ಶುಕ್ರವಾರ, ಡಿಸೆಂಬರ್ 9, 2022
22 °C
ಎಲ್ಲೆಡೆಯಲ್ಲೂ ಮಹಾನವಮಿ ಹಬ್ಬದ ಸಂಭ್ರಮ

ಆಯುಧ ಪೂಜೆಗೆ ಸಾಮಗ್ರಿಗಳ ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನವರಾತ್ರಿಯ ಕೊನೆಯ ದಿನವಾದ ಆಯುಧಪೂಜೆಯ ಮುನ್ನಾದಿನ ಸೋಮವಾರ, ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಕಂಡುಬಂತು.

ರಾಯಚೂರಿನ ಭಂಗಿಕುಂಟಾ ರಸ್ತೆಯುದ್ದಕ್ಕೂ ಜನದಟ್ಟಣೆ ಹಾಗೂ ಫಲ, ಪುಷ್ಪ ಮಾರಾಟ ಮಾಡುವವರು ನೆರೆದಿದ್ದರು. ಎಲ್ಲರ ಕೈಯಲ್ಲೂ ಹೂವುಗಳು, ಬಾಳೆಗಿಡಗಳು, ಮಾವಿನ ತೋರಣ, ಹಣ್ಣುಗಳು, ತೆಂಗಿನಕಾಯಿ, ಕರ್ಪೂರ ಸೇರಿದಂತೆ ತರಹೇವಾರಿ ಪೂಜಾ ಸಾಮಗ್ರಿಗಳೊಂದಿಗೆ ಮಾರುಕಟ್ಟೆಯಿಂದ ಮನೆಗಳತ್ತ ತೆರಳುತ್ತಿದ್ದರು. ಈಗಷ್ಟೇ ಮಾರುಕಟ್ಟೆಗೆ ಬರುತ್ತಿದ್ದ ಜನರು ಫಲ, ಪುಷ್ಪಗಳ ಖರೀದಿಗೆ ಚೌಕಾಸಿ ಆರಂಭಿಸುತ್ತಿದ್ದ ಜನರು ಕೂಡಾ ಸಾಕಷ್ಟಿದ್ದರು. ತಡರಾತ್ರಿವರೆಗೂ ಖರೀದಿ, ಮಾರಾಟ ಭರಾಟೆ ಮುಂದುವರಿದಿತ್ತು.

ಕೋವಿಡ್‌ ಮಹಾಮಾರಿಯಿಂದ ಈ ಹಿಂದಿನ ಎರಡು ವರ್ಷಗಳು ಹಬ್ಬದ ಸಂಭ್ರಮ ಜೋರಾಗಿ ಇರಲಿಲ್ಲ. ಆದರೆ, ಈ ವರ್ಷ ಮಹಾನವಮಿ ಸಂಭ್ರಮ, ಸಡಗರವು ಎಲ್ಲೆಡೆಯಲ್ಲೂ ಗಮನ ಸೆಳೆಯುತ್ತಿದೆ. ನಗರದ ಜನರು ಮತ್ತು ಗ್ರಾಮೀಣ ಭಾಗಗಳಿಂದ ಮಾರುಕಟ್ಟೆಗೆ ಧಾವಿಸುತ್ತಿರುವ ಜನರು ವಿವಿಧ ಸಾಮಗ್ರಿಗಳು ಮತ್ತು ಬಟ್ಟೆ ಖರೀದಿಯತ್ತ ಹೆಜ್ಜೆಹಾಕುವುದು ಸಾಮಾನ್ಯವಾಗಿತ್ತು. 

ಮಹಾನವಮಿ ವಿಶೇಷ ಸಂದರ್ಭದಲ್ಲಿ ಹೊಸ ವ್ಯಾಪಾರಿ ಮಳಿಗೆಗಳು ಉದ್ಘಾಟನೆಯಾಗಿದ್ದು, ಜನರು ಮುಗಿಬಿದ್ದು ಖರೀದಿಸುತ್ತಿರುವುದು, ಪರೀಕ್ಷಿಸುತ್ತಿರುವುದು ವಿಶೇಷವಾಗಿದೆ. ಆಯುಧ ಪೂಜಾ ದಿನದಂದು ಮನೆಗಳಲ್ಲಿರುವ ಲೋಹದ ಸಾಮಗ್ರಿಗಳಿಗೆ ಪೂಜೆ ಸಲ್ಲಿಸುವುದು, ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. 

ಹೊಸ ವಾಹನಗಳ ಖರೀದಿ: ರಾಯಚೂರು ಜಿಲ್ಲೆಯಲ್ಲಿ ವಿಜಯದಶಮಿ ದಿನದಂದು ಮನೆಗಳಿಗೆ ಹೊಸ ವಾಹನಗಳನ್ನು ತಂದುಕೊಳ್ಳುವುದು ವ್ಯಾಪಕವಾಗಿದೆ. ಜಿಲ್ಲೆಯಾದ್ಯಂತ ಯಾವುದೇ ಬೈಕ್‌ ಶೋ ರೂಂ, ಕಾರುಗಳ ಶೋ ರೂಂ, ಭಾರಿ ವಾಹನಗಳ ಶೋ ರೂಂಗಳಲ್ಲಿ ವಾಹನಗಳ ಖರೀದಿಗಾಗಿ ಜನರು ನೆರೆದಿರುವುದು ಕಂಡುಬರುತ್ತಿದೆ.

ದಸರಾ ಸಂದರ್ಭದಲ್ಲಿ ಖರೀದಿಸುವ ವಾಹನಗಳಿಗೆ ವಿಶೇಷ ರಿಯಾಯ್ತಿಗಳನ್ನು ಕಂಪೆನಿಗಳು ಘೋಷಿಸಿವೆ. ಬ್ಯಾಂಕ್‌ ಸಾಲ ಸಹಿತ, ತಿಂಗಳು ಕಂತು ಆಧರಿಸಿ ವಾಹನಗಳ ಖರೀದಿಗೆ ಗ್ರಾಹಕರನ್ನು ಸೆಳೆಯಲು ಶೋ ರೋಂಗಳು ಸಾಕಷ್ಟು ಯೋಜನೆಗಳನ್ನು ಘೋಷಿಸಿವೆ.

‘ಮಹಾನವಮಿ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಹೊಸ ವಾಹನಗಳನ್ನು ಖರೀದಿಸುವುದು ಹೆಚ್ಚಾಗಿದೆ. ಆರಂಭದಲ್ಲಿ ಶೋ ರೂಂಗಳಲ್ಲಿ ಮಾತ್ರ ಎಷ್ಟು ಖರೀದಿಯಾಗಿವೆ ಎನ್ನುವ ಮಾಹಿತಿ ಇರುತ್ತದೆ. ನೋಂದಣಿ ಪ್ರಕ್ರಿಯೆ ಮುಗಿದು ತಿಂಗಳ ಕೊನೆಯಲ್ಲಿ ಆರ್‌ಟಿಓ ಕಚೇರಿಯಲ್ಲಿ ನಿಖರವಾದ ಸಂಖ್ಯೆ ಸಿಗುತ್ತದೆ‘ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.