ಸೋಮವಾರ, ಆಗಸ್ಟ್ 2, 2021
20 °C
ಎಂದಿನಂತೆ ಖಾಸಗಿ ವಾಹನಗಳ ಸಂಚಾರ ಆರಂಭ

ಲಾಕ್‌ಡೌನ್ ತೆರವು: ಮರಳುತ್ತಿದೆ ಸಹಜ ಜನಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಜನಜೀವನವು ಸೋಮವಾರದಿಂದ ಸಹಜತೆಯತ್ತ ಮರಳುತ್ತಿದೆ.

ಕಳೆದ ಮೂರು ತಿಂಗಳುಗಳಿಂದ ಬಾಗಿಲು ಹಾಕಿಕೊಂಡಿದ್ದ ಮಳಿಗೆಗಳೆಲ್ಲ ತೆರೆದುಕೊಂಡಿದ್ದವು. ಮೊಬೈಲ್‌ ಅಂಗಡಿಗಳು, ಎಲೆಕ್ಟ್ರಾನಿಕ್ಸ್‌ ಮಳಿಗೆ, ಹೋಟೆಲ್‌, ಪುಸ್ತಕ ಮಳಿಗೆ, ಸ್ಟೇಷನರಿ, ಬಟ್ಟೆ ಅಂಗಡಿಗಳು, ಚಿನ್ನದ ಅಂಗಡಿಗಳು, ಚಾಟ್ಸ್‌.. ಸ್ವೀಟ್ಸ್‌.. ಅನೇಕ ವ್ಯಾಪಾರಿಗಳು ಕೋವಿಡ್‌ ಆತಂಕದ ಮಧ್ಯೆಯೂ ವಹಿವಾಟು ಮತ್ತೆ ಆರಂಭವಾದ ಖುಷಿಯಲ್ಲಿದ್ದರು.

ವಿವಿಧ ಸರಕುಗಳನ್ನು ಖರೀದಿಸಲು ಕಾದು ಕುಳಿತಿದ್ದ ಜನರು ಸೋಮವಾರ ಧಾವಿಸಿ ಮಾರುಕಟ್ಟೆಯಲ್ಲಿ ಸೇರಿದ್ದರು. ಯಾವುದೇ ಅಂಗಡಿ ನೋಡಿದರೂ ಜನರು ಮುಗಿಬಿದ್ದಿರುವುದು ಕಂಡುಬಂತು. ಹಬ್ಬದ ದಿನಗಳಲ್ಲಿ ಕಾಣುತ್ತಿದ್ದ ಸಂತೋಷ ಜನರ ಮುಖದಲ್ಲಿತ್ತು.

ಬಸ್‌ ಸಂಚಾರ ಆರಂಭ: ಎನ್‌ಇಕೆಆರ್‌ಟಿಸಿ ರಾಯಚೂರು ವಿಭಾಗದಿಂದ ಸೋಮವಾರ ಬಸ್‌ ಸಂಚಾರ ಆರಂಭಿಸಲಾಗಿದೆ. ಮೊದಲ 75 ವೇಳಾಪಟ್ಟಿಗೆ ಅವಕಾಶ ನೀಡಲಾಗಿತ್ತು.

ಹೈದರಾಬಾದ್, ಗಂಗಾವತಿ, ಗದ್ವಾಲ್, ಕಲಬುರ್ಗಿ ಮಾರ್ಗಗಳಿಗೆ ಒಟ್ಟು 12 ಬಸ್ ಗಳು ತೆರಳಿದವು. ಮಂತ್ರಾಲಯ ಸೇರಿ ಇನ್ನಷ್ಟು ಮಾರ್ಗಕ್ಕೂ ಬಸ್ ಗಳು ಸಂಚರಿಸಲಿವೆ ಎಂದು ನಿಲ್ದಾಣದ ನಿಯಂತ್ರಕ ದೇವರೆಡ್ಡಿ ತಿಳಿಸಿದರು.

ಬಸ್ ಚಾಲಕರು ಹಾಗೂ ನಿರ್ವಾಹಕರು ಗ್ರಾಮೀಣ ಭಾಗಗಳಿಂದ ಬರಬೇಕಿದ್ದು, ಫೋನ್ ಮಾಡಿ ಕರೆಸುತ್ತಿದ್ದೇವೆ. ಐಟಿಪಿಸಿಆರ್ ತಪಾಸಣೆ ಮಾಡಿಕೊಂಡವರು ಹಾಗೂ ಲಸಿಕೆ ಪಡೆದವರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಲಾಗುತ್ತಿದೆ ಎಂದರು.

ಬಸ್‌ ಆರಂಭವಾಗುವ ಸುಳಿವು ಪಡೆದಿದ್ದ ಜನರು, ಬಸ್‌ ನಿಲ್ದಾಣದತ್ತ ಎಂದಿನಂತೆ ಬರುತ್ತಿರುವುದು ವಿಶೇಷ. ಲಾಕ್‌ಡೌನ್‌ ದಿನಗಳಲ್ಲಿ ಬೇರೆ ಬೇರೆ ಉರುಗಳಿಂದ ಬಂದವರು ವಾಪಸಾಗುತ್ತಿರುವುದು ಕಂಡುಬಂತು.

ಕೋವಿಡ್‌ ನಿಯಮ: ಕೊರೊನಾ ಎರಡನೇ ಅಲೆಯ ಇನ್ನೂ ಸಂಪೂರ್ಣ ತಗ್ಗಿಲ್ಲ. ಆದರೆ, ಲಾಕ್‌ಡೌನ್‌ ಸಡಿಲಿಕೆಯಿಂದ ಕೋವಿಡ್‌ ನಿಯಮ ಪಾಲನೆಯನ್ನು ಕೆಲವರು ಗಾಳಿಗೆ ತೂರಿರುವುದು ಕಂಡುಬಂತು. ಅನೇಕ ಜನರು ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು