ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿ

ಆಟೋ ಚಾಲಕರೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವೇದಮೂರ್ತಿ ಸಂವಾದ
Last Updated 19 ಜೂನ್ 2019, 15:34 IST
ಅಕ್ಷರ ಗಾತ್ರ

ರಾಯಚೂರು:ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲು ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಟೋ ಚಾಲಕರು ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದರು.

ಆಟೋ ಚಾಲಕರ ಬಗ್ಗೆ ಸಾರ್ವಜನಿಕರಿಂದ ಸಾಮಾನ್ಯವಾಗಿ ಆರೋಪಗಳು ಕೇಳಿ ಬರುತ್ತವೆ. ಮುಖ್ಯವಾಗಿ ಆಟೋ ಬಾಡಿಗೆ ವಿಷಯವಾಗಿ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ತಾಪತ್ರಯ ಅನುಭವಿಸುವ ಪ್ರಸಂಗಗಳು ನಡೆಯುತ್ತವೆ. ಇದನ್ನು ತಡೆಗಟ್ಟಲು ಆಟೋ ಪ್ರೀಪೇಯ್ಡ್‌ ವ್ಯವಸ್ಥೆ ಜಾರಿ ಮಾಡುವುದು ಅನಿವಾರ್ಯ ಹಾಗೂ ಅಗತ್ಯವಿದೆ ಎಂದರು.

ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಆರಂಭದಲ್ಲಿ ಕಷ್ಟವಾದರೂ ಕ್ರಮೇಣ ರೂಢಿಗೆ ಬರುತ್ತದೆ. ಪ್ರೀಪೇಯ್ಡ್‌ ವ್ಯವಸ್ಥೆ ಜಾರಿಗೆ ಆಟೋ ಚಾಲಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಸದ್ಯಕ್ಕೆ ನಗರದಲ್ಲಿ ಬಹುತೇಕ ಮುಖ್ಯ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲಕರವಾಗಿವೆ. ರಸ್ತೆಗಳ ಸುಧಾರಣೆ ನಿರಂತರ ನಡೆಯುತ್ತಿರುತ್ತದೆ. ಇದು ಆಡಳಿತ ವ್ಯವಸ್ಥೆಯ ಭಾಗವಾಗಿದೆ. ಆದರೆ, ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಪೊಲೀಸ್‌ ಇಲಾಖೆಯಿಂದ ಮಾಡಬೇಕಾಗುತ್ತದೆ. ಸುರಕ್ಷಿತ ಸಂಚಾರ ವ್ಯವಸ್ಥೆ ಬರುವುದಕ್ಕೆ ಆಟೋ ಚಾಲಕರು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಕೋರಿದರು.

ಪರವಾನಿಗೆ ನೀಡುವ ವಿಷಯಕ್ಕೆ ಸಂಬಂಧಿಸಿಂತೆ ನಾಲ್ಕು ವರ್ಷಗಳ ಹಿಂದೆ ಆಟೋ ಚಾಲಕರಿಂದ ನಗರ ಸಂಚಾರ ಠಾಣೆಯಿಂದ ಹಣ ಸಂಗ್ರಹಿಸಿದ್ದಾರೆ ಎನ್ನುವ ಸಂಗತಿ ಬಗ್ಗೆ ಪರಿಶೀಲಿಸಲಾಗುವುದು. ಇಲಾಖೆಯಿಂದ ತನಿಖೆ ಮಾಡಲಾಗುವುದು. ತಪ್ಪಿತಸ್ಥರು ಕಂಡುಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಟೋ ಚಾಲಕರಿಗೆ ಚಾಲನಾ ಪರವಾನಿಗೆ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಚಾಲಕರೆಲ್ಲ ಆಟೋಗಳಿಗೆ ವಿಮೆ, ಚಾಲನಾ ಪರವಾನಿಗೆ, ಸಮವಸ್ತ್ರ ಧರಿಸುವುದನ್ನು ರೂಢಿಸಿಕೊಳ್ಳಬೇಕು. ರಾತ್ರಿ ವೇಳೆ ನಡೆಯುವ ಕಳ್ಳತನ ಪ್ರಕರಣಗಳನ್ನು ತಡೆಯುವುದಕ್ಕೆ ಆಟೋ ಚಾಲಕರ ಸಹಕಾರ ಬೇಕಾಗುತ್ತದೆ ಎಂದು ಹೇಳಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಶಾಲಂ ಮಾತನಾಡಿ, ನಗರದಲ್ಲಿ ಖಾಸಗಿ ಮತ್ತು ಸರ್ಕಾರಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಟೋ ಚಾಲಕರು ನಿಲುಗಡೆ ಮಾಡುವುದಕ್ಕೆ ತೊಂದರೆ ಅನುಭವಿಸಬೇಕಾಗಿದೆ. ಸೂಪರ್‌ ಮಾರ್ಕೆಟ್‌ ಸೇರಿದಂತೆ ಜನದಟ್ಟಣೆ ಕಂಡು ಬರುವ ಸ್ಥಳಗಳಲ್ಲಿ ಆಟೋ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು, ‍ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಶಾಂತ್‌, ವಿವಿಧ ಪೊಲೀಸ್‌ ಠಾಣೆಗಳ ‍ಪಿಎಸ್‌ಐಗಳು, ಸಿಪಿಐಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT