ಗುರುವಾರ , ನವೆಂಬರ್ 14, 2019
18 °C
ಕನ್ನಡಮ್ಮನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಮಾತು

ಜನರ ಸಮಸ್ಯೆಗಳಿಗೆ ಸ್ಪಂದಿಸುವೆ

Published:
Updated:
Prajavani

ರಾಯಚೂರು: ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸ್ನೇಹಿ ಪೊಲೀಸ್‌ ಆಡಳಿತ ಜಾರಿಗೊಳಿಸಬೇಕು ಎನ್ನುವ ಮನೋಭಾವ ಹೊಂದಿದ್ದೇನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾಸಂಕುಲ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಕನ್ನಡಮ್ಮನಿಗೆ ನುಡಿನಮನ, ಎಸ್‌ಪಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ನಾಲ್ಕು ಗೋಡೆಗಳ ಮಧ್ಯೆದಲ್ಲಿ ಕಾರ್ಯನಿರ್ವಹಿಸುವುದು ನನಗೆ ಇಷ್ಟವಿಲ್ಲ. ಜನರೊಂದಿಗೆ ಬೆರೆಯಬೇಕು. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಬೇಕು ಎಂದರು.

ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಸಾಧ್ಯವಾದಷ್ಟು ಸುತ್ತಮುತ್ತಲೂ ಗಿಡಗಳನ್ನು ನೆಟ್ಟು, ಬೆಳೆಸಬೇಕು. ಇದಕ್ಕಾಗಿ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಿರುವುದು ಅವಶ್ಯ. ಈ ಕಾರ್ಯಕ್ಕಾಗಿ 45 ಕ್ಕೂ ಅಧಿಕ ಸಂಘ–ಸಂಸ್ಥೆಗಳು, ನೂರಾರು ಜನರು ನಿತ್ಯ ಬೆಳಿಗ್ಗೆ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರವನ್ನು ನಾವು ಉಳಿಸಿದರೆ ಮಾತ್ರ, ಅದು ನಮ್ಮನ್ನು ಕಾಪಾಡುತ್ತದೆ ಎಂದರು.

ಮಕ್ಕಳು ಮೊಬೈಲ್‌ ಬಳಸುವುದರಿಂದ ಬುದ್ಧಿಯಿಂದ ಮಾಡುವ ಕೆಲಸಗಳು ನಿಂತುಹೋಗುತ್ತವೆ. ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಡಬಾರದು. ರಸ್ತೆಯಲ್ಲಿ ಸಂಚಾರ ಮಾಡುವಾಗ ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು. ಹೆಲ್ಮೆಟ್‌ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎ.ವಸಂತಕುಮಾರ್‌ ಮಾತನಾಡಿ, ಕನ್ನಡಪರ ಕಾರ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಕ್ರಿಯವಾಗಿ ಮಾಡುತ್ತಿರುವ ಕಲಾಸಂಕುಲದ ಕಾರ್ಯ ಶ್ಲಾಘನೀಯ ಎಂದರು.

ಡಾಕ್ಟರೇಟ್‌ ಪದವಿಪಡೆದ ಡಾ.ಜೆ.ಎಲ್‌.ಈರಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ.ತಾನಾಜಿ ಕಲ್ಯಾಣಕರ್‌ ಅವರಿಗೆ ‘ಕರ್ನಾಟಕ ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದಸ್ತಗೀರ್‌ ಸಾಬ್‌ ದಿನ್ನಿ, ಕಲಾಸಂಕುಲದ ಅಧ್ಯಕ್ಷೆ ರೇಖಾ ಬಡಿಗೇರ, ಕಿರುತೆರೆ ನಟಿ ಮೀನಾ ಇದ್ದರು.

ಗ್ರೀನ್‌ ರಾಯಚೂರು ಸಂಸ್ಥೆಯ ರಾಜೇಂದ್ರಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಸಂಕುಲದ ಕಾರ್ಯದರ್ಶಿ ಮಾರುತಿ ಬಡಿಗೇರ ಸ್ವಾಗತಿಸಿದರು.

ಗಾಯನ ಕಲಾವಿದರಾದ ಅಮರೇಗೌಡ, ವೇಣು, ಚಿರು, ಮಂಜುಳಾ, ನರೇಂದ್ರ, ಪ್ರಾಣೇಶ ಗಾಣದಾಳ, ಶ್ರೀ ಕಾರ್ತಿಕ್‌ ಅವರು ಕನ್ನಡದ ಹಳೇ ಹಾಡುಗಳನ್ನು ಹಾಡಿದರು.

ಪ್ರತಿಕ್ರಿಯಿಸಿ (+)