ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭವಿಷ್ಯ ರೂಪಿಸಲು ಜಾತಿ, ಧರ್ಮ ಬದಿಗಿರಿಸಿ

ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ್‌ ರಾಮಸ್ವಾಮಿ ಸಲಹೆ
Last Updated 8 ಆಗಸ್ಟ್ 2022, 14:08 IST
ಅಕ್ಷರ ಗಾತ್ರ

ರಾಯಚೂರು: ಎಲ್ಲರೂ ಜಾತಿ,‌ ಧರ್ಮವನ್ನು ಬದಿಗಿರಿಸಿ, ನಾವೆಲ್ಲ ಭಾರತೀಯರು ಒಂದೇ ಎಂಬ ಭಾವನೆಯಿಂದ ದೇಶಕ್ಕಾಗಿ ಸೇವೆ ಮಾಡಿ ಭವಿಷ್ಯ ರೂಪಿಸಬೇಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಸಲಹೆ ನೀಡಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟದ ನೆನಪುಗಳು ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸವು ಪಠ್ಯ ಪುಸ್ತಕಗಳಲ್ಲಿ ಬರೆದಷ್ಟೇ ಅಲ್ಲದೇ ಮತ್ತಷ್ಟು ವಿಷಯ ಪರಿಗಣನೆಗೆ ಬಾರದೇ ಇರಬಹುದು. ಇತಿಹಾಸವನ್ನು ಮರು ಅಭ್ಯಾಸ ಮಾಡಬೇಕಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ವಿವಿಧ ಹಳ್ಳಿಗಳಿಂದ ಅನೇಕ ಹೋರಾಟಗಾರರು ಭಾಗಿಯಾಗಿದ್ದಾರೆ. ಧಾರವಾಡದಲ್ಲಿಯೇ ನೂರಕ್ಕಿಂತ ಹೆಚ್ಚು‌ ಜನ ಇದ್ದಾರೆ. ಎಲೆಮರೆಕಾಯಿಯಂತೆ ಅನೇಕರು ಹೋರಾಡಿದ್ದು ಅವರನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ. ಯಾವುದೇ ವಿಷಯವಾದರೂ ಸತ್ಯವನ್ನು ಪರೀಕ್ಷಿಸಿ ಗೊಂದಲ, ಪ್ರಶ್ನೆಗಳಿದ್ದಲ್ಲಿ ಉತ್ತರ ಪಡೆಯಬೇಕು. ನೇರವಾಗಿ ಮಾತನಾಡುವ ಶಕ್ತಿ ನಮಗೆ ಬಂದಿಲ್ಲ. ಎಲ್ಲವನ್ನು ಗೌರವಿಸುವ ರಾಷ್ಟ್ರ. ಅನ್ಯಾಯವಾದರೆ ಪ್ರಶ್ನಿಸಬೇಕಿದೆ. ವಿಭಿನ್ನತೆಯ ನಡುವೆ ಏಕತೆಯ ಹೊಂದಿರುವ ರಾಷ್ಟ್ರ ನಮ್ಮದು. ರಾಷ್ಟ್ರೀಯ ‌ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ಉಪನ್ಯಾಸ ಮಾಡಿ, ಕೇವಲ ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟ ಎನ್ನುವುದು ಸರಿಯಲ್ಲ. ಡಚ್ಚರ, ಫ್ರೆಂಚ್, ಮೊಘಲರು, ಗ್ರೀಕರು ಹಾಗೂ ಹೈದ್ರಾಬಾದ್ ನಿಜಾಮರ ವಿರುದ್ಧ ನಡೆದ ಹೋರಾಟವನ್ನೂ ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸಬೇಕು ಎಂದು ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಬಸ್ಸಪ್ಪ ಮಾಲಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಿಸಿದ ಕೃಷ್ಣ–ತುಂಗಾ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು.

ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂಜಯಕುಮಾರ ಮೂಥಾ, ಕುಲಸಚಿವ ಪ್ರೊ. ವಿಶ್ವನಾಥ ಎಂ., ಹಣಕಾಸು ಅಧಿಕಾರಿ ಪ್ರೊ.ಪಾರ್ವತಿ ಸಿ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಜಿ.ಎಸ್. ಬಿರಾದಾರ, ವಕೀಲ ಜಗದೀಶ, ಡಾ.ನಾಗರಾಜ ಬಾಲ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT