ಭಾನುವಾರ, ಅಕ್ಟೋಬರ್ 20, 2019
27 °C

ಎಚ್‌ಐವಿ, ಏಡ್ಸ್‌ ಕುರಿತು ಮನೆ ಮನೆ ಜಾಗೃತಿ ಆಂದೋಲನ

Published:
Updated:

ರಾಯಚೂರು: ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್‌ ತಡೆ ಮತ್ತು ನಿಯಂತ್ರಣ ಘಟಕದಿಂದ ಎಚ್‌್ಐವಿ/ ಏಡ್ಸ್‌ ಕುರಿತು ಮನೆ ಮನೆ ಜನ ಜಾಗೃತಿ ಆಂದೋಲನವನ್ನು ಜಿಲ್ಲೆಯಲ್ಲಿ ಅಕ್ಟೋಬರ್ 4 ಹಾಗೂ 5ರಂದು ನಡೆಯಲಿದೆ ಎಂದು ರಾಜ್ಯದ ಏಡ್ಸ್‌ ತಡೆ ಮತ್ತು ನಿಯಂತ್ರಣ ಘಟಕದ ಜಂಟಿ ನಿರ್ದೇಶಕ ಸಂಜಯ ಪಾಟೀಲ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನದಲ್ಲಿ ಜಿಲ್ಲೆಯ 4,21,945 ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಾಹಿತಿ ನೀಡಲಿದ್ದಾರೆ. ಒಬ್ಬ ಆಶಾ ಕಾರ್ಯಕರ್ತೆಯರ 250 ಹಾಗೂ ಇಬ್ಬರಿರುವ 610 ತಂಡಗಳು ಸೇರಿ ಒಟ್ಟು 1470 ಸ್ವಯಂ ಸೇವಕರು ಮೊದಲ ದಿನ 2,10,973 ಹಾಗೂ ಎರಡನೇ ದಿನ 2,10,973 ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಬಸ್‌ ನಿಲ್ದಾಣ, ಬಸ್‌ ಬ್ರಾಡಿಂಗ್, ಗೋಡೆ ಬಹರ, ಜಾನಪದ ಜಾಗೃತಿ ಸೇರಿದಂತೆ ಹಲವು ಬಗೆಯಲ್ಲಿ ಆಂದೋಲನದ ಬಗ್ಗೆ ಈಗಾಗಲೇ ಪ್ರಚಾರ ಮಾಡಲಾಗಿದೆ. ರಾಜ್ಯದಲ್ಲಿ ಅಧಿಕ ಎಚ್‌ಐವಿ ಪೀಡಿತರನ್ನು ಹೊಂದಿರುವ ಜಿಲ್ಲೆಗಳ ಸಾಲಿನಲ್ಲಿ ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆಯ ನಂತರ ರಾಯಚೂರು ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು ಏಳು ಜಿಲ್ಲೆಗಳಲ್ಲಿ ಆಂದೋಲನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 14 ಸಾವಿರ ಜನರಿಗೆ ಎಚ್‌ಐವಿ ಇದ್ದು, ಇದರಲ್ಲಿ 11,514 ಜನ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಲಕರಿಂದ ಮಕ್ಕಳಿಗೆ ಹರಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ.ಎಸ್.ನಸೀರ, ಜಿಲ್ಲಾ ಏಡ್ಸ್‌ ತಡೆ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ.ಸುರೇಂದ್ರಬಾಬು ಇದ್ದರು.

Post Comments (+)