ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರ ಚಿಂತನೆ ಅನುಷ್ಠಾನದಲ್ಲಿ ವಿಫಲ: ಗೋವಿಂದ ಕಾರಜೋಳ

Last Updated 6 ಸೆಪ್ಟೆಂಬರ್ 2022, 12:48 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಜಗಜ್ಯೋತಿ ಬಸವಣ್ಣನವರ ಮೂರ್ತಿ, ಭಾವಚಿತ್ರಗಳ ಪ್ರತಿಷ್ಠಾಪಿಸುತ್ತ ಹೊರಟಿರುವ ನಾವುಗಳು ವರ್ಗರಹಿತ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣದ ಕನಸು ಸಾಕಾರಗೊಳಿಸುವಲ್ಲಿ ವಿಫಲರಾಗಿದ್ದೇವೆ’ ಎಂದು ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.

ಮಂಗಳವಾರ ಹಿರಿಜಾವೂರು ಕ್ರಾಸ್‍ನಲ್ಲಿ ಅಶ್ವಾರೂಢ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ‘12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಬಸವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಥ ಬಸವಣ್ಣನವರ ವಾರಸುದಾರರ ಕುಟುಂಬಸ್ಥನಾಗಿ ಮೂರ್ತಿ ಅನಾವರಣ ಮಾಡಿದ್ದು ಖುಷಿ ತಂದಿದೆ’ ಎಂದರು.

‘ರಾಜ್ಯದಲ್ಲಿ 1 ಲಕ್ಷ 7ಸಾವಿರ ಹೆಕ್ಟೇರ್ ಜಮೀನು ಕೃಷಿಗೆ ಯೋಗ್ಯವಾಗಿದೆ. ಈ ಪೈಕಿ 66.6ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. 40ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ್ದು ಈ ಪೈಕಿ 28 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ಸೌಲಭ್ಯ ವಂಚಿತ ಜಮೀನಿಗೆ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

‘ಕೃಷ್ಣಾ ನ್ಯಾಯಾಧೀಕರಣ ರಾಜ್ಯಕ್ಕೆ 130ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿದೆ. ಆಂಧ್ರ-ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ವಿಳಂಬಕ್ಕೆ ಕಾರಣ. ಈಗಾಗಲೆ ಆಲಮಟ್ಟಿ ಜಲಾಶಯ ಕ್ರೆಸ್ಟ್ ಗೇಟ್‍ 524.562 ಅಡಿಗೆ ಎತ್ತರಿಸಲು ಮತ್ತು ಮುಳುಗಡೆಯಾಗುವ 20 ಹಳ್ಳಿಗಳ ಸ್ಥಳಾಂತರಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಶಾಸಕರಾದ ಅಮರೇಗೌಡ ಪಾಟೀಲ ಕುಷ್ಟಗಿ, ದೊಡ್ಡನಗೌಡ ಪಾಟೀಲ ಹುನಗುಂದ, ಡಿ.ಎಸ್‍ ಹೂಲಗೇರಿ ಲಿಂಗಸುಗೂರು ಮಾತನಾಡಿದರು.

ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ದೇವರಭೂಪುರದ ಗಜದಂಡ ಶಿವಾಚಾರ್ಯರು, ಯರಡೋಣಿ ಮುರುಘೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.

ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ, ಚಿತ್ತಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ರಂಗಪ್ಪ, ಲಿಂಗಸುಗೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರು. ಜೆಡಿಎಸ್‍ ಮುಖಂಡ ಸಿದ್ಧು ವೈ ಬಂಡಿ. ಉಪ ವಿಭಾಗಾಧಿಕಾರಿ ರಾಹುಲ್‍ ಸಂಕನೂರು, ತಹಶೀಲ್ದಾರ್‍ ಬಲರಾಮ್‍ ಕಟ್ಟಿಮನಿ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಅಶೋಕ ವಾಸನದ ಇದ್ದರು.

ತಪ್ಪಿತಸ್ಥರಿಗೆ ಶಿಕ್ಷೆ: ಸಚಿವ ಕಾರಜೋಳ

‘ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಯಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು’ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮಾತನಾಡಿರುವ ಆಡಿಯೋ ವೈರಲ್‌ ವಿಷಯ ಹಾಗೂ ಕನಕಗಿರಿ ಶಾಸಕರ ಭ್ರಷ್ಟಾಚಾರ ಪ್ರಕರಣದಲ್ಲಿಯೂ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT