ಭಾನುವಾರ, ಫೆಬ್ರವರಿ 23, 2020
19 °C
ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮನವಿ

ಒತ್ತಡದಲ್ಲಿ ಕಾರ್ಯ ನಿರ್ವಹಣೆ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷಿ ಇಲಾಖೆಯ ಕಾರ್ಯಕ್ರಮಗಳು ಸರ್ಕಾರದ ಆದ್ಯತಾ ಕಾರ್ಯಕ್ರಮಗಳಾಗಿದ್ದು, ಪ್ರತಿವರ್ಷವೂ ಅನುದಾನ ಮತ್ತು ಹೊಸ ಯೋಜನೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ದುರಾದೃಷ್ಟವಶಾತ್‌ ಖಾಲಿ ಹುದ್ದೆಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಇದರಿಂದ ಹಾಲಿ ಸಿಬ್ಬಂದಿ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಒಬ್ಬರೇ ಸಿಬ್ಬಂದಿ ನಾಲ್ಕು ಜನರು ಕೆಲಸ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ.

ಕೂಡಲೇ ಈ ಬಗ್ಗೆ ಗಮನಹರಿಸಿ ಒತ್ತಡ ಮುಕ್ತಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾಡಳಿತದ ಮೂಲಕ ಸರ್ಕಾರದ ಕಾರ್ಯದರ್ಶಿಗೆ ಬುಧವಾರ ಮನವಿ ಸಲ್ಲಿಸಿದರು.

ಹೋಬಳಿ ಮಟ್ಟದ ಕಚೇರಿಯಲ್ಲಿ ಗರಿಷ್ಠ ಮೂವರು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಹೋಬಳಿಮಟ್ಟದ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆಬೀಜ ಪೂರೈಕೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ಹನಿ ಮತ್ತು ತುಂತುರು ನೀರಾವರಿ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ, ರೈತ ಸಿರಿ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆ, ಶೂನ್ಯ ಬಂಡವಾಳ ಕೃಷಿ, ಪಿಎಂ ಕಿಸಾನ್‌ ಯೋಜನೆ, ಗುಣ ನಿಯಂತ್ರಣ ಕಾರ್ಯಕ್ರಮ, ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆ, ಬೆಳೆಹಾನಿ ಸಮೀಕ್ಷೆ, ಜಲಾನಯನ ಅಭಿವೃದ್ಧಿ ಇಲಾಖೆಯ ಯೋಜನೆಗಳು, ಉದ್ಯೋಗ ಖಾತರಿ ಯೋಜನೆ, ಜಲಾಮೃತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ 30 ವರ್ಷಗಳಿಂದ ಗ್ರಾಮ ಮಟ್ಟದಲ್ಲಿ ಇಲಾಖೆಯ ಕಾರ್ಯಕರ್ತರಿಲ್ಲ. ನೇಮಕಾತಿ ಮಾಡದೆ ಇದ್ದರೂ ಹಲವು ಯೋಜನೆಗಳನ್ನು ಕೃಷಿ ಇಲಾಖೆಯು ಜಾರಿಗೊಳಿಸುತ್ತಿದೆ. ತಾಲ್ಲೂಕು ಇಲಾಖೆಗಳಲ್ಲಿ ಶೇ 75 ರಷ್ಟು ಖಾಲಿ ಹುದ್ದೆಗಳಿದ್ದರೂ, ಲಭ್ಯವಿರುವ ಸಿಬ್ಬಂದಿ ಒತ್ತಡದ ಮಧ್ಯೆಯೂ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ವಿಪರೀತ ತೊಂದರೆಯಾಗಿದೆ. ಸ್ವಯಂ ನಿವೃತ್ತಿ ಪಡೆಯುವ ಅನಿವಾರ್ಯತೆ ಎದುರಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಗ್ರಾಮ ಪಂಚಾಯಿತಿಗೆ ಒಬ್ಬರನ್ನು ಕ್ಷೇತ್ರಮಟ್ಟದ ಅಧಿಕಾರಿಯನ್ನು ಕೃಷಿ ಇಲಾಖೆಯಿಂದ ನೇಮಕ ಮಾಡಬೇಕು. ಬೆಳೆ ಸಮೀಕ್ಷೆ ಯೋಜನೆಯನ್ನು ಕೃಷಿ ಇಲಾಖೆಯಿಂದ ತೆಗೆದುಹಾಕಬೇಕು. ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಭಾರವೂ ಕೃಷಿ ಇಲಾಖೆಯ ಮೇಲಿದೆ. ಇದರಿಂದ ರೈತರಿಂದ ನಿಂದನೆಗಳು, ಘೇರಾವ್‌ ಹಾಗೂ ಪ್ರತಿಭಟನೆಗಳನ್ನು ಎದುರಿಸಬೇಕಾಗಿದೆ. ಇದರ ಹೊರೆ ಕಡಿಮೆಗೊಳಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ಖರೀದಿ ಕೇಂದ್ರಗಳಲ್ಲಿ ಇಲಾಖೆಯ ಸಿಬ್ಬಂದಿಯನ್ನು ಗ್ರೇಡರ್‌ಗಳನ್ನಾಗಿ ನೇಮಿಸುವುದಕ್ಕೆ ತಪ್ಪಿಸಬೇಕು. ಕೃಷಿ ಮಾರುಕಟ್ಟೆ ಇಲಾಖೆಯಿಂದಲೇ ಅದನ್ನು ನಿರ್ವಹಿಸುವಂತೆ ಸೂಚನೆ ನೀಡಬೇಕು. ಬೆಳೆ ಕಟಾವು ಪ್ರಯೋಗಕ್ಕಾಗಿ ‘ಸಿ’ ದರ್ಜೆ ನೌಕರರನ್ನು ನೇಮಿಸಲಾಗುತ್ತಿದ್ದು, ಇದರಿಂದ ಸುಮಾರು 40 ಕಿಮೀ ಅಲೆದಾಡುವ ಪರಿಸ್ಥಿತಿ ಇದೆ. ಪಿಎಂ ಕಿಸಾನ್‌ ಯೋಜನೆಯಡಿ ಅನುದಾನ ಬರದೆ ಇದ್ದರೆ, ಕೃಷಿ ಇಲಾಖೆಯ ಸಿಬ್ಬಂದಿಯನ್ನೆ ಹೊಣೆಗಾರ ಮಾಡಲಾಗುತ್ತಿದೆ. ಇನ್ನೂ ಅನೇಕ ರೀತಿಯ ಮಾನಸಿಕ ಒತ್ತಡದಿಂದ ದೈಹಿಕವಾಗಿಯೂ ನೌಕರರು ಕ್ಷೀಣರಾಗುತ್ತಿದ್ದಾರೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಹಮಾನ ಜಾಲಿಹಾಳ, ಕರ್ನಾಟಕ ರಾಜ್ಯ ಸಹಾಯಕ ಕೃಷಿ ಅಧಿಕಾರಿಗಳ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ನಾಗರಡ್ಡಿ ಹಂಚಿನಾಳ, ಅಶ್ವಿನಿ ಜಿ., ಜಯಶ್ರೀ ವಸ್ತ್ರದ, ಶೋಭಾ, ರಶ್ಮಿ ಆರ್‌., ಅಶೋಕ, ರವಿಶಂಕರ ಸಿ. ರೆಡ್ಡಿ, ಆಕಾಶ ಡೊಣಿ, ನಾಗರಾಜ ಸಜ್ಜನ್‌, ರಂಗಪ್ಪ, ಬಸವರಾಜ ಪಾಟೀಲ, ಸಂಜಯಶೆಟ್ಟಿ ಸೇರಿದಂತೆ 48 ನೌಕರರು ಸಹಿ ಮಾಡಿ ಮನವಿ ರವಾನಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು