ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 7.5 ಮೀಸಲಾತಿ ಹೋರಾಟ ನಿಲ್ಲದು; ಸಚಿವ ಬಿ.ಶ್ರೀರಾಮುಲು

Last Updated 13 ಜೂನ್ 2022, 5:05 IST
ಅಕ್ಷರ ಗಾತ್ರ

ಸಿಂಧನೂರು: ‘ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಬೇಕು ಎಂದು ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅನೇಕ ಬಾರಿ ಚರ್ಚಿಸಿದ್ದೇನೆ. ಕಾನೂನು ತೊಡಕು ಇರುವುದರಿಂದ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಾಗಮೋಹನ ದಾಸ್ ವರದಿಯಂತೆ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಜಾರಿಗೆ ತರುತ್ತೇವೆ. ಇದರಲ್ಲಿ ಅನುಮಾನ ಪಡುವ ಅಗತ್ಯವಿಲ್ಲ’ ಎಂದರು.

‘ನಗರದಲ್ಲಿ ಎಆರ್‌ಟಿಒ ಕಚೇರಿ ಆರಂಭಿಸುವಂತೆ ಸದನದಲ್ಲಿ ಹಾಗೂ ಪ್ರತ್ಯೇಕವಾಗಿ ಶಾಸಕ ವೆಂಕಟರಾವ್ ನಾಡಗೌಡ ನಿರಂತರವಾಗಿ ಒತ್ತಡ ಹಾಕುತ್ತ ಬಂದಿದ್ದಾರೆ. ಈಗಾಗಲೇ ಅನುಮೋದನೆ ನೀಡಿದ್ದೇನೆ. ಹಣಕಾಸು ಇಲಾಖೆಯಲ್ಲಿ ಕಡತ ಬಾಕಿ ಇದೆ. ಅಗತ್ಯ ಹಣ ಬಿಡುಗಡೆ ಮಾಡುವಂತೆ ನಾನು ಹಾಗೂ ನಾಡಗೌಡರು ಆದಷ್ಟು ಶೀಘ್ರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ’ ಎಂದು ಹೇಳಿದರು. ‘ಪ್ರವಾದಿಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ವಿಷಯ ನ್ಯಾಯಾಲಯದಲ್ಲಿದೆ. ಕಾಂಗ್ರೆಸ್ಸಿಗರು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ನಾವು ಗೆದ್ದಿದ್ದೇವೆ ಎಂದು ಅವರು ಹೇಳಿದರು.

ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಬಿಜೆಪಿ ಮುಖಂಡ ದೇವೇಂದ್ರಪ್ಪ ಯಾಪಲಪರ್ವಿ, ಜೆಡಿಎಸ್ ಮುಖಂಡ ಸೈಯ್ಯದ್ ಆಸೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT