ಒಂದೇ ಸೂರಿನಡಿ ಎಲ್ಲ ಆರೋಗ್ಯ ಸೇವೆ: ಸುನೀತಾ

7
ಆರೋಗ್ಯ ಕರ್ನಾಟಕ ಯೋಜನೆಯ ವಿಶೇಷ ಸಹಕಾರ ಕಾರ್ಯಾಗಾರ

ಒಂದೇ ಸೂರಿನಡಿ ಎಲ್ಲ ಆರೋಗ್ಯ ಸೇವೆ: ಸುನೀತಾ

Published:
Updated:
Deccan Herald

ರಾಯಚೂರು: ಯಶಸ್ವಿನಿಯಂತೆಯೆ ಆರೋಗ್ಯ ಕರ್ನಾಟಕವೂ ಒಂದು ಯೋಜನೆಯಾಗಿದ್ದು, ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒಂದೇ ಸೂರಿನಡಿ ನೀಡುವುದು ಈ ಯೋಜನೆಯ ಗುರಿ ಎಂದು ಸಹಕಾರ ಸಂಘಗಳ ಇಲಾಖೆಯ ಉಪ ಪ್ರಭಂದಕಿ ಸುನೀತಾ ಸಿದ್ರಾಮ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ರಾಜ್ಯ ಘಟಕ, ರಾಯಚೂರು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಸಹಕಾರ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಕರ್ನಾಟಕ ಯೋಜನೆ ಕುರಿತ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಕಾರ್ಯದರ್ಶಿಗಳಿಗೆ ವಿಶೇಷ ಸಹಕಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಎಲ್ಲ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದ್ದು, ಪ್ರಾಥಮಿಕ ಆರೋಗ್ಯ ಸೇವೆ, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ ಸೇವೆ, ಸಂಕೀರ್ಣ ದ್ವಿತೀಯ ಹಂತದ ಆರೋಗ್ಯ ಸೇವೆ, ತೃತೀಯ ಹಂತದ ಆರೋಗ್ಯ ಸೇವೆ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಇಲಾಖೆಯ ವ್ಯಾಪ್ತಿಯ ಎಲ್ಲಾ ಸದಸ್ಯರುಗಳಿಗೆ, ಗ್ರಾಮ ಮಟ್ಟದಲ್ಲಿರುವ ರೈತರಿಗೆ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.

ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿದ ಸಮಗ್ರವಾದ ಆರೋಗ್ಯ ಕರ್ನಾಟಕ ಯೋಜನೆಯಾಗಿದೆ ಎಂದರು.

ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಆಧಾರ್‌ ಕಾರ್ಡ್‌, ಪಡಿತರ ಚೀಟಿ ಮತ್ತು ₹ 10 ಪಾವತಿಸಿ ಆರೋಗ್ಯ ಕರ್ನಾಟಕ ಕಾರ್ಡ ಪಡೆಯಬಹುದು. ಈ ಕಾರ್ಡ್‌ ಜೀವತಾವಧಿ ಇರುತ್ತದೆ ಎಂದು ತಿಳಿಸಿದರು.

ಬಿಪಿಎಲ್ ಕುಟುಂಬಕ್ಕೆ ಸೇರಿರುವ ರೋಗಿಗಳು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಹತ್ತಿರದ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಸಂಪರ್ಕಿಸಬಹುದಾಗಿದೆ. ಜಿಲ್ಲೆಯಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ 11 ಸರ್ಕಾರಿ ಮತ್ತು 03 ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಅರಳಿ ಸೂರ್ಯಕಾಂತ ಮಾತನಾಡಿ, ಪ್ರತಿಯೊಬ್ಬರು ಉತ್ತಮ ಆರೋಗ್ಯ ಪಡೆಯಲು ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳನ್ನು ಈ ಯೋಜನೆಯಡಿ ನೀಡಲಾಗುತ್ತದೆ. ಇಲಾಖೆಯವರು ರೈತ ಬಾಂಧವರಿಗೆ ಮಾಹಿತಿಯನ್ನು ನೀಡಬೇಕು ಎಂದರು.

ಆರೋಗ್ಯ ಕರ್ನಾಟಕ ಯೋಜನೆ ಕುರಿತ ಮಾಹಿತಿ ಕೈಪಿಡಿಯನ್ನು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಪಾಟೀಲ್ ಬಿಡುಗಡೆಗೊಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಆರೋಗ್ಯ ಕರ್ನಾಟಕ ಯೋಜನೆಯ ಸಮನ್ವಯ ಅಧಿಕಾರಿ ಡಾ.ನಂದಿತಾ, ಪಶು ವೈದ್ಯಾಧಿಕಾರಿ ಡಾ.ಎಸ್.ಎಸ್.ಪಾಟೀಲ, ಐಎಂಎ ಅಧ್ಯಕ್ಷ ರಾಜಶೇಖರ್ ಕಕ್ಕೇರಿ, ಕಲ್ಲಯ್ಯ ಸ್ವಾಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !