ಶನಿವಾರ, ಮೇ 30, 2020
27 °C
ಜಿಲ್ಲೆಯಲ್ಲಿ ಆವರಿಸುತ್ತಿರುವ ಆತಂಕದ ಛಾಯೆ

ರಾಯಚೂರು: ಜಿಲ್ಲೆಯಲ್ಲಿ 10 ಪಾಜಿಟಿವ್‌ ಪ್ರಕರಣ, ಜನರು ತಲ್ಲಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಆರೋಗ್ಯ ಇಲಾಖೆಯು ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿದ ವರದಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮತ್ತೆ 10 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು ದಿಢೀರ್‌ ಎರಡಂಕಿ ಏರಿಕೆ ಆಗುತ್ತಿರುವುದಕ್ಕೆ ಜನರಲ್ಲಿ ಆತಂಕದ ಛಾಯೆ ಮನೆಮಾಡುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.

ಪಿ–1718 (ವಯಸ್ಸು 1), ಪಿ–1714 (ವಯಸ್ಸು 4) ಇಬ್ಬರು ಗಂಡು ಚಿಕ್ಕಮಕ್ಕಳಿಗೂ ಕೋವಿಡ್‌ ದೃಢಪಟ್ಟಿರುವುದು ಚಿಂತೆಗೀಡು ಮಾಡುವ ಸಂಗತಿಯಾಗಿದೆ. ಪಿ–1713 (ವಯಸ್ಸು 27), ಪಿ–1717 (ವಯಸ್ಸು 25), ಪಿ–1719 (ವಯಸ್ಸು 13), ಪಿ–1720 (ವಯಸ್ಸು 17), ಪಿ–1722 (ವಯಸ್ಸು 35) ಐದು ಮಂದಿ ಹೆಣ್ಣುಮಕ್ಕಳು ಹಾಗೂ ಪಿ–1715 (ವಯಸ್ಸು 15), ಪಿ–1716 (ವಯಸ್ಸು 20), ಪಿ– 1721 (ವಯಸ್ಸು 45) ಮೂವರು ಪುರುಷರ ಪಾಜಿಟಿವ್‌ ವರದಿ ಬಂದಿವೆ. 

ದೇವದುರ್ಗ ತಾಲ್ಲೂಕಿನ ಹೇಮನಾಳ ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರು, ಮದರಕಲ್‌ ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರು, ಮಸ್ತೇಪುರ ಕ್ವಾರಂಟೈನ್‌ ಕೇಂದ್ರದಲ್ಲಿ ಮೂವರು ಹಾಗೂ ಹೊನ್ನಟಗಿ ಕ್ವಾರಂಟೈನ್‌ ಕೇಂದ್ರದಲ್ಲಿ ಒಬ್ಬರು ಇದ್ದರು. ಎಲ್ಲರನ್ನು ಒಪೆಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೂ ಮಹಾರಾಷ್ಟ್ರದಿಂದ ಮರಳಿದ ಜನರಲ್ಲಿಯೇ ಕೋವಿಡ್‌ ದೃಢವಾಗುತ್ತಿರುವುದು ಗಮನಾರ್ಹ. ಮುನ್ನಚ್ಚರಿಕೆ ಕ್ರಮವಾಗಿ ಹೊರರಾಜ್ಯಗಳಿಂದ ಬಂದಿರುವವರನ್ನೆಲ್ಲ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ. ಕೋವಿಡ್‌ ದೃಢವಾದವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರೆಲ್ಲರೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರೇ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಯಾಂಪಲ್‌ಗಳ ಹೆಚ್ಚಳ: ಜಿಲ್ಲೆಯಿಂದ ಶುಕ್ರವಾರ ಒಂದೇ ದಿನ 1,134 ಜನರ ಗಂಟಲು ದ್ರವ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ. ದೇವದುರ್ಗ ತಾಲ್ಲೂಕಿನಿಂದ 115, ಲಿಂಗಸೂಗೂರು ತಾಲ್ಲೂಕಿನಿಂದ 96, ಮಾನ್ವಿ ತಾಲ್ಲೂಕಿನಿಂದ 230, ಸಿಂಧನೂರು ತಾಲ್ಲೂಕಿನಿಂದ 61 ಮತ್ತು ರಾಯಚೂರು ತಾಲ್ಲೂಕಿನಿಂದ 632 ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ 7,431 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 4,102 ವರದಿಗಳು ನೆಗೆಟಿವ್ ಆಗಿವೆ. ರೋಗ ಲಕ್ಷಣಗಳಿಲ್ಲದ ಕಾರಣ 6 ವರದಿಗಳು ತಿರಸ್ಕೃತಗೊಂಡಿವೆ ಮತ್ತು ಉಳಿದ 3,297 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.

ಫಿವರ್ ಕ್ಲಿನಿಕ್‌ಗಳಲ್ಲಿ ಶುಕ್ರವಾರ 562 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ರಾಯಚೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 5,107, ಸಿಂಧನೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 489, ಮಾನವಿ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,589, ದೇವದುರ್ಗ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,871 ಹಾಗೂ ಲಿಂಗಸೂಗೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,024 ಜನರು ಸೇರಿದಂತೆ 10,080 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇರಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 26 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು