ಮಂಗಳವಾರ, ನವೆಂಬರ್ 19, 2019
23 °C

ಅಕ್ರಮಗಳಿಗೆ ಸಹಕರಿಸಿದ ಶಾಸಕ ಶಿವನಗೌಡ ನಾಯಕ: ಆರೋಪ

Published:
Updated:

ರಾಯಚೂರು: ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮಟ್ಕಾ ದಂಧೆ, ಇಸ್ಟೀಟ್‌ ಹಾಗೂ ಮದ್ಯದ ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಜಶೇಖರ ನಾಯಕ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲಹಳ್ಳಿಯಿಂದ ಮುಷ್ಟೂರು ರಸ್ತೆ ಕಾಮಗಾರಿ ನನೆಗುದಿದೆ ಬಿದ್ದಿದೆ. ಇದನ್ನು ಪ್ರಶ್ನಿಸಿ ಶಾಂತಿಯುತವಾಗಿ ಪಾದಯಾತ್ರೆ ಮಾಡಲು ಪರವಾನಗಿ ನೀಡಿಲ್ಲ. ರೈತರನ್ನು ಬಂಧಿಸುವ ಮೂಲಕ ಪ್ರಶ್ನಿಸುವ ಹಕ್ಕು ದಮನ ಮಾಡಿದ್ದಾರೆ ಎಂದು ದೂರಿದರು.

ಗುತ್ತಿಗೆದಾರರಂತೆ, ಮದ್ಯದ ದೊರೆಗಳಂತೆ ವರ್ತಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ರಸ್ತೆ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಕಮಿಷನ್ ನೀಡುವಂತೆ ಒತ್ತಾಯಿಸಿದ್ದರಿಂದ, ಕೆಲಸ ಬಿಟ್ಟು ಹೋಗಿದ್ದಾರೆ ಎಂದರು.

ಅಭಿವೃದ್ಧಿ ವಿಷಯ ಮರೀಚಿಕೆಯಾಗಿದ್ದು, ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ತಾವು ಕೊಟ್ಟ ಮಾತಿನಂತೆ ರಸ್ತೆ ನಿರ್ಮಿಸಿ ಎಂದು ಹೋರಾಟ ಮಾಡಿದ್ದಕ್ಕೆ ಈಗ ಬಂಧನ ಮಾಡಲಾಗಿದೆ. ಶೀಘ್ರದಲ್ಲೆ ರಸ್ತೆ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳದಿದ್ದಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ ಪೂಜಾರಿ, ಮುಖಂಡರಾದ ಭೀಮನಗೌಡ ನಾಗಡದಿನ್ನಿ, ಅಮರಗೌಡ ಹಂಚಿನಾಳ ಹಾಗೂ ಮುಷ್ಟೂರು ಗ್ರಾಮ ಪಂಚಾಯಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

ಪ್ರತಿಕ್ರಿಯಿಸಿ (+)