ಬುಧವಾರ, ಜನವರಿ 20, 2021
29 °C
ಶಹರ ಪೊಲೀಸ್ ಠಾಣೆ, ವೃತ್ತ ಕಚೇರಿ ಕಟ್ಟಡ ಉದ್ಘಾಟನೆ

16 ಸಾವಿರ ಪೊಲೀಸರ ನೇಮಕಾತಿಗೆ ಚಾಲನೆ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ರಾಜ್ಯಾದ್ಯಂತ 16 ಸಾವಿರ ಪೊಲೀಸರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಪ್ರತಿ 3 ತಿಂಗಳಿಗೊಮ್ಮೆ ಹಂತ ಹಂತವಾಗಿ ನೇಮಕಾತಿಯನ್ನು ನಡೆಸಲಾಗುವುದು ಮತ್ತು 5 ವರ್ಷದೊಳಗಾಗಿ 11 ಸಾವಿರ ಪೊಲೀಸ್ ಗೃಹಗಳನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಸಿಂಧನೂರು ಶಹರ ಪೊಲೀಸ್ ಠಾಣೆ ಹಾಗೂ ವೃತ್ತ ಕಚೇರಿ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ನವಾಬರ ಕಾಲದ ಕಟ್ಟಡ ಹಾಗೂ ಪುರಾತನ ಪೊಲೀಸ್ ಕಟ್ಟಡಗಳನ್ನು ತೆಗೆದು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೊಸ ಕಟ್ಟಡಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ನಿರ್ದೇಶನದನ್ವಯ ಐಜಿಪಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಹೊಸ ಕಟ್ಟಡಗಳಿದ್ದರೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಐಜಿಪಿಗೆ ಪ್ರಸ್ತಾವನೆ ಸಲ್ಲಿಸಬೇಕು. ಜೊತೆಗೆ ಸಿಂಧನೂರಿನ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಂತ್ರಜ್ಞಾನ ಬೆಳೆದಂತೆಲ್ಲಾ ಸೈಬರ್ ಕ್ರೈಮ್‍ಗಳು ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈಗ ಸೈಬರ್ ಕಾನೂನನ್ನು ಜಾರಿಗೊಳಿಸಲಾಗಿದೆ. ಬ್ಯಾಂಕ್‍ಗಳಲ್ಲಿ ಖಾತೆಗಳ ಮೂಲಕ ಹಣವನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುಗಳನ್ನು ನಕಲಿ ಮಾಡಿ ಹಣ ಲಪಟಾಯಿಸುವ ದಂಧೆಗೆ ಕಡಿವಾಣ ಹಾಕಲಾಗುವುದು. ಕೇವಲ ವಾಟ್ಸ್‌ಆ್ಯಪ್‌ ಮಾಹಿತಿ ಬಂದರೆ ಸಾಕು, ಹಣ ಲಪಟಾಯಿಸಿದ ಹಾಗೂ ಹಣ ಕಳೆದುಕೊಂಡವರ ಎರಡು ಖಾತೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸೀಜ್ ಮಾಡಲಾಗುವುದು ಎಂದು ಹೇಳಿದರು.

ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಕಳೆದ 10 ವರ್ಷದಲ್ಲಿ ಸೀಜ್ ಮಾಡಿದಷ್ಟು ಗಾಂಜಾ, ಡ್ರಗ್ಸ್‍ಗಳನ್ನು ಕೇವಲ ಹತ್ತೇ ತಿಂಗಳಲ್ಲಿ ಸೀಜ್ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಲು ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರ ಕಾರ್ಯದಕ್ಷತೆ ಹೆಚ್ಚಿಸಲು ಅನೇಕ ತಂತ್ರಜ್ಞಾನ ತರಬೇತಿಯನ್ನು ನೀಡಲಾಗುತಿದೆ ಎಂದರು.

ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಪೊಲೀಸರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಪೊಲೀಸ್ ದೇಶದಲ್ಲಿಯೆ ನಂ.1 ಎಂದು ಹೆಸರು ಮಾಡಿವೆ. ರಾಯಚೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಐವರು ಪೊಲೀಸರಿಗೆ ಇಲಾಖೆಯಿಂದ ₹30 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಸಿಂಧನೂರು ಸಂಚಾರಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಜಾಗೆ ಗುರುತಿಸಲಾಗಿದ್ದು, ಕಟ್ಟಡ ನಿರ್ಮಿಸುವಂತೆ ಗೃಹ ಸಚಿವ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು. ಅದಕ್ಕೆ ಬೊಮ್ಮಾಯಿ ಅವರು ಒಪ್ಪಿಕೊಂಡರು ಎಂದರು.

ಐಜಿಪಿ ನಂಜುಂಡಯ್ಯಸ್ವಾಮಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಶ್ರೀಧರ, ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಬಸನಗೌಡ ಬ್ಯಾಗವಾಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀರಲಕ್ಷ್ಮಿ ಆದಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿ ಗುರಿಕಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು