ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಂಗೆ ಸಂಘಟಿತ ಹೋರಾಟ ಅಗತ್ಯ: ಆರ್.ಎಸ್.ಬಸವರಾಜ

ಗ್ರಾ.ಪಂ ನೌಕರರ ವಿಭಾಗೀಯ ಮಟ್ಟದ ಸಭೆ
Last Updated 13 ಮೇ 2022, 12:32 IST
ಅಕ್ಷರ ಗಾತ್ರ

ಸಿಂಧನೂರು: ‘ಉದ್ಯೋಗ ಮತ್ತು ವೇತನ ಭದ್ರತೆಗಾಗಿ ಗ್ರಾಮ ಪಂಚಾಯಿತಿ ನೌಕರರು ಸಂಘಟಿತರಾಗಿ ರಾಜ್ಯದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಖಜಾಂಚಿ ಆರ್.ಎಸ್.ಬಸವರಾಜ ಹೇಳಿದರು.

ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕ ವತಿಯಿಂದ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ವಿಭಾಗೀಯ ಮಟ್ಟದ ವಿಸ್ತಂತ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯದಲ್ಲಿರುವ 65 ಸಾವಿರ ಗ್ರಾಮ ಪಂಚಾಯಿತಿ ನೌಕರರ ಸೇವೆ ಖಾಯಂಮಾತಿ, ₹ 25 ಸಾವಿರ ಕನಿಷ್ಠ ವೇತನ, ಪಿಂಚಣಿ ಸೌಲಭ್ಯವನ್ನು ಸರ್ಕಾರದಿಂದ ದೊರಕಿಸಿ ಕೊಡುವುದು ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮಾರುತಿ ಮಾನ್ಪಡೆಯವರ ಕನಸಾಗಿತ್ತು. ಅದಕ್ಕಾಗಿ ಅನೇಕ ಚಳವಳಿ ರೂಪಿಸಿದ್ದರು. ಅವರ ಅಗಲಿಕೆ ನಂತರ ಮಾನ್ಪಡೆಯವರ ಕನಸು ನನಸು ಮಾಡುವುದು ಪ್ರಸ್ತುತ ಸಂಘದ ಮುಖಂಡರ ಮೇಲಿದೆ’ ಎಂದು ತಿಳಿಸಿದರು.

‘ರೈಲ್ವೆ, ವಿಮಾನ, ಬ್ಯಾಂಕ್, ಎಲ್‍ಐಸಿ, ಬಿಎಸ್‍ಎನ್‍ಎಲ್ ಮತ್ತಿತರ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಮೋದಿ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಮಾರಾಟಕ್ಕಿಟ್ಟಿರುವುದು ದುರಂತ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ನೌಕರರು ಒಗ್ಗಟ್ಟಾಗದಿದ್ದರೆ ಪಂಚಾಯಿತಿ ನೌಕರರನ್ನು ಖಾಸಗೀಕರಣಗೊಳಿಸಿ ಉದ್ಯೋಗ ಕಸಿದುಕೊಳ್ಳಲು ತುದಿಗಾಲಿನ ಮೇಲೆ ಬಿಜೆಪಿ ಸರ್ಕಾರ ನಿಂತಿದೆ’ ಎಂದು ಆಪಾದಿಸಿದರು.

ನಂತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ವಿ.ನಾಡಗೌಡ ಮಾತನಾಡಿ, ‘ನಿಗದಿತ ಸಂಬಳ ಇಲ್ಲದಿದ್ದರೂ ಗ್ರಾಮ ಪಂಚಾಯಿತಿ ನೌಕರರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ಏರಿಕೆಗೆ ಅನುಗುಣವಾಗಿ ನೌಕರರಿಗೆ ವೇತನ ಹೆಚ್ಚಿಸಬೇಕು. ಸ್ವಚ್ಚತಾಗಾರರಿಗೆ ₹ 25 ಸಾವಿರ, ಡಾಟಾ ಎಚಿಟಿ ಆಪರೇಟರ್‌ಗಳಿಗೆ ₹ 35 ಸಾವಿರ ಮಾಸಿಕ ವೇತನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

‘ವೇತನ ಬಾಕಿ ಹಿನ್ನಲೆಯಲ್ಲಿ ರಾಜ್ಯದಲ್ಲಿ 8 ಜನ ಪಂಚಾಯಿತಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಆದಷ್ಟು ಶೀಘ್ರ ನೌಕರರ ಬೇಡಿಕೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗದಿದ್ದರೆ ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಸಮುದಾಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮಾತನಾಡಿದರು.

ಸಂಘದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಧಣಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಜಿಲ್ಲಾ ಘಟಕದ ಕಾರ್ಯದರ್ಶಿ ರಾಜು, ಬಳ್ಳಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ರಾಯಚೂರು ಜಿಲ್ಲಾ ಘಟಕದ ಖಜಾಂಚಿ ವೀರೇಶಸ್ವಾಮಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೌನೇಶ ಸೇರಿದಂತೆ ವಿವಿಧ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು. ಪವಿತ್ರ ನಿರೂಪಿಸಿದರು.

*

ಗ್ರಾಮ ಪಂಚಾಯಿತಿ ನೌಕರರಿಗೆ ಮಾಸಿಕ ₹ 20 ಸಾವಿರ ವೇತನ ನಿಗದಿ ಪಡಿಸಬೇಕು. ಸೇವೆ ಕಾಯಂ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ 65 ಸಾವಿರ ಪಂಚಾಯಿತಿ ನೌಕರರು ಸೇರಿ ಹೋರಾಟ ಮಾಡಬೇಕು.
ಎಂ.ವಿ.ನಾಡಗೌಡ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT