ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಕಾ ಕಲ್ಯಾಣ ಈರುಳ್ಳಿಯಿಂದ ಅಧಿಕ ಇಳುವರಿ’

ಈರುಳ್ಳಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ
Last Updated 9 ಫೆಬ್ರುವರಿ 2019, 14:14 IST
ಅಕ್ಷರ ಗಾತ್ರ

ರಾಯಚೂರು: ಅರ್ಕಾ ತಳಿ ಈರುಳ್ಳಿಯಿಂದ ಪ್ರತಿ ಎಕರೆಗೆ 18 ರಿಂದ 20 ಕ್ವಿಂಟಾಲ್‌ ಇಳುವರಿ ಪಡೆಯಬಹುದು ಎಂದು ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಜಿ.ಎಸ್. ಯಡಹಳ್ಳಿ ಹೇಳಿದರು.

ರಾಯಚೂರು ತಾಲ್ಲೂಕಿನ ಇಬ್ರಾಹಿಂದೊಡ್ಡಿ ಗ್ರಾಮದ ಪ್ರಗತಿಪರ ರೈತ ಬಸವ ಅವರ ಕ್ಷೇತ್ರದಲ್ಲಿ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ‘ಈರುಳ್ಳಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆಯ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ’ದಲ್ಲಿ ಮಾತನಾಡಿದರು.

ಈರುಳ್ಳಿ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಯಾಗಿದೆ. ಈ ಬೆಳೆಯನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು. ಅರ್ಕಾ ಕಲ್ಯಾಣ ತಳಿಯು ಆಕರ್ಷಕ ಕೆಂಪು ಬಣ್ಣದ ದುಂಡನೆಯ ಗಡ್ಡೆಗಳನ್ನು ಹೊಂದಿದ್ದು, ಗಡ್ಡೆಗಳು ರಸವತ್ತಾಗಿರುತ್ತವೆ. ಒಂದು ಗಡ್ಡೆ 130 ರಿಂದ 180 ಗ್ರಾಂ ತೂಕ ಹೊಂದಿರುತ್ತದೆ. ಸುಧಾರಣ ಶೇಖರಣಾ ಗುಣಮಟ್ಟ ಹೊಂದಿದೆ ಎಂದರು.

ಸಮಗ್ರ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷನ್ನು, ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ 12 ಟನ್ ಎಕರೆ ಎರೆಹುಳುಗೊಬ್ಬರ (1 ಟನ್/ಎಕರೆ) ಹಾಕಿ ಅದರ ಜೊತೆ ರಾಸಾಯನಿಕ ಗೊಬ್ಬರಗಳನ್ನು 50:20:50 ಕಿ.ಲೋ. ಸಾರಜನಕ, ರಂಜಕ, ಪೊಟ್ಯಾಷ್ ಪ್ರತಿ ಎಕರೆಗೆ ಹಾಕಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ನೀರು ಅಡಚಣೆಯಾಗುತ್ತಿದೆ. ಇದನ್ನು ಹೋಗಲಾಡಿಸಲು ಇದ್ದ ನೀರನ್ನು ಹನಿ ನೀರಾವರಿ ಅಳವಡಿಸಿಕೊಂಡು ನೀರಿನ ಸದ್ಭಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಈರುಳ್ಳಿ ಬೆಳೆಯಲ್ಲಿ ಕಳೆಗಳನ್ನು ಬಿತ್ತನೆಮಾಡಿದ ದಿನ ಅಥವಾ ಮರುದಿನ 1.3 ಲೀ ಪಂಡಿಮಿಥೆಲಿನ್ 30 ಇ.ಸಿ. 300 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ನಾಟಿ ಪದ್ಧತಿ ಮಾಡಿದ ತಕ್ಷಣ 800 ಮಿ.ಲೀ. ಬ್ಯೂಟಾಕ್ಲೋರ್ 50 ಇ.ಸಿ. ಕಳೆನಾಶಕವನ್ನು 300 ಲೀಟರ್ ನೀರಿನಲ್ಲಿ ಬೆರಿಸಿ ಸಿಂಪಡಿಸಬೇಕು. ನಾಟಿ ಮಾಡಿದ 30 ದಿನಗಳ ನಂತರ ಎಕರೆಗೆ 440 ಮಿ.ಲೀ. ಆಕ್ಸಿಪೋರೋಫೆನ್ 23.೫ ಇ.ಸಿ. ಅಥವಾ ಪ್ರೋಪಾಕ್ವಿಜಿಪಾಪ್ + ಆಕ್ಸಿ ಫ್ಲೋರೋಪೇನ್ 23.5 ಇ.ಸಿ. ಎಂಬ ಸಂಯುಕ್ತ ಕಳೆನಾಶಕವನ್ನು ಎಕರೆಗೆ 140 ಮಿ.ಲೀ. ರಂತೆ 300 ಲೀ. ನೀರಿಗೆ ಬೆರೆಸಿ ಸಿಂಪಾಡಿಸಬೇಕು. ಈ ರೀತಿ ಸಮಗ್ರ ಬೇಸಾಯವನ್ನು ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ಹೇಳಿದರು.

ಕೀಟಶಾಸ್ತ್ರ ವಿಜ್ಞಾನಿ ಶ್ರೀವಾಣಿ ಜಿ.ಎನ್. ಮಾತನಾಡಿ, ಈರುಳ್ಳಿ ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ರೋಗಗಳು ನಿರ್ವಹಣೆಯ ಬಗ್ಗೆ ರೈತರಿಗೆ ಮನದಟ್ಟು ಮಾಡಿದರು. ಬಿತ್ತುವ ಮುಂಚೆ ಬೀಜೋಪಚಾರ ಮಾಡಬೇಕು, ಅದರಲ್ಲೂ ಟ್ರೈಕೋಡರ್ಮ್‌ ಹಾಗೂ ಸೂಡೊಮೋನಸ್ ನಂತಹ ಜೈವಿಕ ರೋಗನಾಶಕಗಳೊಂದಿಗೆ ಬಿಜೋಪಚಾರ ಮಾಡುವುದರಿಂದ ತಕ್ಕಮಟ್ಟಿಗೆ ರೋಗಗಳು ಬರುವ ಮುಂಚೆಯೆ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.

ಈರುಳ್ಳಿಯಲ್ಲಿ ಮುಖ್ಯ ಕೀಟಗಳಾದ ಥ್ರಿಪ್ಸ್‌ನುಶಿಯನ್ನು ಬೀಜೋಪಚಾರ ಹಾಗೂ ಲದ್ದಿಹುಳುವಿನ ಬಾಧೆಯನ್ನು ಕಡಿಮೆ ಮಾಡಲು ಮೋಹಕ ಬಲೆಗಳನ್ನು ಅಳವಡಿಸಿ ಅವಶ್ಯಕತೆಗೆ ಅನುಗುಣವಾಗಿ ಕೀಟನಾಶಕಗಳ ಬಳಕೆ ಮಾಡಬೇಕು ಎಂದು ಹೇಳಿದರು.

ವಿಜ್ಞಾನಿ ಅನುಪಮಾ ಸಿ. ಮಾತನಾಡಿ, ದೈನಂದಿನ ಜೀವನದಲ್ಲಿ ಈರುಳ್ಳಿಯ ಪಾತ್ರ ಬಹಳ ಹಿರಿದು ಹಾಗೂ ಎಲ್ಲಾ ಖಾರದ ಖಾದ್ಯ ಪದಾರ್ಥಗಳಲ್ಲಿ ಉಳ್ಳಾಗಡ್ಡೆಯನ್ನು ಬಳಸಲಾಗುತ್ತಿದೆ. ಈರುಳ್ಳಿ ಬಜ್ಜಿ, ಈರುಳ್ಳಿ ದೋಸೆ ಇತ್ಯಾದಿಗಳು ಬಹಳ ಜನಪ್ರಿಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT