ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಧಾರ್ಮಿಕ ತಾಣಗಳಲ್ಲಿ ಬೇಕಿದೆ ಮೂಲಸೌಕರ್ಯ

Last Updated 22 ಜನವರಿ 2023, 21:45 IST
ಅಕ್ಷರ ಗಾತ್ರ

ರಾಯಚೂರು: ಹೊರಗಿನ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಜನರು ಆಗಾಗ ಭೇಟಿ ನೀಡುವ ಸಾಕಷ್ಟು ಸುಕ್ಷೇತ್ರಗಳು ಜಿಲ್ಲೆಯಲ್ಲಿವೆ. ಬಂದಿರುವವರಿಗೆ ಸಮರ್ಪಕವಾದ ಮೂಲಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಸುಕ್ಷೇತ್ರಕ್ಕೆ ತಲುಪಲು ಸುಗಮ ರಸ್ತೆ, ವಾಹನಗಳ ಸೌಕರ್ಯ, ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಜನದಟ್ಟಣೆ ನಿಯಂತ್ರಿಸುವುದಕ್ಕೆ ಬೇಕಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವುದು ತುರ್ತು ಅಗತ್ಯವಿದೆ. ಈಗಿರುವ ಸೌಲಭ್ಯಗಳು ಸಾಕಾಗದೆ ಜನರು ಬಯಲುಗಳಲ್ಲಿಯೇ ಶೌಚ ಮಾಡುವುದು, ಸ್ನಾನ ಮತ್ತು ಅಡುಗೆ ಮಾಡಲು ಬಳಸುವುದಕ್ಕೆ ಬೇಕಾಗುವ ನೀರಿಗಾಗಿ ಅಲೆದಾಡುವುದು ತಪ್ಪುತ್ತಿಲ್ಲ.

ರಾಯಚೂರು ತಾಲ್ಲೂಕಿನ ಕುರವಕುಲ ದತ್ತಾತ್ರೇಯಸ್ವಾಮಿ ದೇವಸ್ಥಾನಕ್ಕೆ ವರ್ಷಪೂರ್ತಿ ಜನರು ಭೇಟಿ ನೀಡುತ್ತಾರೆ. ಅದೇ ರೀತಿ ನಾರದಗಡ್ಡೆ ದೇವಸ್ಥಾನಕ್ಕೂ ಜನರು ಹೋಗಿ ಬರುತ್ತಿದ್ದಾರೆ. ಈ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಆದರೂ ಭಕ್ತರ ಹಿತದೃಷ್ಟಿಯಿಂದ ಮೂಲಸೌಲಭ್ಯಗಳನ್ನು ಒದಗಿಸುವುದಕ್ಕೆ ಜಿಲ್ಲಾಡಳಿತದಿಂದ ಕ್ರಮ ವಹಿಸಬೇಕು ಎನ್ನುವುದು ಜನರ ಬೇಡಿಕೆ.

ಈ ಎರಡೂ ಸುಕ್ಷೇತ್ರಗಳಿಗೆ ತಲುಪಲು ಜನರು ಕೃಷ್ಣಾನದಿ ದಾಟಿಕೊಂಡು ಹೋಗಬೇಕು. ಇದಕ್ಕಾಗಿ ತೆಪ್ಪದಲ್ಲಿ ಕುಳಿತು ಸಾಗಬೇಕಿದೆ. ಕುರವಕಲ ಎದುರು ಮತ್ತು ಬುರ್ದಿಪಾಡ ಬಳಿ ನಾರದಗಡ್ಡೆ ಕಡೆಗೆ ಸೇತುವೆ ನಿರ್ಮಾಣ ಮಾಡುವುದಕ್ಕೆ ಜಿಲ್ಲಾಡಳಿತದಲ್ಲಿ ಅನುದಾನ ಜಮಾ ಆಗಿದೆ. ಆದರೆ, ಅನುದಾನ ಬಳಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಇದುವರೆಗೂ ಗಂಭೀರ ಕ್ರಮಗಳಾಗಿಲ್ಲ. ಪ್ರಗತಿ ಪರಿಶೀಲನೆ ಸಭೆಗಳಲ್ಲಿ ವಿಷಯ ಪ್ರಸ್ತಾಪಕ್ಕೆ ಬಂದು ಹೋಗುತ್ತಿದೆ. ವಾಸ್ತವದಲ್ಲಿ ಸೇತುವೆ ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಿಲ್ಲ.

ಇವುಗಳಲ್ಲದೆ ಇನ್ನೂ ಸಾಕಷ್ಟು ಸುಕ್ಷೇತ್ರಗಳು ಅಭಿವೃದ್ಧಿಗಾಗಿ ಕಾದಿವೆ. ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಜನರು ಒಂದು ಕಡೆಗೆ ಸೇರುತ್ತಾರೆ. ಅವರಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಿದರೆ ಜನರು ತೊಂದರೆ ಅನುಭವಿಸುವುದು ತಪ್ಪುತ್ತದೆ.

ಅವ್ಯವಸ್ಥೆಯ ಆಗರವಾದ ಗುರುಗುಂಟಾ ಅಮರೇಶ್ವರ

ಲಿಂಗಸುಗೂರು: ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಲ್ಲಿ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಸುಕ್ಷೇತ್ರಗಳಲ್ಲಿ ಪ್ರಮುಖ ಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ ಸೌಲಭ್ಯಗಳ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಋಷಿ ಮುನಿಗಳ ತಪಸ್ಸಿನ ತಾಣ, ಗುರು ಮಳೆಯ್ಯಸ್ವಾಮಿ ಶಿವಾಚರ‍್ಯರಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದ ಅವತಾರ ಪುರುಷ ಅಮರಗಂಡ ಹೊಂಡದಲ್ಲಿ ಮುಳುಗಿ ಲಿಂಗೈಕ್ಯ ಸ್ಥಳವೆಂದು ಪೌರಾಣಿಕ ಐತಿಹ್ಯ ಹೊಂದಿರುವ ದೇವಸ್ಥಾನ ಮೇಲುಸ್ತುವಾರಿ ಮತ್ತು ನರ‍್ವಹಣೆ ಕೊರತೆಯಿಂದ ಬಂದು ಹೋಗುವ ಭಕ್ತರು ಪರದಾಡುವಂತಾಗಿದೆ.

ಭಕ್ತರೆ ನಿರ್ಮಿಸಿದ 95 ವಸತಿ ಗೃಹಗಳಿದ್ದು ಅವುಗಳಲ್ಲಿ ಕೇಔಲ 65ರಷ್ಟು ವಸತಿ ಗೃಹಗಳು ಬಳಕೆಗೆ ಯೋಗ್ಯವಾಗಿವೆ. ಈ ವಸತಿ ಗೃಹಗಳಲ್ಲಿ ಶೌಚಾಲಯ, ಕುಡಿವ ನೀರು, ಇತರೆ ಕ್ಷೇತ್ರಗಳಲ್ಲಿರುವಂತೆ ಕಾಟ(ಪಲ್ಲಂಗ) ಫ್ಯಾನ್‍ ಇತರೆ ಸೌಲಭ್ಯಗಳಿಲ್ಲ. ಕ್ಷೇತ್ರಕ್ಕೆ ಬಂದು ಹೋಗುವ ಭಕ್ತರ ಸಂಖ್ಯೆ ಆಧರಿಸಿ ಸಾಮೂಹಿಕ ಶೌಚಾಲಯಗಳ ಕೊರತೆ ಎದ್ದುಕಾಣುತ್ತಿದೆ.

ಸೌಲಭ್ಯಗಳು ಒಂದಡೆ ಇರಲಿ ಅಮರೇಶ್ವರ ದೇವರಿಗೆ ಲಿಂಗದೀಕ್ಷೆ ಮಾಡಿರುವ ಲಿಂಗೈಕ್ಯ ಮಳೆಯ್ಯಸ್ವಾಮಿ ಶಿವಾಚಾರ್ಯರ ಕರ್ತೃ ರ‍್ತೃ ಗದ್ದುಗೆಯ ಗುರುಮಠದ ಒಂದು ಭಾಗ 2009ರ ಅತಿವೃಷ್ಟಿಯಲ್ಲಿ ನೆಲಸಮಗೊಂಡಿದೆ. ಭಕ್ತರೆ ಟಿನ್‍ ಶೆಡ್‍ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ.

ಲಕ್ಷಾಂತರ ಆದಾಯ ಹೊಂದಿರುವ ದೇವಸ್ಥಾನ ಸಮಿತಿ ರಾಜ್ಯದ ಇತರೆ ದೇವಸ್ಥಾನಗಳಲ್ಲಿ ಕಲ್ಪಿಸಿದ ಸೌಲಭ್ಯ ಕಲ್ಪಿಸಿ ಭಕ್ತರ ಅನುಕೂಲಕ್ಕೆ ಮುಂದಾಗುತ್ತಿಲ್ಲ. ಸುಸಜ್ಜಿತ ವಸತಿ ಗೃಹಗಳು, ಶೌಚಾಲಯ, ಮೂತ್ರಾಲಯ, ಶುದ್ಧ ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಮುಜರಾಯಿ ಇಲಾಖೆ ಮತ್ತು ದೇವಸ್ಥಾನ ಸಮಿತಿ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣುತ್ತಿಲ್ಲ ಎಂಬುದು ಭಕ್ತರ ಆರೋಪ.

ಭಕ್ತಾದಿಗಳಿಗೆ ಕುಡಿಯುವ ನೀರಿನ ಸಮಸ್ಯೆ

ಮಾನ್ವಿ: ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದ ವ್ಯಾಪ್ತಿಗೆ ಒಳಪಡುವ ಪಟ್ಟಣದ ಜಗನ್ನಾಥದಾಸರ ಮಂದಿರ ಹಾಗೂ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸುಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರಮುಖ ಧಾರ್ಮಿಕ ಸುಕ್ಷೇತ್ರಗಳಾಗಿವೆ.

ದಾಸಶ್ರೇಷ್ಠರಲ್ಲಿ ಒಬ್ಬರಾದ ಜಗನ್ನಾಥ ದಾಸರ ಸನ್ನಿಧಾನ ಎಂದು ಕರೆಯಲ್ಪಡುವ ಈ ಮಂದಿರದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಮಂದಿರಕ್ಕೆ ತೆರಳಲು ಇಕ್ಕಟಾದ ರಸ್ತೆ ಇರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಇದೆ. ಮಂದಿರದ ಸ್ಥಳ ಹಾಗೂ ಸಮೀಪದ ರಸ್ತೆಯ ಪಕ್ಕದಲ್ಲಿ ಸರಿಯಾದ ಓಳಚರಂಡಿ ವ್ಯವಸ್ಥೆ ಇಲ್ಲ. ಮಂದಿರದಲ್ಲಿ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ.

ನೀರಮಾನ್ವಿ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರೆ ಹಾಗೂ ಇತರ ಹಬ್ಬ, ಅಮವಾಸ್ಯೆ ಸಂದರ್ಭಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಸಮುದಾಯ ಭವನಕ್ಕೆ ಸುಸಜ್ಜಿತ ರಸ್ತೆ ಇಲ್ಲ. ಮಹಿಳಾ ಭಕ್ತಾದಿಗಳಿಗಾಗಿ ನಿರ್ಮಿಸಿರುವ ಸ್ನಾನಗೃಹ ಅವ್ಯವಸ್ಥೆಯಿಂದ ಕೂಡಿದೆ.

ದೇವಸ್ಥಾನದ ಸಮೀಪ ಕುಡಿಯುವ ನೀರಿಗಾಗಿ ಈಗಾಗಲೇ ಒಂದು ಕೊಳವೆ ಬಾವಿ ಕೊರೆಯಿಸಲಾಗಿದೆ. ಹೆಚ್ಚುವರಿಯಾಗಿ ಮತ್ತೊಂದು ಕೊಳವೆಬಾವಿ ಕೊರೆಯಿಸಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂಬುದು ಸ್ಥಳೀಯರ ಮನವಿ.

ಗೂಗಲ್‌ ಅಭಿವೃದ್ದಿಗೆ ಹಣವಿಲ್ಲ

ದೇವದುರ್ಗ : ತಾಲ್ಲೂಕಿನ ಗೂಗಲ್ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಬರುವ ಐತಿಹಾಸಿಕ ಅಲ್ಲಮಪ್ರಭು ದೇವಸ್ಥಾನ ಸರ್ಕಾರದ ಮುಜರಾಯಿ ವ್ಯಾಪ್ತಿಯಲ್ಲಿದ್ದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಈ ಐತಿಹಾಸಿಕ ಕ್ಷೇತ್ರದಲ್ಲಿ ವಾರ್ಷಿಕವಾಗಿ ಸುಮಾರು 40 ಹೆಚ್ಚು ವಿವಾಹ ಕಾರ್ಯಕ್ರಮ ಸೇರಿದಂತೆ ವಿವಿಧ ಶುಭ ಕಾರ್ಯಗಳಿಗೆ ಸಾಕ್ಷಿಯಾಗುತ್ತದೆ. ಶಹಾಪುರ, ವಡಗೇರಾ, ಯಾದಗಿರಿ ರಾಯಚೂರ ಮತ್ತು ದೇವದುರ್ಗದಿಂದ ಬಸ್ ಸಂಪರ್ಕ ಹೊಂದಿರುವ ಗ್ರಾಮ. ದೇವಸ್ಥಾನದ ಹಿಂಭಾಗದಲ್ಲಿ ಚರಂಡಿ ಇಲ್ಲದೆ ಗಲೀಜು ನೀರು ನದಿ ಸೇರುತ್ತಿದೆ. ಶೌಚಾಲಯ ವ್ಯವಸ್ಥೆ ಇಲ್ಲದೆ ದರ್ಶನಕ್ಕೆ ಬರುವ ಭಕ್ತರು ನದಿಯಲ್ಲಿಯೇ ಶೌಚ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದಾರೆ. ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಅಭಿವೃದ್ಧಿಗೆ ಯಾವುದೇ ಹಣ ನೀಡುತ್ತಿಲ್ಲ ಎನ್ನುತ್ತಾರೆ ಎಂದು ಟ್ರಸ್ಟಿನ ಸದಸ್ಯರು. ಗ್ರಾಮಸ್ಥರು ಚಂದಾ ಹಣ ಸಂಗ್ರಹಿಸಿ ಹಲವು ಸೌಕರ್ಯಗಳನ್ನು ಒದಗಿಸಿದ್ದಾರೆ.

ನಾಲ್ಕು ತಾಲ್ಲೂಕುಗಳಿಂದ ಸಂಪರ್ಕ ಹೊಂದಿರುವ ಅಲ್ಲಮಪ್ರಭು ದರ್ಶನಕ್ಕೆ ಪ್ರತಿದಿನ ಕನಿಷ್ಠ ನೂರರಿಂದ ಎರಡು ನೂರಕ್ಕೂ ಹೆಚ್ಚು ಜನ ಆಗಮಿಸುತ್ತಾರೆ. ನದಿಯ ದಡದಲ್ಲಿ ಇದ್ದರೂ ಇಲ್ಲಿನ ಭಕ್ತರಿಗೆ ಮುಜರಾಯಿ ಇಲಾಖೆ ಯಾಗಲಿ ಗ್ರಾಮ ಪಂಚಾಯಿತಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿಲ್ಲ.

ಭಕ್ತರಿಗೆ ಬಯಲು ಶೌಚಾಲಯವೇ ಗತಿ!

ಸಿಂಧನೂರು: ತಾಲ್ಲೂಕು ಕೇಂದ್ರದಿಂದ 22 ಕಿ.ಮಿ ದೂರದಲ್ಲಿರುವ ಸೋಮಲಾಪುರ ಗ್ರಾಮದ ಸಿದ್ಧಪರ್ವತ ಅಂಬಾಮಠಕ್ಕೆ ತೆರಳುವ ಭಕ್ತರಿಗೆ ಬಯಲು ಶೌಚಾಲಯವೇ ಗತಿಯಾಗಿದೆ.

ಸುಮಾರು 10 ವರ್ಷಗಳಿಂದಲೂ ಅಂಬಾಮಠ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕೆಂದು ಆಯಾ ಅವಧಿಯ ಶಾಸಕರು ಹೇಳುತ್ತಲೇ ಬಂದಿದ್ದಾರೆ ಹೊರತು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಅಂಬಾದೇವಿ ದೇವಸ್ಥಾನಕ್ಕೆ ತೆರಳಲು ಎರಡು ರಸ್ತೆಗಳಿದ್ದು, ಎರಡು ಇಕ್ಕಟ್ಟಾಗಿವೆ. ಅಲ್ಲದೆ ಜಾತ್ರಾ ಸಮಯದಲ್ಲಿ ವಾಹನಗಳು ಮತ್ತು ಭಕ್ತರ ಸಂಚಾರದಲ್ಲಿ ವಿಪರೀತ ಧೂಳು ಹರಡುತ್ತದೆ. ಕಾರಣ ಡಾಂಬರ್ ರಸ್ತೆ ಮಾಡುವಂತೆ ಮಠದ ಭಕ್ತರು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ.

ಗುಡ್ಡದ ಪಕ್ಕದಲ್ಲಿ ಸಣ್ಣದೊಂದು ಕಟ್ಟಡವಿದ್ದು ಅದಕ್ಕೆ ಶೌಚಾಲಯ ಎನ್ನುವ ಬೋರ್ಡ್ ಹಾಕಲಾಗಿದೆ. ಹಳೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಬಳೆದು ಹೊಸದೆನ್ನುವಂತೆ ಸಿಂಗಾರ ಮಾಡಿದ್ದಾರೆ. ಆದರೆ ಆ ಶೌಚಾಲಯದೊಳಗೆ ಗುಂಡಿಯೇ ಇಲ್ಲದಿರುವುರಿಂದ ನಿರುಪಯುಕ್ತವಾಗಿದೆ. ಸದಾ ಈ ಶೌಚಾಲಯಕ್ಕೆ ಬೀಗ ಹಾಕಲಾಗಿರುತ್ತದೆ ಎನ್ನುವುದು ಭಕ್ತರ ಆರೋಪವಾಗಿದೆ. ಹೀಗಾಗಿ ಅಲ್ಲಿಗೆ ಬರುವ ಭಕ್ತರು ಶೌಚಕ್ಕಾಗಿ ಬಯಲು ಪ್ರದೇಶವನ್ನೇ ಅವಲಂಬಿಸಿದ್ದು, ಎಲ್ಲೆಂದರಲ್ಲಿ ಮಲ-ಮೂತ್ರ ವಿಸರ್ಜನೆಯಿಂದ ಗಬ್ಬು ನಾರುವ ಪ್ರದೇಶವಾಗಿ ಮಾರ್ಪಟ್ಟಿದೆ.

ಜಾತ್ರೆ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ತಂಗಲು ವಸತಿ ಗೃಹಗಳ ಸೌಲಭ್ಯಗಳಿಲ್ಲ. ಜಮೀನುಗಳಲ್ಲಿಯೇ ಸಣ್ಣಪುಟ್ಟ ಟೆಂಟ್‍ಗಳನ್ನು ಹಾಕಿಕೊಂಡು ಭಕ್ತರು ತಂಗುತ್ತಾರೆ. ಕೊರೆಯುವ ಚಳಿ ಹಾಗೂ ವಿಪರೀತ ಸೊಳ್ಳೆಗಳ ಕಾಟದಿಂದ ಪರದಾಡುವ ಸ್ಥಿತಿಯಿದೆ ಎಂದು ಭಕ್ತರು ದೂರಿದ್ದಾರೆ.

- ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಡಿ.ಎಚ್‌.ಕಂಬಳಿ, ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT