ಲಿಂಗಸುಗೂರು: ಲಿಂಗಸುಗೂರಿಗೆ ಮಂಜೂರಾದ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದ ಬಹುತೇಕ ಉಪವಿಭಾಗ, ಉಪ ನಿರ್ದೇಶಕರ ಕಚೇರಿಗಳ ಸ್ಥಳಾಂತರದ ಬೆನ್ನಲೇ ಉಪ ವಿಭಾಗಾಧಿಕಾರಿ (ಎಸಿ) ಕಚೇರಿ ಸ್ಥಳಾಂತರವಾಗುತ್ತಿದೆ ಎಂಬ ಗುಮಾನಿ ನಾಗರಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಕೃಷಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಇಂದ್ರ ಎಂ. ಲಿಂಗಸುಗೂರು ಉಪ ಕೃಷಿ ನಿರ್ದೇಶಕರು-2 ಕಚೇರಿಯನ್ನು ಸಿಂಧನೂರಿಗೆ ಸಿಬ್ಬಂದಿ ಸಮೇತ ಸ್ಥಳಾಂತರಕ್ಕೆ ಆಗಸ್ಟ್ 19ರಂದು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಬೆನ್ನೆಲೆ ಉಪ ವಿಭಾಗ ಕಚೇರಿ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎರಡು ದಶಕಗಳ ಹಿಂದೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ (ಉಪ ವಿಭಾಗ) ಮಂಜೂರು ಆಗಿತ್ತು. ದಶಕದ ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿ ಲಿಂಗಸುಗೂರಿಗೆ ಮಂಜೂರಾತಿ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ಆದೇಶ ಮಾರ್ಪಾಡಾಗಿ ಸಿಂಧನೂರು ಹೆಸರಲ್ಲಿ ಆದೇಶವಾಗಿತ್ತು.
2024ರಲ್ಲಿ ಶಾಸಕ ಡಾ. ಶಿವರಾಜ ಪಾಟೀಲ ಪತ್ರ ಮುಂದಿಟ್ಟು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನಿಯಮಿತ ಪ್ರಸರಣ ಮಾರ್ಗ ಮತ್ತು ಉಪ ಕೇಂದ್ರಗಳ ವಿಭಾಗ (ಕೊಪ್ಪಳ-ರಾಯಚೂರು) ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ಸಂಚು ನಡೆದಿತ್ತು. ಆಗ ಎಚ್ಚೆತ್ತುಕೊಂಡ ಸಂಘ ಸಂಸ್ಥೆಗಳು, ಸ್ಥಳೀಯ ರಾಜಕಾರಣಿಗಳು ಇಲ್ಲಿಯೆ ಉಳಿಸಿಕೊಳ್ಳುವ ಹೋರಾಟ, ಮನವಿ ಕೇಳಿ ಬಂದವು.
ಆದರೆ ವಾಸ್ತವವಾಗಿ, ಪ್ರಸರಣ ವಲಯದ ಮುಖ್ಯ ಎಂಜಿನಿಯರ್ ಅವರು 2018 ಆಕ್ಟೋಬರ್ 6ರಂದು ಆಡಳಿತಾತ್ಮಕ ಹಿತದೃಷ್ಠಿಯಿಂದ ವಿಭಾಗೀಯ ಕಚೇರಿಯನ್ನು ಲಿಂಗಸುಗೂರದಿಂದ ಸಿಂಧನೂರಿಗೆ ಸ್ಥಳಾಂತರಿಸಲು ಶಿಫಾರಸು ಮಾಡಿದ್ದರು. ವ್ಯವಸ್ಥಾಪಕ ನಿರ್ದೇಶಕರು 2018 ಡಿಸೆಂಬರ್ 3ರಂದು ಸಿಬ್ಬಂದಿ ಸಮೇತ ಆಡಳಿತಾತ್ಮಕ ಅನುಕೂಲಕ್ಕೆ ಸ್ಥಳಾಂತರಕ್ಕೆ ಅನುಮೋದನೆ ನೀಡಿದ್ದಾರೆ.
ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ (ಉಪ ವಿಭಾಗ) ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಕೈಗೆ ಬಂದ ತುತ್ತು ಸಿಂಧನೂರು ರಾಜಕಾರಣ ಕಸಿದುಗೊಂಡಿದೆ. ವೀರಾವೇಷದ ಹೇಳಿಕೆ ನೀಡಿದ್ದ ರಾಜಕಾರಣಿಗಳು 2018 ಡಿಸೆಂಬರ್ 3ರಂದು ಅನುಮೋದಿಸಲ್ಪಟ್ಟ ಕೆಪಿಟಿಸಿಎಲ್ ಸ್ಥಳಾಂತರ ಆದೇಶ ಇಂದಿಗೂ ರದ್ದುಪಡಿಸಿ ಮರು ಆದೇಶ ಮಾಡಿರುವ ಪ್ರತಿ ಬಾರದಿರುವುದು ವಿಪರ್ಯಾಸವೇ ಸರಿ.
ಉಪ ವಿಭಾಗಾಧಿಕಾರಿ ಕಚೇರಿ ಇರುವ ಸ್ಥಳಗಳಲ್ಲಿ ಇತರೆ ಇಲಾಖೆಗಳ ಉಪ ವಿಭಾಗ, ಉಪ ನಿರ್ದೇಶಕರ ಕಚೇರಿಗಳು ಇರುವುದು ವಾಡಿಕೆ. ಆದರೆ, ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿ ಉಪ ಕೃಷಿ ನಿರ್ದೇಶಕರ ಕಚೇರಿ ಸ್ಥಳಾಂತರ ನಡೆಸಿರುವುದು ದಾಖಲೆಗಳಿಂದ ದೃಢಪಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಮಾತನಾಡಿ, ‘ಸ್ಥಳೀಯ ಹೊಂದಾಣಿಕೆ ರಾಜಕಾರಣ ಕ್ಷೇತ್ರವನ್ನು ದಿವಾಳಿಯತ್ತ ಕೊಂಡೊಯ್ದಿದೆ. ಈ ಮುಂಚೆ ಸ್ಥಳಾಂತರಗೊಂಡ ಕಚೇರಿಗಳು ಪುನಃ ಲಿಂಗಸುಗೂರಿಗೆ ಸ್ಥಳಾಂತರಿಸಬೇಕು. ಉಪ ವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಕೈಬಿಡುವ ಲಿಖಿತ ಭರವಸೆ ನೀಡುವವರೆಗೆ ಹೋರಾಟ ನಡೆಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಕಚೇರಿ ಸಿಂಧನೂರಿಗೆ ಸ್ಥಳಾಂತರ ಕುರಿತಾಗಿ ತಮ್ಮ ಕಚೇರಿಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಇಲ್ಲಿಂದ ಯಾವ ವರದಿಯು ಕಳುಹಿಸಿಲ್ಲ.–ಬಸವಣ್ಣೆಪ್ಪ ಕಲಶೆಟ್ಟಿ, ಉಪ ವಿಭಾಗಾಧಿಕಾರಿ ಲಿಂಗಸುಗೂರು
ಸ್ಥಳಾಂತರಕ್ಕೆ ಕಾರಣಗಳು
ಸಿಂಧನೂರದಿಂದ ಲಿಂಗಸುಗೂರು 90ಕಿ.ಮೀ ಅಂತರ ಸಿಂಧನೂರಲ್ಲಿ ಸಾಗುವಳಿ ಜಮೀನು 160150 ಹೆಕ್ಟೇರ್ ಗ್ರಾಮಗಳ ಸಂಖ್ಯೆ 174 ರೈತ ಸಂಪರ್ಕ ಕೇಂದ್ರ 174 ಸಸ್ಯ ಸಂರಕ್ಷಣಾ ಔಷಧಿ ಮಾರಾಟ ಮಳಿಗೆಗಳು 319 ಸಿಂಧನೂರು ಭಾಗಶಃ ನೀರಾವರಿ ಪ್ರದೇಶ ಮತ್ತು ಆದಾಯ ರಸಗೊಬ್ಬರ ಮಾರಾಟ ಮಳಿಗೆಗಳು 268 ಇತರೆ… ಸರ್ಕಾರಕ್ಕೆ ಭಾಗಶಃ ತಪ್ಪು ವರದಿ ಸಲ್ಲಿಕೆ ಹುನ್ನಾರ
ಸ್ಥಳಾಂತರ ರದ್ದತಿಗೆ ಕಾರಣಗಳು
ಲಿಂಗಸುಗೂರಲ್ಲಿ ಸಾಗುವಳಿ ಜಮೀನು 194010 ಹೆಕ್ಟರ್ ಏಕದಳ ದ್ವಿದಳ ಎಣ್ಣೆಕಾಳು ಬೇಸಾಯ ಪದ್ಧತಿಗೆ ಆದ್ಯತೆ ಮುಂಗಾರು ಹಿಂಗಾರು ಜೊತೆ ಬೇಸಿಗೆ ಮೂರು ಹಂತದ ಬೆಳೆ ಸಿರಿ ಧಾನ್ಯ ಬೆಳೆಯಲು ಅಂತರ್ ಬೇಸಾಯ ಪದ್ಧತಿಗೆ ಪ್ರೋತ್ಸಾಹ ಉಪ ವಿಭಾಗ ಕಚೇರಿ ಇರುವಲ್ಲಿ ಉಪ ನಿರ್ದೇಶಕರ ಕಚೇರಿ ಒಣಬೇಸಾಯ ಪ್ರದೇಶದಲ್ಲಿ ಕೃಷಿ ಇಲಾಖೆ ಕಾರ್ಯ ನಿರ್ವಹಿಸಬೇಕು ತರಬೇತಿಗೆ ಕೃಷಿ ವಿಶ್ವ ವಿದ್ಯಾಲಯದ ಕೃಷಿ ವಿಸ್ತರಣಾ ಘಟಕವಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.