ಮಂಗಳವಾರ, ನವೆಂಬರ್ 12, 2019
19 °C

ಕೃಷಿ ಇಲಾಖೆಯಿಂದ ಬೆಳೆ ಹಾನಿ ಸಮೀಕ್ಷೆ

Published:
Updated:
Prajavani

ಲಿಂಗಸುಗೂರು: ವಾರದ ಹಿಂದೆ ತಾಲ್ಲೂಕಿನಲ್ಲಿ ಉಂಟಾದ ಭಾರಿ ಪ್ರಮಾಣದ ಗಾಳಿ– ಮಳೆಗೆ ಹಾನಿಯಾದ ಭತ್ತ, ತೊಗರಿ ಬೆಳೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ್‌ ನೇತೃತ್ವ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಭತ್ತ, ತೊಗರಿ, ಸೇರಿದಂತೆ ಬಹುತೇಕ ಬೆಳೆಗಳು ಹಾನಿಯಾದ ಕುರಿತು ’ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದರ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಗೋನವಾಟ್ಲ, ಗುಂತಗೋಳ, ಕಾಳಾಪುರ, ಸೇರಿದಂತೆ ವಿವಿಧ ಗ್ರಾಮಗಳ ರೈತರ ಗದ್ದಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರ ಕಳೆದರು ರೈತರು ಇಲಾಖೆಗೆ ಮಾಹಿತಿ ನೀಡದಿರುವ ನೋವಿನ ಸಂಗತಿ. ರೈತರು ಇಲಾಖೆಗೆ ಎಲ್ಲ ರೀತಿಯ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದರು.

ರೈತರು ಹೊಸದಾಗಿ ಬಂದಿರುವ ಆರ್‌ಎನ್‌ಆರ್‌ ತಳಿ ಕಡಿಮೆ ಖರ್ಚು, ಹೆಚ್ಚಿನ ಇಳುವರಿ ಜೊತೆಗೆ ಮಾರುಕಟ್ಟೆ ಬೆಲೆ ಕೂಡ ಹೆಚ್ಚು ಸಿಗುವ ಆಸೆಯಿಂದ ನಾಟಿ ಮಾಡಿಕೊಂಡಿದ್ದೇವೆ. ಇತರೆ ತಳಿಗಳಿಗಿಂತ ತಿಂಗಳು ಮೊದಲು ಫಸಲು ಕೈಸೇರುತ್ತಿರುವಾಗ ಆಳೆತ್ತರ ಬೆಳೆದಿದ್ದ ಭತ್ತದ ಬೆಳೆ ಗಾಳಿ ಮಳೆಗೆ ನೆಲಕ್ಕುರುಳಿದೆ. ಇದರಿಂದ ಲಕ್ಷಾಂತರ ರೂಪಾಯಿ ಬೆಳೆನಷ್ಟವಾಗಿದೆ ಎಂದು ರೈತರು ಅಳಲುತೋಡಿಕೊಂಡರು.

ರೈತರ ಮೊಗದಲ್ಲಿ ಹರ್ಷ: ಗಾಳಿ, ಮಳೆಗೆ ನೆಲಕಚ್ಚಿದ, ಅತಿಯಾದ ಮಳೆಯಿಂದ ತಂಪಿಗೆ ಸಿಡಿಹಾಯ್ದ ತೊಗರಿ ಬೆಳೆನಷ್ಟದಿಂದ ಕಂಗಾಲಾಗಿದ್ದ ರೈತರು ಏಕಾ ಏಕಿ ಕೃಷಿ ಅಧಿಕಾರಿಗಳ ತಂಡ ಗದ್ದಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದಕ್ಕೆ ಹರ್ಷಗೊಂಡಿದ್ದು ಕಂಡು ಬಂದಿತು. ಕೃಷ್ಣಾ ಪ್ರವಾಹ, ಸತತ ಬರಗಾಲದ ಬೆಳೆನಷ್ಟ ಪರಿಹಾರ ನೀಡದಕ್ಕೆ ತಾವು ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ರೈತರು ಹೇಳಿಕೊಂಡರು.

‘ಭತ್ತ ನೆಲಕಚ್ಚಿರುವುದು ಹಾಗೂ ತೊಗರಿ ಅತಿ ತೇವಾಂಶದಿಂದ ಸಿಡಿಹಾಯ್ದ ಹಾಗೂ ಇತರೆ ಬೆಳೆಗಳ ನಷ್ಟದ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜೊತೆಯಾಗಿ ಸರ್ವೆ ಮಾಡುತ್ತೇವೆ. ವಾಸ್ತವಾಂಶದ ವರದಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಬೆಳೆ ನಷ್ಟ ಕುರಿತು ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ್‌ ತಿಳಿಸಿದರು.

‘ರೈತರು ಕೂಡ ಅತಿ ಎತ್ತರ ಬೆಳೆದಿರುವ ಬೆಳೆ ಗಾಳಿ ಮಳೆಗೆ ಬಿದ್ದಿದ್ದರೂ ಕೂಡ ಹಿಡಿ ಹಿಡಿಯಾಗಿ ಭತ್ತದ ಹುಲ್ಲು ಎತ್ತಿ ಸಣಬಿನಿಂದ ಕಟ್ಟುವುದರಿಂದ ಭಾಗಶಃ ನಷ್ಟವಾಗುವ ಬೆಳೆ ಸಂರಕ್ಷಣೆ ಮಾಡಬಹುದು. ಭತ್ತ ನೆಲಕಚ್ಚಿದ ರೈತರು ಪ್ರಾಥಮಿಕವಾಗಿ ಈ ಪ್ರಯತ್ನ ಮಾಡಿದರೆ ನೆಲಕಚ್ಚಿದ ಶೇ 75ರಷ್ಟು ಬೆಳೆ ರಕ್ಷಿಸಬಹುದು. ಬೆಳೆನಷ್ಟದ ಕುರಿತು ಸ್ಪಷ್ಟವಾದ ವರದಿ ಸಲ್ಲಿಸಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)