ಗುರುವಾರ , ಡಿಸೆಂಬರ್ 5, 2019
24 °C
‘ಪ್ರಜಾವಾಣಿ’ ಫೋನ್-–ಇನ್ ಕಾರ್ಯಕ್ರಮದ ಫಲಶ್ರುತಿ

ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವದುರ್ಗ: ‌ನ.27ರಂದು ‘ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ’ ಎಂಬ ವಿಷಯ ಕುರಿತು ಪ್ರಜಾವಾಣಿ ನಡೆಸಿದ ಫೋನ್-ಇನ್ ಕಾರ್ಯಕ್ರಮದಿಂದ ದೇವದುರ್ಗ ತಾಲ್ಲೂಕಿನ ಕರಡಿಗುಡ್ಡ ಗ್ರಾಮಕ್ಕೆ ನ್ಯಾಯ ದೊರಕಿದಂತಾಗಿದೆ.

ಗಬ್ಬೂರು ಹೋಬಳಿಯ ಕರಡಿಗುಡ್ಡ ಗ್ರಾಮಕ್ಕೆ ಇದುವರಿಗೂ ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳ ಇಲ್ಲದೆ ವಿದ್ಯಾರ್ಥಿಗಳು ಗುಡಿಯಲ್ಲಿಯೇ ವಿದ್ಯಾಭ್ಯಾಸ ಮಾಡುವಂಥಹ ಪರಿಸ್ಥಿತಿ ಇತ್ತು.

ಗ್ರಾಮದಲ್ಲಿ ಸರ್ಕಾರಿ ಜಮೀನು ಇದ್ದರೂ ಅದನ್ನು ಮಂಜೂರು ಮಾಡಿಕೊಂಡು ಶಾಲೆ ನಿರ್ಮಾಣ ಮಾಡುವಂಥಹ ಮನೋಭಾವ ಯಾರೊಬ್ಬರಿಗೂ ಇರಲಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದ ಕಳೆದ ಬೇಸಿಗೆಯಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಜನರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶಾಲೆ ಇಲ್ಲ. ಶಾಲೆಗೆ ಸ್ಥಳ ಅವಕಾಶ ಮತ್ತು ತರಗತಿ ಕೋಣೆ ನಿರ್ಮಿಸಿದರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದೆ ಇದ್ದರೆ ಮತದಾನದಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಕೆ ನೀಡಲಾಗಿತ್ತು.  ನಂತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಭರವಸೆ ನೀಡಿದ್ದರು.

ಮಾದೀಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಶಾಂತಕುಮಾರ ಹೊನ್ನಟಿಗಿ ಅವರ ನೇತೃತ್ವದಲ್ಲಿ ಗ್ರಾಮದ ಮುಖಂಡರು, ಪಾಲಕರು ಪಾದಯಾತ್ರೆ ಮಾಡಿ ಮನವಿ ಪತ್ರ ಸಲ್ಲಿಸಿ  ಬಂದರೂ ಪ್ರಯೋಜನೆ ಆಗಿರಲಿಲ್ಲ.

ನ.27ರಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಭೋಧ್ ಯಾದವ್ ಅವರಿಂದ ‘ಪ್ರಜಾವಾಣಿ’ ನಡೆಸಿದ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾದೀಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಶಾಂತಕುಮಾರ ಹೊನ್ನಟಿಗಿ ಅವರು ದೂರವಾಣಿ ಕರೆ ಮಾಡಿ ಕರಡಿಗುಡ್ಡ ಗ್ರಾಮದ ಸಮಸ್ಯೆಯನ್ನು ಹೇಳಿಕೊಂಡಿದ್ದರು.

ಕಾರ್ಯದರ್ಶಿ ನೀಡಿದ ಭರವಸೆಯಂತೆ ಮರುದಿನದಿಂದಲೇ ಕರಡಿಗುಡ್ಡ ಗ್ರಾಮದ ಶಾಲೆಯ ಜಮೀನು ವಿಷಯಕ್ಕೆ ಸಂಬಂಧಿಸಿದ ಕಡತ ಜಿಲ್ಲಾಧಿಕಾರಿ ಕಚೇರಿಯ ಮೂಲಕ ತಹಶೀಲ್ದಾರ್ ಕಚೇರಿವರೆಗೂ ಬಂದಿದೆ. ನಂತರ ಗ್ರಾಮದದಲ್ಲಿನ ಸರ್ಕಾರಿ ಜಮೀನನ ಪೈಕಿ ಎರಡು ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು
ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಹೆಸರಿನಲ್ಲಿ ವರ್ಗಾಹಿಸಿ ಆದೇಶಿಸಿದ ನಂತರ ಇದರ ದಾಖಲಾತಿಗಳನ್ನು ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹತ್ತಿ ಅವರು ಮಂಗಳವಾರ
ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

ಗ್ರಾಮದಲ್ಲಿ ಶಾಲೆಗಾಗಿ ಎರಡು ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಕೂಡಲೇ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತರಗತಿ ಕೋಣೆ ಮತ್ತು ಇತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹತ್ತಿ ತಿಳಿಸಿದರು.

ಪ್ರತಿಕ್ರಿಯಿಸಿ (+)