ಮಂಗಳವಾರ, ಆಗಸ್ಟ್ 20, 2019
27 °C
ಗುರ್ಜಾಪುರ ಗ್ರಾಮದ ಜನರ ಪುನರ್ವಸತಿ ಕೇಂದ್ರಗಳ ದುಃಸ್ಥಿತಿ

‘ಆಸರೆ’ ಮನೆಗಳೆದುರು ಮುಳ್ಳುಜಾಲಿ; ಒಳಗೆ ಖಾಲಿಖಾಲಿ

Published:
Updated:

ರಾಯಚೂರು: ಮನೆಗಳಿಗೆ ಕೃಷ್ಣಾನದಿ ಪ್ರವಾಹ ನೀರು ನುಗ್ಗಿರುವುದರಿಂದ ಮುಳುಗುವ ಭೀತಿಗೊಳಗಾಗಿ ಗ್ರಾಮ ತೊರೆದಿರುವ ತಾಲ್ಲೂಕಿನ ಗುರ್ಜಾಪುರ ಜನರು 2009ರಲ್ಲಿ ಅನುಭವಿಸಿದ್ದ ಸಂಕಷ್ಟ ನೆನಪಿಸಿಕೊಂಡು, ಸರ್ಕಾರಿ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

‘ಪ್ರವಾಹ ಬಂದಾಗ ಮಾತ್ರ ಗ್ರಾಮಕ್ಕೆ ಬರುವ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ಅರಿಷಿಣಗಿ ಹತ್ತಿರ 2009ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮನೆಗಳನ್ನು ಕಟ್ಟಿಸಿದ್ದರೂ ಏನೂ ವ್ಯವಸ್ಥೆ ಮಾಡಿಲ್ಲ. ‘ಕತ್ತೆ ಮುಖಕ್ಕೆ ಸ್ನೋ.. ಪೌಡರ್‌’ ಹಚ್ಚಿದಂತೆ ಮಾಡಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

ಟ್ರ್ಯಾಕ್ಟರ್‌, ಟಂಟಂ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಮನೆ ವಸ್ತುಗಳನ್ನೆಲ್ಲ ಮೂಟೆ ಕಟ್ಟಿ ತುಂಬಿಸುತ್ತಿದ್ದ ಗ್ರಾಮದ ಜನರಲ್ಲಿ ದುಃಖ ಮಡುಗಟ್ಟಿತ್ತು. ಪರಿಹಾರ ಕೇಂದ್ರದಲ್ಲಿ ಮೂಟೆಗಳನ್ನು ಹೇಗೆ ಇಟ್ಟುಕೊಳ್ಳುವುದು, ಆಭರಣಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಜಾನುವಾರುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಚಿಂತೆಯಿಂದಲೇ ಒಂದೊಂದೆ ಕುಟುಂಬವು ಗ್ರಾಮ ತೊರೆಯುತ್ತಿದ್ದ ನೋಟ ಮನಕಲುವಂತಿತ್ತು.

ಸುಮಾರು 600 ಮತಗಳಿರುವ ಚಿಕ್ಕಗ್ರಾಮ ಗುರ್ಜಾಪುರ. ಗ್ರಾಮದ ಸಮೀಪದಲ್ಲಿಯೇ ಕೃಷ್ಣಾ ಮತ್ತು ಭೀಮಾ ನದಿಗಳು ಸಂಗಮವಾಗುವುದರಿಂದ ಪ್ರತಿವರ್ಷವೂ ಪ್ರವಾಹ ಭೀತಿ ನಿರ್ಮಾಣವಾಗುತ್ತದೆ. ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕಾಗಿ ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಿದ್ದರೂ ಇದುವರೆಗೂ ಉದ್ದೇಶ ಈಡೇರಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಗೊಳಿಸದ ಕಾರಣ ಮತ್ತು ಮನೆಗಳನ್ನು ಹಂಚಿಕೆ ಮಾಡದಿರುವುದರಿಂದ ಹೊಸ ಮನೆಗಳಿಗೆ ಜನರು ಹೋಗಿಲ್ಲ.

ಹಾಳುಬಿದ್ದ ಮನೆಗಳು: ಗುರ್ಜಾಪುರ ಜನರಿಗಾಗಿ ಲೋಕೋಪಯೋಗಿ ಇಲಾಖೆಯಿಂದ 70 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳಿಗೆ ಸಂಪರ್ಕ ರಸ್ತೆಯಿಲ್ಲ, ನೀರಿನ ಸಂಪರ್ಕವಿಲ್ಲ ಹಾಗೂ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಮನೆ ಕಟ್ಟಡ ಕಾಮಗಾರಿ ಸಮಪರ್ಕವಾಗಿ ಪೂರ್ಣಗೊಳಿಸಿಲ್ಲ. ಕಳಪೆ ಕಾಮಗಾರಿ ಎಂಬುದಕ್ಕೆ ಅನೇಕ ನಿದರ್ಶನಗಳು ಸಿಗುತ್ತವೆ. ಮನೆಗಳ ಸುತ್ತಲೂ ಜಾಲಿಮುಳ್ಳಿನ ಗಿಡಗಳು ಬೆಳೆದಿದ್ದು, ಭೂತದ ಮನೆಗಳಂತೆ ಬದಲಾಗಿವೆ. ಮನೆಯೊಳಗೆ ನೆಲ ಸಮತಟ್ಟುಗೊಳಿಸಿಲ್ಲ.

ಅನೈತಿಕ ತಾಣಗಳಾಗಿ ಬದಲಾದ ಮನೆಗಳಲ್ಲಿ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರದಿಂದ ಅನುದಾನ ಒದಗಿಸಿದ್ದರೂ ಉದ್ದೇಶ ಈಡೇರದೆ ಇರುವುದರಿಂದ ಗುರ್ಜಾಪುರದ ಗ್ರಾಮಸ್ಥರು ಪ್ರವಾಹ ಸಂಕಷ್ಟದಿಂದ ಪಾರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ.

ಸ್ವಾಭಿಮಾನಿ ಮಲ್ಲಮ್ಮ: ‘ಊರಲ್ಲಿ ನೀರು ಬಂದಿದೆ. ಮೇಕೆ ಮರಿಗಳೊಂದಿಗೆ ಬೇರೆ ಊರಿಗೆ ಹೋಗುವುದಕ್ಕೆ ಆಗುವುದಿಲ್ಲ. ಎಷ್ಟೇ ಕಷ್ಟ ಅನಿಸಿದರೂ ಈ ಕತ್ತಲೆಯ ಮನೆಯೊಳಗೆ ಒಂದಿಷ್ಟು ದಿನಗಳ ಮಟ್ಟಿಗೆ ಇರುತ್ತೇನೆ. ಕರೆಂಟ್‌ಯಿಲ್ಲ, ಆದ್ರೂ ಕಾಲಕಳೆಯಬೇಕು’ ಎಂದು ಗುರ್ಜಾಪುರದಿಂದ ಹಾಳುಬಿದ್ದ ‘ಆಸರೆ’ ಮನೆಯತ್ತ ಬಂದಿದ್ದ ವಯೋವೃದ್ಧೆಯಾದ ಮಲ್ಲಮ್ಮ ಹೇಳಿದ ಮಾತಿದು.

ಹಾಳುಬಿದ್ದ ಮನೆಯೊಂದನ್ನು ಓರಣಗೊಳಿಸುತ್ತಾ ಕುಳಿತಿದ್ದ ವಯೋವೃದ್ಧೆಯೊಬ್ಬರನ್ನು ನೋಡಿ ಅಚ್ಚರಿಗೊಂಡು ವಿಚಾರಿಸಿದಾಗ, ಗ್ರಾಮದ ಸಂಕಷ್ಟದ ಬಗ್ಗೆ ಹೇಳಿದರು. ಜಿಗರಕಲ್‌ನಲ್ಲಿ ಪರಿಹಾರ ಕೇಂದ್ರಕ್ಕೆ ಏಕೆ ಹೋಗಿಲ್ಲ ಎಂದು ಕೇಳಿದಾಗ, ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದರು. ಸ್ವಾಭಿಮಾನ ಬಿಟ್ಟು ಬೇರೆ ಊರಿಗೆ ಹೋಗುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ ಎಂದರು.

ಸಂಬಂಧಿಗಳ ‘ಆಸರೆ’
ಗುರ್ಜಾಪುರದೊಳಗೆ ನೀರು ನುಗ್ಗಿದೆ ಎನ್ನುವ ಸುದ್ದಿ ತಿಳಿದು, ಗ್ರಾಮದೊಳಗೆ ಸಂಬಂಧಿಕರನ್ನು ಹೊಂದಿದ ಕೆಲವರು ತಮ್ಮೂರಿಗೆ ಬೀಗರದನ್ನು ಕರೆದೊಯ್ಯಲು ಟಂಟಂ ತೆಗೆದುಕೊಂಡು ಬಂದಿರುವುದು ಕಂಡುಬಂತು. ಬಹಳಷ್ಟು ಕುಟುಂಬಗಳು ಸಂಬಂಧಿಗಳ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕೆಲವು ಕುಟುಂಬಗಳು ಸರಕುಗಳನ್ನು ಮಾತ್ರ ಸಂಬಂಧಿಗಳ ಮನೆಯಲ್ಲಿಟ್ಟು, ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ.

*
ಗುರ್ಜಾಪುರದ ಜನರಿಗಾಗಿ ಮನೆಗಳನ್ನು ಕಟ್ಟಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಇವರೆಗೂ ಮನೆಗಳನ್ನು ಹಂಚಿಲ್ಲ. ಹಕ್ಕುಪತ್ರ ಇಲ್ಲದೆ ಅಲ್ಲಿಗೇ ಯಾವ ಆಧಾರ ಇಟ್ಟುಕೊಂಡು ಹೋಗಬೇಕು?
-ಗುರಮ್ಮ, ಗುರ್ಜಾಪುರ ನಿವಾಸಿ

Post Comments (+)