ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿಧಾನ್ಯಗಳ ವರ್ಷ ಅಭಿಯಾನ ರಾಯಚೂರಿನಿಂದ’

ಗೋ ಪೂಜೆಯೊಂದಿಗೆ ‘ಸಿರಿಧಾನ್ಯ ಸಮಾವೇಶ–2022‘ ಆರಂಭ
Last Updated 26 ಆಗಸ್ಟ್ 2022, 14:20 IST
ಅಕ್ಷರ ಗಾತ್ರ

ರಾಯಚೂರು: ವಿಶ್ವಸಂಸ್ಥೆಯು 2023ನೇ ವರ್ಷವನ್ನು ’ಸಿರಿಧಾನ್ಯಗಳ ವರ್ಷ‘ವೆಂದು ಘೋಷಿಸಿದೆ. ಭಾರತದಲ್ಲಿ ಸಿರಿಧಾನ್ಯಗಳ ವರ್ಷ ಅಭಿಯಾನವು ರಾಯಚೂರಿನಿಂದ ಪ್ರಾರಂಭವಾಗುತ್ತಿರುವುದು ವಿಶೇಷವಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಹೇಳಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸಿರಿಧಾನ್ಯಗಳ ಸಮಾವೇಶ–2022’ವನ್ನು ಗೋ ಪೂಜೆಯೊಂದಿಗೆ ಉದ್ಘಾಟನೆ ನೆರವೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಶ್ವದ 63 ದೇಶಗಳು ಒಪ್ಪಿಕೊಂಡ ಬಳಿಕ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಅದರಲ್ಲಿ ಭಾರತವೂ ಒಂದಾಗಿದ್ದು, ಸಿರಿಧಾನ್ಯಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲು ಈ ಎಲ್ಲ ದೇಶಗಳು ಸಮ್ಮತಿಸಿವೆ. ಈ ಮೂಲಕ ದೇಶದಲ್ಲಿ ಅಪೌಷ್ಟಿಕತೆ ಹೊಗಲಾಡಿಸಿ, ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಸಿರಿಧಾನ್ಯಗಳ ಕ್ಷೇತ್ರ ವೃದ್ಧಿಗೆ, ಸಂಶೋಧನೆ, ಮಾರುಕಟ್ಟೆ ಮತ್ತು ರೈತರಿಗೆ ಪ್ರೋತ್ಸಾಹ ನೀಡುವುದಕ್ಕೆ ಸಿರಿಧಾನ್ಯಗಳ ಅಭಿಯಾನವು ಆಗಸ್ಟ್‌ 27 ರಂದು ಉದ್ಘಾಟನೆಯಾಗಲಿದೆ. ದೇಶದಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು ನಬಾರ್ಡ್‌ ಆರ್ಥಿಕ ನೆರವು ದೊರೆಯಲಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಆಗಮಿಸುತ್ತಿದ್ದು, ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿರುವ ತಜ್ಞರು ಮತ್ತು ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿರುವ ರೈತರನ್ನು ಕೂಡಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಿರಿಧಾನ್ಯಗಳ ಪ್ರದರ್ಶನದಲ್ಲಿ ಬೇರೆಬೇರೆ ರಾಜ್ಯಗಳ ಮಳಿಗೆಗಳು ಭಾಗವಹಿಸಿವೆ ಎಂದು ಹೇಳಿದರು.

ನಬಾರ್ಡ್‌ ಉಪ‍ಪ್ರಧಾನ ನಿರ್ದೇಶಕ ಪಿವಿಎಸ್‌ ಸೂರ್ಯಕುಮಾರ್‌ ಗೋಪೂಜೆ ನೆರವೇರಿಸುವ ಮೂಲಕ ಸಿರಿಧಾನ್ಯ ಸಮಾವೇಶವನ್ನು ಉದ್ಘಾಟಿಸಿದರು. ನಬಾರ್ಡ್‌ ಪ್ರಧಾನ ವ್ಯವಸ್ಥಾಪಕ ಸಿಎಸ್‌ಆರ್‌ ಮೂರ್ತಿ, ಪ್ರಧಾನ ವ್ಯವಸ್ಥಾಪಕ ಟಿ.ರಮೇಶ, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ಆಡಳಿತ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಬಿ.ಕೋರಿ, ಮಹಾಂತೇಶಗೌಡ ಪಾಟೀಲ, ಸುನೀಲಕುಮಾರ ವರ್ಮಾ, ತ್ರಿವಿಕ್ರಮ ಜೋಷಿ, ಬಿ.ಶ್ರೀಧರ ಕೆಸರಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT