ಶುಕ್ರವಾರ, ನವೆಂಬರ್ 22, 2019
26 °C

ಅಥ್ಲೆಟಿಕ್ಸ್‌: ಪ್ರೀತಿ ಬಹುಮುಖ ಪ್ರತಿಭೆ

Published:
Updated:
Prajavani

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್‌) ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ) ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪ್ರೀತಿ ಶಾಲಾ ಮಟ್ಟದಿಂದ ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾ ರಾಷ್ಟ್ರಮಟ್ಟಕ್ಕೆ ತಲುಪಿರುವ ಬಹುಮುಖ ಪ್ರತಿಭಾನ್ವಿತರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ 2019–20 ಸಾಲಿನ ಅಕ್ಟೋಬರ್‌ 25 ರಂದು ಲಿಂಗಸೂಗೂರು ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ ಇವರಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿದ್ದು ಕ್ರೀಡಾ ಸಾಧನೆಗೆ ವಿಶೇಷ ಸ್ಪೂರ್ತಿಯಾಯಿತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.

ಶಿಕ್ಷಣ ಇಲಾಖೆಯಿಂದ ನ.9 ರಂದು ಮಂಡ್ಯದಲ್ಲಿ ಆಯೋಜಿಸಿರುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ 400 ಮೀಟರ್ ಓಟದ ಪಂದ್ಯಾವಳಿಗೂ ಆಯ್ಕೆಯಾಗಿದ್ದು ರಾಜ್ಯದ ಕೀರ್ತಿಯನ್ನು ಹೆಚ್ಚಿಸುತ್ತಿರುವುದು ಗಮನಾರ್ಹ.

ಅದೇ ರೀತಿ ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ) ಪಬ್ಲಿಕ್ ಶಾಲೆಗಳ ಸಹಯೋಗದಲ್ಲಿ ನ.4 ರಂದು ಹೈದರಬಾದ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ಕ್ರೀಡೆಯಲ್ಲಿ 400 ಮೀ ಮೀಟರ್‌ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ರಾಯಚೂರು ತಾಲ್ಲೂಕಿನ ಡಿ.ಯದ್ಲಾಪುರ ಗ್ರಾಮದಲ್ಲಿರುವ ತಂದೆ ಗಂಗಣ್ಣ ಅವರು ಆರ್‌ಟಿಪಿಎಸ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.ಪಾಲಕರೇ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದ್ದಾರೆ. ದೈಹಿಕ ಶಿಕ್ಷಕ ನರಸಿಂಹ ಅವರು ಪ್ರೀತಿ ಅವರಿಗೆ ತರಬೇತುದಾರರಾಗಿದ್ದಾರೆ.

ಡಿಎವಿ ಆಂಗ್ಲ ಮಾಧ್ಯಮದ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದು , ಓಟದ ಆಟವನ್ನು ಹವ್ಯಾಸವಾಗಿ ಮಾಡಿಕೊಂಡು ಮತ್ತಷ್ಟು ಸಾಧನೆ ಮಾಡುವ ಛಲ ಹೊಂದಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಪ್ರೌಢಶಾಲಾ ಹಂತದಲ್ಲಿ ಓಟದ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಪ್ರೀತಿ ಅವರು, ಮುಂಬರುವ ದಿನಗಳಲ್ಲಿ ದೇಶದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉತ್ಸಾಹ ಹೊಂದಿದ್ದಾರೆ.

ಮುಖ್ಯವಾಗಿ ಸೂಕ್ತ ಮಾರ್ಗದರ್ಶನ ನೀಡುವ ತರಬೇತಿದಾರರು ಶಾಲೆಯಲ್ಲಿ ಇದ್ದಾರೆ. ಶಾಲಾ ಪ್ರಿನ್ಸಿಪಾಲ್‌ ವಿಜಯಕುಮಾರ ಅವರ ಮಾರ್ಗದರ್ಶನದೊಂದಿಗೆ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದಾರೆ.

ಪ್ರತಿಕ್ರಿಯಿಸಿ (+)