ಸೋಮವಾರ, ಜನವರಿ 20, 2020
29 °C

ರಾಯಚೂರು: ಮೂಲ ಹಕ್ಕುಗಳಿಗೆ ಆಗ್ರಹಿಸಿ ಅರಕೇರಾ ಚಲೋ 9 ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇವದುರ್ಗ ತಾಲ್ಲೂಕಿನಲ್ಲಿ ನಿವೇಶನ ಹಕ್ಕು ಪತ್ರ, ಕುಡಿಯುವ ನೀರು ಹಾಗೂ ಮೂಲ ಹಕ್ಕುಗಳಿಗೆ ಒತ್ತಾಯಿಸಿ ಜನವರಿ 9 ರಂದು ಸಾಮಾಜಿಕ ನ್ಯಾಯಕ್ಕಾಗಿ ’ಅರಕೇರಾ ಚಲೋ’ ಜನ ಸಂಘರ್ಷ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಹನುಮಂತಪ್ಪ ಕಾಕರ್‌ಗಲ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಬೇಕು. ಕುಡಿಯುವ ನೀರಿಗಾಗಿ, ಉತ್ತಮ ರಸ್ತೆಗಾಗಿ ಸತ್ತಾಗ ಶವ ಹೂಳುವುದಕ್ಕೆ ಜಾಗಕ್ಕಾಗಿ  ನಿರಂತವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಬಡ ಜನರ ಸಮಸ್ಯೆಗಳಿಗೆ ಹೋರಾಟಗಳನ್ನು ಹಮ್ಮಿಕೊಂಡಲ್ಲಿ ಶಾಸಕ ಶಿವನಗೌಡ ನಾಯಕ ಅವರು ಹೋರಾಟಗಾರರ ವಿರುದ್ದ ಸುಳ್ಳು ಕೇಸು ದಾಖಲಿಸಿ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.

ದೇವದುರ್ಗದಲ್ಲಿ ನಿರಂತರವಾಗಿ ಅಕ್ರಮ ಚಟುವಟಿಕೆಗಳು ಸಾಗಿವೆ. ನದಿಪಾತ್ರದಲ್ಲಿ ನಿರಂತರ ಅಕ್ರಮ ಮರಳು ದಂಧೆ, ಮದ್ಯ ಮಾರಟ, ಮಟ್ಕಾ, ನಕಲಿ ನೋಟು ವ್ಯವಹಾರ ಸೇರಿದಂತೆ ಬಹುತೇಕ ಅಕ್ರಮ ಚಟುವಟಿಕೆಗಳು ನಡೆದಿವೆ. ಇದರ ವಿರುದ್ಧ ಧ್ವನಿ ಎತ್ತಿದರೆ ಹೋರಾಟಗಾರರ ವಿರುದ್ಧ ಪೊಲೀಸ್ ಅಸ್ತ್ರ ಬಳಸಿ ಕೇಸ್ ದಾಖಲಿಸುವಂತೆ ಮತ್ತು ಅಧಿಕಾರಿಗಳಿಗೆ ಯಾವುದೇ ಕಾಮಗಾರಿ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿಗಳಿಗೆ ನಿವೇಶನ ಕೋರಿ ಸಲ್ಲಿಸಿರುವ ಅರ್ಜಿದಾರರು ಸೂಕ್ತ ಭೂಮಿ ಗುರುತಿಸಿ ಸರ್ಕಾರಿ ಭೂಮಿ ಇಲ್ಲದ ಕಡೆ ಖಾಸಗಿ ಭೂಮಿಯನ್ನು ಖರೀದಿಸಿ, 30×40 ಅಳತೆಯ ಬಡಾವಣೆ ನಕಾಶೆ ರಚಿಸಿ ಹಕ್ಕುಪತ್ರ ನೀಡಬೇಕು. ಕ್ಯಾದಿಗೇರಾ ಭಾಗದ ಸಣ್ಣಕೆರೆ ದೊಡ್ಡಕೆರೆ ಮತ್ತು ಅಡಕಲ ಗುಡ್ಡ ಭಾಗದಲ್ಲಿ ಕೆರೆ ನಿರ್ಮಿಸಿ ನಾರಾಯಣಪುರ ಬಲದಂಡೆ ಕಾಲುವೆ 9 ಮೂಲಕ ನೀರೊದಗಿಸುವ ಕಾಮಗಾರಿ ಆರಂಭಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುರೇಶ್ ಬಳಗಾನೂರು, ಚಿನ್ನಪ್ಪ ಪಟ್ಟದಕಲ್ ಸೇರಿದಂತೆ ದೇವದುರ್ಗ ತಾಲ್ಲೂಕಿನ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು