ಸುಂದರ ವೈವಿಧ್ಯ ವಿಘ್ನೇಶ ವಿಗ್ರಹಗಳ ಪ್ರತಿಷ್ಠಾಪನೆ, ಭಕ್ತಿಭಾವದಲ್ಲಿ ಜನ

7
ನಗರದೆಲ್ಲೆಡೆ ಭಕ್ತಿಭಾವದಲ್ಲಿ ಮುಳುಗಿದ ಗಜಾನನ ಯುವಕ ಮಂಡಳಿಗಳು

ಸುಂದರ ವೈವಿಧ್ಯ ವಿಘ್ನೇಶ ವಿಗ್ರಹಗಳ ಪ್ರತಿಷ್ಠಾಪನೆ, ಭಕ್ತಿಭಾವದಲ್ಲಿ ಜನ

Published:
Updated:
Deccan Herald

ರಾಯಚೂರು: ನಗರದ ವಿವಿಧ ಕಡೆಗಳಲ್ಲಿ ಗುರುವಾರ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನಿತ್ಯವೂ ಪೂಜೆ, ಪ್ರಸಾದ ವಿತರಣೆ ಆರಂಭವಾಗಿದೆ.

ಬಡಾವಣೆಗಳಲ್ಲಿ ಆಚರಿಸುವ ಗಣೇಶ ಚತುರ್ಥಿಯೊಂದಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ವೇದಿಕೆಗಳನ್ನು ನಿರ್ಮಿಸಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಬಡಾವಣೆಗಳ ಜನರು ನೈವೇದ್ಯದೊಂದಿಗೆ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿರುವುದು ಗಮನ ಸೆಳೆಯುತ್ತಿದೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧೆಡೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಎಸ್‌ಬಿಎಚ್‌ ಕಾಲೋನಿ ಮಾರ್ಗದಲ್ಲಿ ಶ್ರೀ ನಂದಿಶ್ವರ ಯುವಕ ಮಂಡಳಿಯು ಸುಂದರ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ್ದು, ಐದು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಗುರುವಾರ ಸಂಜೆ ಮಕ್ಕಳಿಗಾಗಿ ‘ಫ್ಯಾನ್ಸಿ ಡ್ರೆಸ್‌’, ಗಾಯನ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು. ಬಡಾವಣೆಗಳ ಮಕ್ಕಳು ವೇದಿಕೆಯಲ್ಲಿ ವೈವಿಧ್ಯಮಯ ವೇಷಭೂಷಣ ಪ್ರದರ್ಶಿಸಿ ಗಮನ ಸೆಳೆದರು. ಚೆಪ್ಪಾಳೆ ಮತ್ತು ಶಿಳ್ಳೆಯೊಂದಿಗೆ ಯುವಕರು ಮಕ್ಕಳನ್ನು ಪ್ರೋತ್ರಾಹಿಸಿದರು.

ವಿಶೇಷ ವಿಗ್ರಹಗಳು: ಹರಿಹರ ರಸ್ತೆಯ ಬಳಿ ಭಾವಸಾರ ಕ್ಷತ್ರೀಯ ನವಯುವಕ ಮಂಡಳಿಯು 15 ಅಡಿ ಎತ್ತರದ ಪಂಚಮುಖಿ ಗಣೇಶನ ವಿಗ್ರಹ ಪ್ರತಿಷ್ಠಾಪಿದೆ. ವೈವಿಧ್ಯಮಯ ವರ್ಣಗಳಿಂದ ಕೂಡಿದ ವಿಗ್ರಹವು ಸುಂದರ ಹಾಗೂ ಭಕ್ತಿಯನ್ನು ಸ್ಫೂರಿಸುತ್ತಿದೆ. 41 ವರ್ಷಗಳಿಂದ ಮಂಡಳಿಯು ಮೂರ್ತಿ ಪ್ರತಿಷ್ಠಾಪಿಸುತ್ತಾ ಬಂದಿದೆ. ಒಂಭತ್ತನೇ ದಿನಕ್ಕೆ ಗಣೇಶ ವಿಸರ್ಜನೆ ನಡೆಯಲಿದೆ.

ಲೋಹರವಾಡಿ ರಸ್ತೆಯಲ್ಲಿ ಕಲಾತ್ಮಕವಾಗಿ ನಿರ್ಮಿಸಿರುವ 45 ಅಡಿ ಎತ್ತರದ ‘ಗಂಗೋತ್ರಿ’ ಬೆಟ್ಟವು ಗಮನ ಸೆಳೆಯುತ್ತಿದೆ. ಬೆಟ್ಟದ ಮೇಲಿನಿಂದ ಗಂಗಾ ನದಿ ಹರಿದು ಬರುವಂತೆ ಚಿತ್ರಿಸಲಾಗಿದೆ. ಬೆಟ್ಟದಡಿ ಗಣೇಶ ಮಂದಿರ ಮಾಡಿ, ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ರಾಯಚೂರು ಗಜಾನನ ಡೆಕೊರೇಟರ್‌ ಕಲಾವಿದ ಅರುಣ ಜೋಶಿ ಅವರು ಇದನ್ನು 15 ದಿನಗಳಲ್ಲಿ ಸಿದ್ಧಪಡಿಸಿದ್ದಾರೆ. ಲೋಹರವಾಡಿ ಮಾರ್ಗದಲ್ಲಿರುವ ವ್ಯಾಪಾರಿಗಳು ಹಲವು ದಶಕಗಳಿಂದ ಗಣೇಶ ಪ್ರತಿಷ್ಠಾಪನೆ ಮಾಡುತ್ತಾ ಬಂದಿರುವುದು ಗಮನಾರ್ಹ.

ಮಕ್ತಲಪೇಟೆ ಮತ್ತು ಬ್ರೇಸ್ತವಾರ ಪೇಟೆ ನಿವಾಸಿಗಳು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 23 ವರ್ಷಗಳಿಂದ ತುಂಬಾ ವಿಶೇಷವಾದ ಗಣೇಶನನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಈ ವರ್ಷ ಫಳಫಳಿಸುವ ಮುತ್ತುಗಳಿಂದ ಕೂಡಿದ ಗಣೇಶನ ಪ್ರತಿಮೆಯನ್ನು ಸಿದ್ಧಗೊಳಿಸಲಾಗಿದೆ. ‘ಈ ಹಿಂದಿನ ವರ್ಷಗಳಲ್ಲಿ ಬಾಸ್ಮತಿ ಅಕ್ಕಿ, ರುದ್ರಾಕ್ಷಿ, ಕವಡೆ, ಲಿಂಗ, ಶಂಕು, ತುಳಸಿಮಣಿ.. ಹೀಗೆ ಪ್ರತಿ ಸಲ ಬೇರೆ ಬೇರೆ ಗಣೇಶನ ವಿಗ್ರಹಗಳನ್ನು ಮಾಡಲಾಗಿತ್ತು. ಸಾಕಷ್ಟು ಜನರು ಭೇಟಿ ನೀಡಿ ದರ್ಶನ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಮಂಡಳಿಯ ಗುರುಸ್ವಾಮಿ ಗುಬ್ಬಲ ಹೇಳಿದರು.

ಮುನ್ನೂರವಾಡಿಯಲ್ಲಿ ಶ್ರೀ ಲಕ್ಷ್ಮಮ್ಮ ದೇವಸ್ಥಾನದ ಬಳಿ ಶ್ರೀ ಮಹಾಲಕ್ಷ್ಮೀದೇವಿ ಗಜಾನನ ಯುವ ಸಮಿತಿಯಿಂದ ನೀಲಿ ವರ್ಣದ ಬೃಹತ್‌ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ನೋಡುಗರನ್ನು ಬೆರಗುಗೊಳಿಸುಂತಿದೆ. 23 ಅಡಿ ಎತ್ತರ ಹಾಗೂ 22 ಅಡಿ ಅಗಲವಿರುವ ವಿಗ್ರಹವು ಸುಂದರವಾಗಿದೆ. ಐದನೇ ದಿನ ವಿಸರ್ಜನೆ ಮಾಡಲಾಗುತ್ತದೆ.

ಚಂದ್ರಮೌಳೇಶ್ವರ ವೃತ್ತದ ಬಳಿ ಶ್ರೀ ಚಂದ್ರಮೌಳೇಶ್ವರ ಗಜಾನನ ಭಕ್ತಿ ಮಂಡಳಿಯು ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿದೆ. ಮಣ್ಣಿನಿಂದ ಮಾಡಿರುವ ಈ ಗಣಪತಿ ವಿಗ್ರಹದ ದರ್ಶನದಿಂದ ಧನ್ಯತೆ ಮೂಡುತ್ತದೆ. ತಿನ್‌ ಕಂದಿಲ್‌ನಲ್ಲಿ ಪ್ರತಿಷ್ಠಾಪಿಸಿರುವ ನವಧಾನ್ಯ ಗಣಪತಿಯು ಚಿತ್ತಾಕರ್ಷಕವಾಗಿದೆ.

ವೈವಿಧ್ಯಮಯವಾಗಿ ಅಲಂಕೃತಗೊಂಡ ಹಾಗೂ ವಿವಿಧ ಆಕಾರದಲ್ಲಿರುವ ಗಣೇಶನನ್ನು ದರ್ಶನ ಮಾಡುವುದಕ್ಕೆ ಆಸ್ತಿಕರಿಗೆ ಇದು ಸಕಾಲ. ನಾಸ್ತಿಕರು ಸಹ ಗಣೇಶನೊಂದಿಗೆ ಅರಳಿದ ಕಲೆಯನ್ನು ನೋಡಿ ಸಂತೋಷ ಪಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !