ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ವಿದ್ಯುತ್‌ ಸ್ವಾವಲಂಬನೆಯತ್ತ ಕೃಷಿ ವಿವಿ ಚಿತ್ತ

₹2.17 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಕೋರಿಕೆ
Last Updated 21 ಫೆಬ್ರುವರಿ 2020, 20:30 IST
ಅಕ್ಷರ ಗಾತ್ರ

ರಾಯಚೂರು: ಕ್ಯಾಂಪಸ್‌ನಲ್ಲಿ ಸೌರವಿದ್ಯುತ್‌ ಉತ್ಪಾದನೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸುವ ಯೋಜನೆಯೊಂದನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸಿದ್ಧಪಡಿಸಿದೆ.

ಕ್ಯಾಂಪಸ್‌ ಕಟ್ಟಡಗಳ ಮೇಲೆ ಸೋಲಾರ್‌ ತಟ್ಟೆಗಳನ್ನು ಅಳವಡಿಸಲು ಮಾಡಬೇಕಾಗುವ ವೆಚ್ಚದ ಅಂದಾಜು ತಯಾರಿಸಿಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಿ ಕ್ಯಾಂಪಸ್‌ನಲ್ಲಿ ಸೌರವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಒಟ್ಟು ₹2.17 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಈ ಮೊತ್ತವು ಸದ್ಯ ವಿಶ್ವವಿದ್ಯಾಲಯವು ಒಂದು ವರ್ಷಕ್ಕೆ ಕಟ್ಟುವ ಒಟ್ಟು ವಿದ್ಯುತ್‌ ಬಿಲ್‌ಗೆ ಸರಿಸಮ.

ವಿಶ್ವವಿದ್ಯಾಲಯದ ರಾಯಚೂರು ಮುಖ್ಯ ಕ್ಯಾಂಪಸ್, ಭೀಮರಾಯನಗಡಿ ಮತ್ತು ಕಲಬುರ್ಗಿ ಕೃಷಿ ಮಹಾವಿದ್ಯಾಲಯಗಳಲ್ಲಿ ಬಳಕೆ ಮಾಡುವ ವಿದ್ಯುತ್‌ಗೆ ಪ್ರತಿ ತಿಂಗಳು ₹20 ಲಕ್ಷ ಬಿಲ್‌ ಜೆಸ್ಕಾಂಗೆ ಕಟ್ಟಲಾಗುತ್ತಿದೆ. ಇದು ಒಂದು ವರ್ಷದಲ್ಲಿ ₹2.4 ಕೋಟಿ. ಸದ್ಯಕ್ಕೆ ಮುಖ್ಯ ಕ್ಯಾಂಪಸ್‌ನಲ್ಲಿ ಮಾತ್ರ ಸೌರವಿದ್ಯುತ್‌ ಅಳವಡಿಸಿಕೊಳ್ಳುವುದು ಯೋಜನೆ ಹಂತದಲ್ಲಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಾ ಇತ್ತೀಚಿನ ದಿನಗಳಲ್ಲಿ ಸೌರಶಕ್ತಿ, ಪವನಶಕ್ತಿ ಹಾಗೂ ಇನ್ನಿತರೆ ನವೀಕರಿಸಬಹುದಾದ ಶಕ್ತಿಯ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳಿಗೆ ಪ್ರೋತ್ಸಾಹ ಮಾಡುತ್ತಿದೆ. ಸೂರ್ಯನ ಬೆಳಕು ನವೀಕರಿಸಬಹುದಾದ ಶಕ್ತಿಯ ಮೂಲ. ಸೌರವಿದ್ಯುತ್‌ ಪಡೆಯುವುದು ನಿಸರ್ಗಸ್ನೇಹಿ ಕ್ರಮ. ಇದರಿಂದ ಪರೋಕ್ಷವಾಗಿ ನವೀಕರಿಸಲು ಸಾಧ್ಯವಾಗದ ಕಲ್ಲಿದ್ದಲು ಮತ್ತು ಪೆಟ್ರೊಲಿಯಂ ಇಂಧನದ ಉಳಿತಾಯ ಆಗುತ್ತದೆ.

‘ವಿಶ್ವವಿದ್ಯಾಲಯವು ಎಲ್ಲ ವಿಚಾರದಲ್ಲೂ ಮಾದರಿ ಆಗಿರಬೇಕು. ಸೌರವಿದ್ಯುತ್‌ ಅಳವಡಿಸಿದರೆ ದೀರ್ಘಾವಧಿಯಲ್ಲಿ ತುಂಬಾ ಅನುಕೂಲವಿದೆ. ಆದರೆ, ಅನುದಾನ ಒದಗಿಸುವವರ ಮನಸ್ಸಿನಲ್ಲಿ ಇದರ ಬಗ್ಗೆ ಆಸಕ್ತಿ ಬರಬೇಕಿದೆ. ಅನುದಾನ ಕೋರಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಬೇಡಿಕೆ ಸಲ್ಲಿಸಲಾಗಿತ್ತು. ಯಥಾಪ್ರಕಾರ ವಾಪಸ್‌ ಬಂದಿದೆ. ಯಾವುದೇ ಸ್ಪಂದನೆ ದೊರಕಲಿಲ್ಲ. ಈ ವರ್ಷ ರಾಜ್ಯ ಸರ್ಕಾರದಿಂದ ಅನುದಾನ ಕೊಡಬಹುದು ಎನ್ನುವ ಅಪೇಕ್ಷೆ ಇದೆ’ ಎಂದು ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT