ಶನಿವಾರ, ನವೆಂಬರ್ 23, 2019
18 °C
ಪುರಸಭೆ ಆಶ್ರಯ ಬಡಾವಣೆಗಳು ಕೊಳಗೇರಿ ಪ್ರದೇಶಗಳಾಗಿ ಮಾರ್ಪಾಡು

ಸೌಲಭ್ಯ ಕೊರತೆ: ಪಾಳುಬಿದ್ದ ಬಡಾವಣೆ

Published:
Updated:
Prajavani

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 9 ಆಶ್ರಯ ಬಡಾವಣೆಗಳಿದ್ದು, 5 ಬಡಾವಣೆಗಳಲ್ಲಿ ವಿದ್ಯುತ್‌ ಮತ್ತು ಅಸಮರ್ಪಕ ಕುಡಿವ ನೀರು ಬಿಟ್ಟರೆ ಉಳಿದಂತೆ ಎಲ್ಲಾ ಬಡಾವಣೆಗಳು ಅಗತ್ಯ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ.ಇದು ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಸಬಾಲಿಂಗಸುಗೂರು–3, ಹುಲಿಗುಡ್ಡ–1, ಕರಡಕಲ್ಲ–1, ಲಿಂಗಸುಗೂರು–4 ಆಶ್ರಯ ಬಡಾವಣೆಗಳಿದ್ದು ಯಾವೊಂದು ಬಡಾವಣೆಗಳಲ್ಲಿ ಶಾಲೆ, ಆರೋಗ್ಯ ಕೇಂದ್ರ, ಅಂಗನವಾಡಿ, ಉದ್ಯಾನ, ಸಾರ್ವಜನಿಕ ಉದ್ದೇಶ ಸೇರಿದಂತೆ ಏನೊಂದು ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೆ ಬಡ ಜನರಿಗೆ ಕಾಟಾಚಾರಕ್ಕೆ ನಿವೇಶನಗಳ ಹಂಚಿಕೆ ಮಾಡಿದ್ದು ನೋವಿನ ಸಂಗತಿ.

ಕಸಬಾಲಿಂಗಸುಗೂರು– 1 ಬಡಾವಣೆ, ಹುಲಿಗುಡ್ಡ, ಕರಡಕಲ್ಲ ಹಾಗೂ ಲಿಂಗಸುಗೂರು– 2 ಬಡಾವಣೆಗಳಲ್ಲಿ ಸೌಲಭ್ಯಗಳ ಕೊರತೆ ಮಧ್ಯೆಯು ಮನೆಗಳು ತಲೆ ಎತ್ತಿ ನಿಂತಿವೆ. 12 ರಿಂದ 15 ವರ್ಷಗಳಾದರೂ ರಸ್ತೆ, ಚರಂಡಿ, ಶುದ್ಧ ಕುಡಿವ ನೀರು ಸೇರಿದಂತೆ ನಾಗರಿಕ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಿಲ್ಲ. ಪಟ್ಟಣ ಪ್ರದೇಶದಲ್ಲಿರುವ ಬಡಾವಣೆ ಜನತೆ ಇಂದಿಗೂ ಸಂಕಷ್ಟದ ಬದುಕು ಕಟ್ಟಿಕೊಂಡಿದ್ದು ಕಾಣಸಿಗುತ್ತದೆ.

ಕಸಬಾಲಿಂಗಸುಗೂರು–2, ಲಿಂಗಸುಗೂರು–2 ಬಡಾವಣೆಗಳ ನಿವೇಶನಗಳು ಎಲ್ಲಿ ಇವೆ ಎಂದು ಹುಡುಕಾಟ ನಡೆಸುವಂತಹ ದುಸ್ಥಿತಿಗೆ ಬಡಾವಣೆಗಳು ತಲುಪಿವೆ. ಅದರಲ್ಲೂ ರಾಯಚೂರು ರಸ್ತೆಯ ಆಶ್ರಯ ಬಡಾವಣೆಗೆ 2003 ಮಾರ್ಚ್‌ 28ರಂದು ಕ್ಷೇತ್ರ 3ಎಕರೆ 15ಗುಂಟೆ ಜಮೀನು ಖರೀದಿ ಮಾಡಲಾಗಿದೆ. ನಿವೇಶನ ಕ್ಷೇತ್ರ 20 ಅಡಿ ಉದ್ದ, 30ಅಡಿ ಅಗಲದ 143 ನಿವೇಶನ ನಕ್ಷೆ ಸಿದ್ಧಪಡಿಸಿ 2005–06ರಲ್ಲಿ ಹಂಚಿಕೆ ಮಾಡಿದೆ.

2005–06ರ ನಂತರದಲ್ಲಿ ರಾಯಚೂರು ರಸ್ತೆ, ಸಂತೆಬಜಾರ ಬಳಿಯ ಹಾಗೂ ಕಸಬಾಲಿಂಗಸುಗೂರು ಆಶ್ರಯ ಬಡಾವಣೆಗಳ ಅಭಿವೃದ್ದಿಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪ್ರತಿಷ್ಠಿತರ ಬಡಾವಣೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಸಾಮಾನ್ಯ ಜನತೆ ಬಡಾವಣೆಗಳಿಗೆ ಕನಿಷ್ಠ ಸೌಲಭ್ಯಗಳು ನೀಡುವಲ್ಲಿ ತಾರತಮ್ಯ ನಡೆದಿದೆ ಎಂದು ಸಮಾಜ ಸೇವಕ ಜಾಫರ್‌ಹುಸೇನ ಫೂಲವಾಲೆ ದೂರಿದರು.

ವಿವಿಧ ವಸತಿ ಯೋಜನೆಗಳಡಿ ಕಡು ಬಡವರಿಗೆ ಮನೆಗಳ ನಿರ್ಮಾಣಕ್ಕೆ ಬರುತ್ತಿರುವ ಸೌಲಭ್ಯಗಳನ್ನು ಕೂಡ ಪ್ರತಿನಿಧಿಗಳ ಹಿಂಬಾಲಕರ ಪಾಲಾಗುತ್ತಿವೆ. ಕೆಲವರಿಗೆ ಮಾತ್ರ ವಾಜಪೇಯಿ ನಗರ ವಸತಿ ಯೋಜನೆಯಡಿ ಅನುದಾನ ನೀಡಿದ್ದು ಹಣಕಾಸಿನ ಕೊರತೆಯಿಂದ ಆ ಮನೆಗಳು ಅಪೂರ್ಣಾವಸ್ಥೆಯಲ್ಲಿ ನಿಂತಿವೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಒತ್ತಾಯಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ಸಂಪರ್ಕಿಸಿದಾಗ, ‘ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಗಳು ಈ ಹಿಂದೆಯೆ ನಿರ್ಮಾಣಗೊಂಡಿವೆ. ಅಗತ್ಯ ಸೌಲಭ್ಯಗಳ ಜೊತೆ ಉದ್ಯಾನ, ಶಾಲೆ, ಅಂಗನವಾಡಿ, ಸಾರ್ವಜನಿಕ ಉದ್ದೇಶಿತ ಬಳಕೆಗೆ ಖುಲ್ಲಾ ಜಾಗೆ ಬಿಡಬೇಕಿತ್ತು. ಅದ್ಯಾವುದರ ನೀಲ ನಕ್ಷೆಯಲ್ಲಿ ಇಲ್ಲ. ಅಗತ್ಯ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಅನುದಾನ ತಂದುಕೊಳ್ಳಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)