ಆರೋಗ್ಯಕ್ಕಾಗಿ ಜೀವನ ಶೈಲಿ ಬದಲಾಯಿಸಿ: ಡಾ.ಬಗಾದಿ ಗೌತಮ್‌

7
ಒಪೆಕ್ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನಾಚರಣೆ

ಆರೋಗ್ಯಕ್ಕಾಗಿ ಜೀವನ ಶೈಲಿ ಬದಲಾಯಿಸಿ: ಡಾ.ಬಗಾದಿ ಗೌತಮ್‌

Published:
Updated:
Deccan Herald

ರಾಯಚೂರು: ಇತ್ತೀಚೆಗೆ ಹೃದಯ ರೋಗಗಳು ಹೆಚ್ಚಾಗುತ್ತಿವೆ. ಆರೋಗ್ಯವಂತ ಜೀವನ ಹೊಂದಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅಭಿಪ್ರಾಯಪಟ್ಟರು.

ನಗರದ ರಾಜೀವ ಗಾಂಧಿ ಸೂಪರ್ ಸ್ಪೇಷಾಲಿಟಿ ಒಪೆಕ್ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಹೃದಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹೃದಯ ರೋಗಗಳು ಹೆಚ್ಚಾಗುತ್ತಿರುವುದು ಕಳವಳದ ವಿಷಯ. ಅಕಾಲಿಕವಾಗಿ ಬರುವ ಹೃದಯದ ತೊಂದರೆಯಿಂದ ಸಾಮಾಜಿಕ ಮತ್ತು ಕೌಟುಂಬಿಕ ಹೊರೆಗಳು ಹೆಚ್ಚಾಗುತ್ತಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ವಿಷಯವನ್ನು ಮನಗಂಡು ‘ಆರೋಗ್ಯ ಕರ್ನಾಟಕ’ ಹಾಗೂ ‘ಆಯುಷ್ಮಾನ ಭಾರತ’ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಮೂಲಕ ಉಚಿತ ಚಿಕಿತ್ಸೆ ನೀಡುವುದಕ್ಕೆ ಯೋಜಿಸಲಾಗಿದೆ ಎಂದು ಹೇಳಿದರು.

ಒಪೆಕ್‌ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳಲ್ಲಿಯೂ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕು. ಹೃದಯ ರೋಗ ವಿಭಾಗದಲ್ಲಿ ದಾಖಲಾದ ಅಂಕಿ– ಅಂಶಗಳು ಉತ್ತಮವಾಗಿವೆ. ಜನರ ಆರೋಗ್ಯ ಕಾಪಾಡುವಲ್ಲಿ ಸಕ್ರಿಯತೆ ತೋರಿಸಬೇಕು ಎಂದು ತಿಳಿಸಿದರು.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಆಡಳಿತ ನಿರ್ದೇಶಕಿ ಡಾ. ಕವಿತಾ ಪಾಟೀಲ ಮಾತನಾಡಿ, ಹೃದಯ ರೋಗ ವಿಭಾಗಗಳಲ್ಲಿ ಒಳ್ಳೆಯ ಸೇವೆ ಒದಗಿಸಲಾಗುತ್ತಿದೆ. ಇದೇ ರೀತಿಯ ಸೇವೆ ಮುಂದುವರಿಯಲಿದ್ದು, ಜಿಲ್ಲೆಯ ಜನರಗೆ ಇನ್ನೂ ಉತ್ತಮ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಪ್ರಭಾರಿ ವಿಶೇಷಾಧಿಕಾರಿ ಡಾ.ಸುರೇಶ ಸಗರದ ಮಾತನಾಡಿ, ವಿಶ್ವ ಹೃದಯರೋಗ ದಿನಾಚರಣೆ ಆರಂಭವಾಗಿದ್ದು, ನಡೆದು ಬಂದಿರುವ ಮಾಹಿತಿಯನ್ನು ವಿವರಿಸಿದರು. ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಂಡು ಬಂದಾಗ ಜನರು ಮಾಡಬೇಕಿರುವ ಕ್ರಮಗಳ ಕುರಿತು ತಿಳಿಸಿದರು.

ಡಾ. ಸಂಪ್ರೀತಾ ಪ್ರಾರ್ಥಿಸಿದರು. ಡಾ.ಫಿಜಾ ಅಂಜುಮ್ ನಿರೂಪಿಸಿದರು. ಡಾ.ಗೋಪಿನಾಥ ಜಿವಿ ಸ್ವಾಗತಿಸಿದರು. ಡಾ.ಮುರುಳಿ ರಾವ್‌ ವಂದಿಸಿದರು.

ಭಾರತೀಯ ಚಿಕಿತ್ಸಕ ವೈದ್ಯರ ಸಂಘದ ಅಧ್ಯಕ್ಷ ಡಾ.ಮಹಾಲಿಂಗಪ್ಪ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಡಾ.ಶೈಲೇಶ ಅಮರಖೇಢ, ಡಾ.ಪ್ರದೀಪ ಕುಲಕರ್ಣಿ, ಡಾ.ವಿಜಯ ಮಹಾಂತೇಶ, ಡಾ.ನಾಗರಾಜ ಗದ್ವಾಲ, ಮತ್ತು ವಿಜಿಕೆ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಅಜಿತ ಕುಲಕರ್ಣಿ, ಹೈದರಾಬಾದ್‌ ಸ್ಟಾರ ಆಸ್ಪತ್ರೆಯ ಡಾ.ಹರ್ಷಾ, ಡಾ.ಅಮರಜೀತ್ ಪಾಟೀಲ, ಡಾ. ನಾಗರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !