ಶಕ್ತಿನಗರ: ಗೃಹ ರಕ್ಷಕರ 1962ರ ನಿಯಮಾವಳಿಯಲ್ಲಿ ಇರುವ ನಿಷ್ಕಾಮ ಸೇವಾ ಎಂಬ ಪದವನ್ನು ತೆಗೆಯಬೇಕು ಎಂದು ಒತ್ತಾಯಿಸಿ ನ್ಯಾಷನಲ್ ಹೋಮ್ ಗಾರ್ಡ್ ವೆಲ್ಫೇರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ರಾಯಚೂರು ಸಂಸದ ಜಿ.ಕುಮಾರನಾಯಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೇಶದ ಕೆಲವು ರಾಜ್ಯಗಳಲ್ಲಿ 365 ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 28 ಸಾವಿರ ಗೃಹರಕ್ಷಕರಿದ್ದು, ಇಲ್ಲಿ 365 ದಿನ ಡ್ಯೂಟಿಗಳು ಇರುವುದಿಲ್ಲ. ಹಾಗಾಗಿ ಜೀವನ ನಡೆಸಲು ಕಷ್ಟಕರವಾಗಿದೆ. ಗೃಹರಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ದೇಶದ ಎಲ್ಲಾ ರಾಜ್ಯಗಳಲ್ಲಿ ಗೃಹರಕ್ಷಕರಿಗೆ ಒಂದೇ ಸಮನಾದ ಗೌರವಧನ ನೀಡಬೇಕು. ನಿವೃತ್ತಿ ವೇಳೆ ಕನಿಷ್ಠ ₹ 30 ಲಕ್ಷ ಜೀವನೋಪಾಯ ಭತ್ಯೆ ನೀಡಬೇಕು. ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ಗೃಹರಕ್ಷಕರಿಗೆ ಉಚಿತ ಬಸ್‌ಪಾಸ್ ಹಾಗೂ ರೈಲ್ವೆ ಪಾಸ್ ನೀಡಬೇಕು. ಆರೋಗ್ಯ ಸೌಲಭ್ಯ ಒದಗಿಸಬೇಕು ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನ್ಯಾಷನಲ್ ಹೋಮ್ ಗಾರ್ಡ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಲಕನ್ ಸಿಂಗ್ ರಾಯಚೂರು ಸಂಸದ ಜಿ.ಕುಮಾರನಾಯಕ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಂಘಟನೆಯ ರಾಜಸ್ಥಾನ ಘಟಕದ ಉಪಾಧ್ಯಕ್ಷ ಕಮಲಾ ಶರ್ಮಾ, ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಪಾಕಲಾ ರಾಜಶೇಖರ, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮೌನ ಕೊರತಕುಂದ, ಕಾರ್ಮಿಕ ಹಕ್ಕುಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಪಾವಗಡ ಶ್ರೀರಾಮ ಉಪಸ್ಥಿತರಿದ್ದರು.