ಲಿಂಗಸುಗೂರು (ರಾಯಚೂರು ಜಿಲ್ಲೆ): ನಾರಾಯಣಪುರ ಅಣೆಕಟ್ಟೆ ನಿರ್ಮಾಣಗೊಂಡು ಕ್ರೆಸ್ಟ್ ಗೇಟ್‍ಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸುತ್ತಿರುವಾಗಿನಿಂದಲೂ ನಡುಗಡ್ಡೆ ಜನರ ಬದುಕು ಮೂರಾಬಟ್ಟೆಯಾಗಿದೆ. ಪ್ರವಾಹ ಸಂದರ್ಭದಲ್ಲಿ ಬೆಳೆದ ಫಸಲು ಹಾನಿಯಾಗುತ್ತಿದ್ದರೂ ಆಡಳಿತ ನೆರವಿಗೆ ಬಂದಿಲ್ಲ.
ಶೀಲಹಳ್ಳಿ ಸೇತುವೆ ಕೆಳಭಾಗದ ಅನತಿ ದೂರದಲ್ಲಿ ಕೃಷ್ಣಾ ನದಿ ಟಿಸಿಲೊಡೆದು ಹರಿದು ಪುನಃ ಮುಂದೆ ಕೃಷ್ಣಾ ನದಿಗೆ ಒಂದಾಗಿ ಹರಿಯುತ್ತಿದೆ. ಈ ಮಧ್ಯದ ಪ್ರದೇಶ ನಡುಗಡ್ಡೆಯಾಗಿ ಪರಿವರ್ತಿತಗೊಂಡಿದೆ. ಈ ಪ್ರದೇಶವನ್ನು ತವದಗಡ್ಡಿ ಎಂದು ಕರೆಯಲಾಗುತ್ತಿದೆ. ಇಲ್ಲಿ 15ಕ್ಕೂ ಹೆಚ್ಚು ಪರಿಶಿಷ್ಟ ಜಾತಿ (ಮಾದಿಗ) ಕುಟುಂಬದವರು ಜಮೀನು ಹೊಂದಿದ್ದಾರೆ. ಬಹುತೇಕ ಕುಟುಂಬಸ್ಥರು ಸಮೀಪದ ಶೀಲಹಳ್ಳಿ ಗ್ರಾಮದಲ್ಲಿ ಮನೆ ಮಾಡಿಕೊಂಡಿದ್ದಾರೆ.
‘ಶೀಲಹಳ್ಳಿ ಗೋನವಾಟ್ಲ ಸಂಪರ್ಕಿಸುವ ರಸ್ತೆ ನಡುಗಡ್ಡೆಗೆ ಅನುಕೂಲಕರವಾಗಿದೆ. ಕೃಷಿ ಚಟುವಟಿಕೆ ನಡೆಸಲು ಈ ರಸ್ತೆ ಬಳಕೆ ಅನಿವಾರ್ಯ. ಪ್ರವಾಹ ಬಂದಾಗ ಮಾತ್ರ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. 1.50 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಹರಿಸಿದಾಗ ಪ್ರವಾಹ ಬಂದರೆ ಜಮೀನುಗಳು ಜಲಾವೃತಗೊಳ್ಳುತ್ತವೆ. ಪ್ರತಿ ವರ್ಷ ಬೆಳೆದ ಫಸಲು ಕೈಗೆ ಸೇರದೆ, ಪರಿಹಾರವೂ ಸಿಗದೆ ಭಾರಿ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದು ಚಂದಪ್ಪ ಹರಿಜನ ಅಳಲು ತೋಡಿಕೊಂಡರು.
ಪ್ರತಿ ವರ್ಷ ನಾಲ್ಕಾರು ದಿನ ಹೆಚ್ಚಿನ ನೀರು ಕೃಷ್ಣಾ ನದಿಗೆ ಹರಿದು ನಂತರ ಪ್ರವಾಹ ಕಡಿಮೆ ಆಗುತ್ತಿತ್ತು. ಆಗ ಕೃಷಿ ಚಟುವಟಿಕೆ ನಡೆಸುತ್ತಿದ್ದೆವು. ಈ ವರ್ಷ ಹದಿನೈದು ದಿನಗಳಿಂದ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ನಡುಗಡ್ಡೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬೆಳೆ ಜಲಾವೃತಗೊಂಡು ಹಾಳಾಗುತ್ತಿದೆ. ಇನ್ನೊಂದೆಡೆ ಕಸ ಬೆಳೆದು ಬೆಳೆ ರೋಗಕ್ಕೆ ತುತ್ತಾಗುತ್ತಿದೆ. ಹೀಗಿದ್ದರೂ ಆಡಳಿತ ಬಿಡಿಗಾಸು ನೆರವು ನೀಡುತ್ತಿಲ್ಲ ಎಂದು ರೈತರು ದೂರುತ್ತಾರೆ.
‘ಪ್ರವಾಹ ಎಂದಾಕ್ಷಣ ತಾಲ್ಲೂಕು, ಜಿಲ್ಲಾ ಆಡಳಿತ ಮ್ಯಾದರಗಡ್ಡಿ, ಕರಡಕಲಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಕ್ಕೆ ತೆರಳುತ್ತಾರೆ. ಶೀಲಹಳ್ಳಿ ಮಾರ್ಗದಲ್ಲಿ ತೆರಳುವ ಅಧಿಕಾರಿಗಳು ಸೌಜನ್ಯತೆಗೂ ತವದಗಡ್ಡಿ ರೈತರನ್ನು ಸಂಪರ್ಕ ಮಾಡುತ್ತಿಲ್ಲ. ಮಾದಿಗ ಸಮುದಾಯ ಆಗಿದ್ದರಿಂದ ಅಧಿಕಾರಿಗಳು ಕಡೆಗಣಿಸಿದ್ದಾರೆ. ಉಳಿದ ಗಟ್ಟಿಗಳಲ್ಲಿ ಇತರೆ ಪರಿಶಿಷ್ಟ ವರ್ಗದವರು ಇದ್ದುದರಿಂದ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಕೃಷ್ಣಾ ನಡುಗಡ್ಡೆ ಪ್ರದೇಶಗಳಂತೆ ನಮ್ಮ ಬೇಡಿಕೆಗಳಿಲ್ಲ. ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆ ಸಂಪರ್ಕಿಸುವ ರಸ್ತೆ ಜಲಾವೃತಗೊಳ್ಳುತ್ತದೆ. ಪ್ರವಾಹ ಸಂದರ್ಭದಲ್ಲಿ ಜನ, ಜಾನುವಾರು ತಿರುಗಾಡಲು ಅನುಕೂಲ ಆಗುವಂತಹ ಸಣ್ಣ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡುತ್ತ ಬಂದಿದ್ದೇವೆ. ದಲಿತರ ಹೆಸರಲ್ಲಿ ಆಡಳಿತ ನಡೆಸುವ ಯಾವೊಂದು ಸರ್ಕಾರವೂ ನಾಲ್ಕು ದಶಕಗಳಿಂದ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ಶಿವಪ್ಪ ದೊಡಮನಿ ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಶಂಶಾಲಂ ನಾಗಡದಿನ್ನಿ ಅವರನ್ನು ಸಂಪರ್ಕಿಸಿದಾಗ, ‘ನಡುಗಡ್ಡೆಗಳ ಕುರಿತು ಈಗಾಗಲೇ ಹಲವು ಸುತ್ತಿನ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುತ್ತ ಬಂದಿದ್ದೇವೆ. ತವದಗಡ್ಡಿ ಜನರ ಬೇಡಿಕೆ ಹಾಗೂ ಅಹವಾಲು ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಪ್ರವಾಹ ಇಳಿದಾಕ್ಷಣ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಸೇತುವೆ ನಿರ್ಮಾಣ ಕುರಿತು ಚರ್ಚಿಸಲಾಗುವುದು’ ಎಂದರು.
ಗೋನವಾಟ್ಲ ಸೀಮಾಂತರದ ತವದಗಡ್ಡಿಯಲ್ಲಿ ಜಮೀನು ಹೊಂದಿದ್ದೇವೆ. ಈ ವರ್ಷ ಪ್ರವಾಹ ಹೆಚ್ಚಿದ್ದರಿಂದ ಭಾರಿ ಸಂಕಷ್ಟ ಎದುರಿಸುವಂತಾಗಿದೆ.ಸಿದ್ಧಪ್ಪ ಸಣ್ಣಪ್ಪ ಹಳೆಮನಿ ತವದಗಡ್ಡಿ ರೈತ ಶೀಲಹಳ್ಳಿ
ಶೀಲಹಳ್ಳಿ ಬಳಿಯ ತವದಗಡ್ಡಿಗೆ ಶೀಲಹಳ್ಳಿ ಗೋನವಾಟ್ಲ ಸಂಪರ್ಕಿಸುವ ರಸ್ತೆಗೆ ಸಣ್ಣ ಸೇತುವೆ ನಿರ್ಮಿಸಿದರೆ ರೈತರಿಗೆ ಅನುಕೂಲ ಆಗಲಿದೆ. ನಮ್ಮ ಗೋಳನ್ನೂ ಯಾರೂ ಕೇಳುತ್ತಿಲ್ಲ.ತಿಪ್ಪಣ್ಣ ಹನುಮಪ್ಪ ಹೊಸಮನಿ ತವದಗಡ್ಡಿ ರೈತ ಶೀಲಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.