ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್ ಗುತ್ತಿಗೆ ಪದ್ಧತಿ ರದ್ದುಪಡಿಸಿ: ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘ

ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪದಗ್ರಹಣ
Last Updated 14 ಜನವರಿ 2022, 11:41 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಬಹುತೇಕ ಇಲಾಖೆಗಳ ಕಾಮಗಾರಿಗಳನ್ನು ಪ್ಯಾಕೇಜ್‍ ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುತ್ತಿರುವ ಪದ್ಧತಿ ರದ್ದುಗೊಳಿಸಬೇಕು. ನಿಯಮಾನುಸಾರ ಟೆಂಡರ್ ಕರೆಯಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ನಾಗಪ್ಪ ಗಿರಣಿ ಒತ್ತಾಯಿಸಿದರು.

ಗುರುವಾರ ಪಿಡಬ್ಲ್ಯೂಡಿ ಗುತ್ತಿಗೆದಾರರ ತಾಲ್ಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ಯಾಕೇಜ್‍ ಪದ್ಧತಿಯಿಂದ ಬಹುತೇಕ ಕಾಮಗಾರಿಗಳು ರಾಜಕಾರಣಿಗಳ ಹಿಂಬಾಲಕರ ಪಾಲಾಗುತ್ತಿವೆ. ಲೈಸೆನ್ಸ್‌ ಹೊಂದಿರುವ ಗುತ್ತಿಗೆದಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಟೆಂಡರ್ ನಿಯಮ ಪಾಲನೆ ಮಾಡದೆ ಹೋಗಿದ್ದರಿಂದ ಲೈಸೆನ್ಸ್‌ ಗುತ್ತಿಗೆದಾರರು ಸಂಕಷ್ಟದ ಬದುಕು ನಡೆಸುವಂತಾಗಿದೆ. ಪ್ಯಾಕೇಜ್‍ ಗುತ್ತಿಗೆ ಪದ್ಧತಿಯಡಿ ಪರ್ಸೆಂಟೇಜ್‍ ರಾಜಕಾರಣ ತಾಂಡವವಾಡುತ್ತಿದೆ. ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಹಿಂಬಾಲಕರೆ ಕಾಮಗಾರಿ ಹಣ ದುರ್ಬಳಕೆಗೆ ಮುಂದಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ ಮಾತನಾಡಿ, ‘ಲೈಸೆನ್ಸ್‌ ರಿನಿವಲ್‍ ಮಾಡುವಲ್ಲಿ ಕೂಡ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಪ್ಯಾಕೇಜ್‍ ಗುತ್ತಿಗೆ ಪದ್ಧತಿ ಅನುಷ್ಠಾನದಿಂದ ಕೋಟ್ಯಂತರ ಹಣ ಲಪಟಾಯಿಸಲು ಅನುಕೂಲ ಆಗುತ್ತಿದೆ. ನಿಯಮಾನುಸಾರ ಟೆಂಡರ್‍ ಪ್ರಕ್ರಿಯೆ ನಡೆಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು’ ಎಂದರು.

ಜಿಲ್ಲಾ ಘಟಕ ಉಪಾಧ್ಯಕ್ಷ ಬಸಪ್ಪ ಕಂದಗಲ್ಲ. ತಾಲ್ಲೂಕು ಘಟಕ ಅಧ್ಯಕ್ಷ ಅಯ್ಯನಗೌಡ ಪಾಟೀಲ, ಗೌರವಾಧ್ಯಕ್ಷ ಬಸಣ್ಣ ಮೇಟಿ. ಮುಖಂಡರಾದ ಪಾಮಯ್ಯ ಮುರಾರಿ, ಶರಣಬಸವ ಮೇಟಿ, ಬಸವರಾಜ ಮರುಕಂದಿನ್ನಿ, ಲಿಂಗರಾಜ ಪಾಟೀಲ, ಸೂಗೂರಯ್ಯ ದಾಸೋಹ ಮಠ, ಶರಣಯ್ಯ ದಾಸೋಹಮಠ, ಗೋವಿಂದ ನಾಯಕ, ಬಲವಂತರಾಯ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT