿದರು.

ಸಿಂಧನೂರು ಆಕಾಂಕ್ಷಿ ಮಲ್ಲಿಕಾರ್ಜುನ ನೆಕ್ಕಂಟಿ ಮಾತನಾಡಿ ‘ಈ ಪಕ್ಷಕ್ಕೆ ಜನಾಶೀರ್ವಾದ ಮಾಡಿ ಜನಾರ್ಧನರೆಡ್ಡಿ ಅವರ ಕೈ ಬಲಪಡಿಸಿದರೆ ಸಿಂಧನೂರು ಮಾದರಿ ಕ್ಷೇತ್ರವಾಗಲಿದೆ’ ಎಂದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ, ತಾ.ಪಂ ಹಾಲಿ-ಮಾಜಿ 250 ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರಾದ ಶ್ರೀಕಾಂತ ಬಂಡಿ, ಅಮರೇಶ ನಾಯಕ ಲಿಂಗಸುಗೂರು, ಮಲ್ಲನಗೌಡ ನಾಗರಬೆಂಚಿ, ಬಸವರೆಡ್ಡಿ ಇದ್ದರು.

ಇದಕ್ಕೂ ಮುನ್ನ ಪಿಡಬ್ಲ್ಯುಡಿ ಕ್ಯಾಂಪಿನ ಅಂಬೇಡ್ಕರ್ ವೃತ್ತದಿಂದ ಸ್ತ್ರೀಶಕ್ತಿ ಭವನದವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಜೆಸಿಬಿ ಮೂಲಕ ಅಭಿಮಾನಿಗಳು ಬೃಹತ್‌ ಆಕಾರದ ಸೇಬಿನ ಹಾರ ಹಾಕಿ ಜನಾರ್ಧನರೆಡ್ಡಿ ಅವರನ್ನು ಭವ್ಯವಾಗಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು