ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಆಯ್ಕೆಗೆ ಮತ ನೀಡಲು ಜನಜಾಗೃತಿ

2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 13,170 ನೋಟಾ ಮತಗಳು
Last Updated 15 ಏಪ್ರಿಲ್ 2019, 20:28 IST
ಅಕ್ಷರ ಗಾತ್ರ

ರಾಯಚೂರು: ನೋಟಾ (ಎನ್‌ಒಟಿಎ–ನನ್‌ ಆಫ್‌ ದಿ ಅಬೋವ್‌) ಮತ ಚಲಾವಣೆ ಮಾಡುವುದಕ್ಕಿಂತಲೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಒಬ್ಬರಿಗೆ ಅಮೂಲ್ಯ ಮತ ಕೊಡಿ ಎನ್ನುವ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಜನಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ನಲಿನ್‌ ಅತುಲ್‌ ಅವರ ನೇತೃತ್ವದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಚುನಾವಣೆ ಆಯೋಗದ ಸೂಚನೆಯಂತೆ ಮತದಾನ ನಡೆಯುವ ದಿನದವರೆಗೂ ಜಾಗೃತಿ ಕಾರ್ಯಕ್ರಮಗಳು ಮುಂದುವರಿಯುತ್ತವೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೂ ಒಪ್ಪಿತವಾಗದಿದ್ದರೆ ಈ ಮೊದಲು ಕೆಲವು ಮತದಾರರು ಮತಗಟ್ಟೆಗೆ ಹೋಗುತ್ತಿರಲಿಲ್ಲ. ಮತಗಟ್ಟೆಗೆ ಹೋದರೂ ಮತ ಚಲಾಯಿಸದೆ ವಾಪಸ್‌ ಬರುತ್ತಿದ್ದ ಪ್ರಕರಣಗಳು ನಡೆಯುತ್ತಿದ್ದವು. ಸುಪ್ರೀಂಕೋರ್ಟ್‌ ಈ ಬಗ್ಗೆ 2013 ರಲ್ಲಿ ಆದೇಶ ಹೊರಡಿಸಿ ಮತದಾನದಲ್ಲಿ ’ನೋಟಾ’ ಆಯ್ಕೆಯನ್ನು ಸೇರ್ಪಡೆಗೊಳಿಸಬೇಕು ಎಂದು ಸೂಚಿಸಿತು. 2014 ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿ ನೋಟಾ ಆಯ್ಕೆಯನ್ನು ಇಡಲಾಗಿತ್ತು. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ 13,170 ಮತದಾರರು ನೋಟಾ ಚಲಾವಣೆ ಮಾಡಿದ್ದರು. ಅಭ್ಯರ್ಥಿಗಳ ಆಯ್ಕೆಗೆ ಅಸಮ್ಮತಿ ಇದೆ ಎನ್ನುವುದನ್ನು ದಾಖಲು ಮಾಡಿದ್ದರು.

‘ನೋಟಾ–ಮೇಲಿನ ಯಾವುದೂ ಇಲ್ಲ’ ಆಯ್ಕೆ ಮಾಡಬಹುದು ಎನ್ನುವ ಬಗ್ಗೆ ಈಗ ಜನಜಾಗೃತಿ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ನಡೆಯುವ ಚುನಾವಣೆಯಲ್ಲಿ ನೋಟಾವನ್ನು ಎಷ್ಟು ಮತದಾರರು ಆಯ್ಕೆ ಮಾಡುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಸಹಜವಾಗಿ ನೋಟಾ ಆಯ್ಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ರಾಜಕೀಯ ಪ್ರಜ್ಞಾವಂತರು ವಿಶ್ಲೇಷಿಸುತ್ತಿದ್ದಾರೆ. ಜಿಲ್ಲೆಯ ಮದ್ಯ ನಿಷೇಧ ಹೋರಾಟ ಸಮಿತಿಯ ಮಹಿಳಾ ಸದಸ್ಯರು ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ‘ಮದ್ಯ ನಿಷೇಧ ಬೇಡಿಕೆಗೆ ಯಾವುದೇ ರಾಜಕೀಯ ಪಕ್ಷ ಒಲವು ತೋರಿಸುತ್ತಿಲ್ಲ. ಅದಕ್ಕಾಗಿ ಸಂಘಟನೆಯ ಸದಸ್ಯರೆಲ್ಲರೂ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಿಲ್ಲ. ನೋಟಾ ಮತ ಚಲಾಯಿಸುತ್ತೇವೆ’ ಎಂದಿದ್ದಾರೆ.

‘ನೋಟಾ ಚಲಾಯಿಸುವುದಕ್ಕೆ ಕಾನೂನು ಪ್ರಕಾರ ಅವಕಾಶವಿದೆ. ಆದರೆ, ನಿಮ್ಮನ್ನಾಳುವ ನಾಯಕರನ್ನು ನೀವೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎನ್ನುವುದು ನಮ್ಮ ಸಲಹೆ. ಚುನಾವಣೆಗೆ ನಿಂತಿರುವವರಲ್ಲಿ ಒಬ್ಬರಿಗೆ ಮತ ನೀಡುವಂತೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ನೋಟಾ ಚಲಾಯಿಸುತ್ತೇವೆ ಎಂದು ಹೇಳಿರುವ ಮಹಿಳಾ ಸಂಘಟನೆಯವರು ಕಾರ್ಯಕ್ರಮಗಳನ್ನು ನಡೆಸಿದ ಕಡೆಗಳಲ್ಲೆಲ್ಲ ಸ್ವೀಪ್‌ ಚಟುವಟಿಕೆಗಳನ್ನು ಮಾಡಲಾಗಿದೆ. ಬೀದಿ ನಾಟಕಗಳು, ಶಾಲಾ ಮಕ್ಕಳಿಂದ ಅಭಿಯಾನ ಮಾಡುವುದು ಸೇರಿದಂತೆ ಹಲವು ವಿಧದಲ್ಲಿ ಮತದಾನ ಮಾಡುವುದಕ್ಕೆ ಜನಜಾಗೃತಿ ಮಾಡಲಾಗಿದೆ. ಇದೆಲ್ಲದರ ಒಟ್ಟು ಪರಿಣಾಮ ಚುನಾವಣೆ ಬಳಿಕ ಗೊತ್ತಾಗಲಿದೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ನಲಿನ್‌ ಅತುಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT