ಸೋಮವಾರ, ಸೆಪ್ಟೆಂಬರ್ 20, 2021
27 °C
ನೇಪಾಳದ ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಟೂರ್ನಿಗೆ 6 ವಿದ್ಯಾರ್ಥಿಗಳು ಆಯ್ಕೆ

ಮಾನ್ವಿ: ಅಂತರರಾಷ್ಟ್ರೀಯ ಟೂರ್ನಿಗೆ ಸಹಾಯದ ನಿರೀಕ್ಷೆಯಲ್ಲಿ ಕ್ರೀಡಾ ಪ್ರತಿಭೆಗಳು

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ನೇಪಾಳದಲ್ಲಿ ಸೆ.2 ರಿಂದ ಸೆ.6ರವರೆಗೆ ನಡೆಯಲಿರುವ ಸಾಂಪ್ರದಾಯಿಕ ಯುವ ಆಟಗಳು ಹಾಗೂ ಕ್ರೀಡೆಗಳ ಒಕ್ಕೂಟದ (ಟಿಎಎಫ್‍ಟಿವೈಜಿಎಎಸ್) 4ನೇ ಅಂತರರಾಷ್ಟ್ರೀಯ ಕ್ರೀಡಾಕೂಟದ ಬಾಸ್ಕೆಟ್ ಬಾಲ್ ಟೂರ್ನಿಯ ಭಾರತದ ತಂಡಕ್ಕೆ ರಾಯಚೂರು ಜಿಲ್ಲೆಯ 6ಜನ ಯುವ ಆಟಗಾರರು ಆಯ್ಕೆಯಾಗಿದ್ದಾರೆ.

ಆದರೆ, ಈ 6ಜನ ಆಟಗಾರರು ನೇಪಾಳಕ್ಕೆ ತೆರಳಲು ವೆಚ್ಚ ಭರಿಸಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಜುಲೈ23ರಿಂದ 25ರವರೆಗೆ ಗುಜರಾತ್‍ನ ಜಾಮ್ ನಗರದಲ್ಲಿ ಸಾಂಪ್ರದಾಯಿಕ ಯುವ ಆಟಗಳು ಹಾಗೂ ಕ್ರೀಡೆಗಳ ಒಕ್ಕೂಟದ (ಟಿಎಎಫ್‍ಟಿವೈಜಿಎಎಸ್) ವತಿಯಿಂದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಟೂರ್ನಿ ನಡೆದಿತ್ತು.

ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಅಂತಿಮ ಪಂದ್ಯದಲ್ಲಿ ಕರ್ನಾಟಕ ರಾಜ್ಯ ತಂಡದ ಸದಸ್ಯರು ಉತ್ತಮ ಪ್ರದರ್ಶನ ತೋರಿದ್ದರು. ರಾಜ್ಯ ತಂಡದಲ್ಲಿ ಉತ್ತಮ ಸಾಧನೆ ಮಾಡಿದ್ದ ಮಾನ್ವಿ ಪಟ್ಟಣದ ಲೊಯೋಲಾ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಸುದರ್ಶನ್, ಚಂದ್ರಕಾಂತ, ಶ್ರೇಯಸ್ , ಎಸ್‍ಆರ್‍ಎಸ್‍ವಿ ಕಾಲೇಜಿನ ಮತಿಯಾಸ್ ಹಾಗೂ ರವಿಕಿರಣ್, ಸಿಂಧನೂರಿನ ಎಸ್.ಪ್ರದೀಪ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು .

ಈಗ ನೇಪಾಳದ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳಲು ಪ್ರಯಾಣದ ವೆಚ್ಚ ಸೇರಿ ಇತರ ವೆಚ್ಚಗಳ ಅರ್ಧದಷ್ಟು ಹಣವನ್ನು ಆಟಗಾರರು ಭರಿಸಬೇಕಿದೆ. ಉಳಿದ ಅರ್ಧದಷ್ಟು ವೆಚ್ಚವನ್ನು ಭಾರತದ ಸಾಂಪ್ರದಾಯಿಕ ಯುವ ಆಟಗಳು ಹಾಗೂ ಕ್ರೀಡೆಗಳ ಒಕ್ಕೂಟದ (ಟಿಎಎಫ್‍ಟಿವೈಜಿಎಎಸ್) ಪಾವತಿಸುತ್ತಿದೆ.

ಪ್ರತಿ ಆಟಗಾರನಿಗೆ ವಿಮಾನ ಪ್ರಯಾಣ ವೆಚ್ಚ ಸೇರಿ ಸುಮಾರು ₹ 40 ಸಾವಿರದಿಂದ ₹ 50ಸಾವಿರ ಖರ್ಚಾಗಲಿದೆ ಎಂದು ತಿಳಿದು ಬಂದಿದೆ. ಗ್ರಾಮೀಣ ಭಾಗದ ಸಾಮಾನ್ಯ ಕುಟುಂಬಗಳಿಗೆ ಸೇರಿರುವ ಈ ಆಟಗಾರರು ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ, ಸಂಘ ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದನ್ನು ಆ. 17ರ ಒಳಗೆ ಖಚಿತಪಡಿಸುವಂತೆ ಸಾಂಪ್ರದಾಯಿಕ ಯುವ ಆಟಗಳು ಹಾಗೂ ಕ್ರೀಡೆಗಳ ಒಕ್ಕೂಟದ (ಟಿಎಎಫ್‍ಟಿವೈಜಿಎಎಸ್) ಕಾರ್ಯದರ್ಶಿ ಸದರಿ ಕ್ರೀಡಾಪಟುಗಳಿಗೆ ಪತ್ರ ಬರೆದು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಸ್ಥಳೀಯರು ತಮಗೆ ನೆರವು ನೀಡುವಂತೆ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.

* ಜಿಲ್ಲೆಯ ಪ್ರತಿಭಾವಂತ ಬಾಸ್ಕೆಟ್ ಬಾಲ್ ಯುವ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳ ನೆರವು ಅಗತ್ಯ

-ಪ್ರಸಾದ್ ಸಾಗರ್, ಜಿಲ್ಲಾ ಕಾರ್ಯದರ್ಶಿ ಟಿಎಎಫ್‍ಟಿವೈಜಿಎಎಸ್, ರಾಯಚೂರು

* ಸ್ಥಳೀಯ ಕ್ರೀಡಾ ಪ್ರತಿಭೆಗಳು ರಾಷ್ಟ್ರೀಯ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಯುವ ಆಟಗಾರರಿಗೆ ಎಲ್ಲರ ಪ್ರೋತ್ಸಾಹ ಅವಶ್ಯ.

-ಸೈಯದ್ ಮಿನಾಜುಲ್ ಹಸನ್, ಸಹಾಯಕ ಪ್ರಾಧ್ಯಾಪಕ, ಮಾನ್ವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು