ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಸೌಲಭ್ಯವಿದ್ದರೂ ಸಾಧನೆ ಏಕಿಲ್ಲ: ಜಿ.ಪಂ. ಸಿಇಒ ನಲಿನ್ ಅತುಲ್‌ ಪ್ರಶ್ನೆ

Last Updated 22 ಮೇ 2019, 10:14 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ಫಲಿತಾಂಶ ಹೆಚ್ಚಿಸುವ ಸಾಧನೆ ಏಕೆ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಎಲ್ಲರೂ ಉತ್ತರ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌ ಹೇಳಿದರು.

ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಮೇಲುಸ್ತುವಾರಿಗಳ ಜಿಲ್ಲಾಮಟ್ಟದ ಪೂರ್ವ ಸಿದ್ಧತಾ ಸಭೆ ಹಾಗೂ ನೀತಿ ಆಯೋಗದ ಪ್ರಾಥಮಿಕ ಹಂತದ ಭಾಷಾ ಕಲಿಕಾ ಸೂಚ್ಯಂಕಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡುವುದಕ್ಕೆ ಪ್ರಾಥಮಿಕ ಹಂತದಿಂದಲೂ ಕಾಳಜಿ ವಹಿಸಬೇಕಾಗುತ್ತದೆ. ಶಿಕ್ಷಕರು, ಮೇಲುಸ್ತುವಾರಿಗಳು ಹಾಗೂ ಪಾಲಕರು ಕೂಡಾ ಗುಣಮಟ್ಟ ಸುಧಾರಣೆಯಲ್ಲಿ ಭಾಗಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರಿಗೆ ಮತ್ತು ಶಾಲೆಗಳಿಗೆ ಇತ್ತೀಚಿಗೆ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಆದರೂ ಫಲಿತಾಂಶ ಹೆಚ್ಚಳವಾಗಿಲ್ಲ. ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ನ್ಯೂನ್ಯತೆಗಳನ್ನು ಕಂಡುಹಿಡಿದು ಸುಧಾರಿಸುವ ಕೆಲಸವಾಗಬೇಕು. ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದರೆ, ಸರ್ಕಾರಿ ಶಾಲೆಗಳಲ್ಲಿ ಬೋಧನಾ ಕೌಶಲ ಸುಧಾರಿಸಬೇಕಾಗಿದೆ ಎಂದರು.

ಮಕ್ಕಳ ಭವಿಷ್ಯ ರೂಪಿಸಲು ಶೈಕ್ಷಣಿಕ ಹಂತ ತುಂಬಾ ಮುಖ್ಯ. ಗುಣಮಟ್ಟದ ಶಿಕ್ಷಣ ಕೊಟ್ಟರೆ ಮಾತ್ರ ಒಳ್ಳೆಯ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರು ಮಾತನಾಡಿ, ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29 ರಿಂದ ಆರಂಭವಾಗಲಿದ್ದು, ಮೊದಲ ದಿನದಂದು ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಮಕ್ಕಳನ್ನು ಶಾಲೆಗೆ ಸೆಳೆಯುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಶಿಕ್ಷಕರು ಹಾಗೂ ಮೇಲುಸ್ತುವಾರಿಗಳು ಈ ಬಗ್ಗೆ ಗಮನ ಹರಿಸಿ ಯೋಜನೆ ಮಾಡಿಕೊಳ್ಳಬೇಕು ಎಂದರು.

ಭಾರತ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕ ಸೈಯದ್‌ ಹಫೀಜುಲ್ಲಾ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿರಾಜ್‌ ಅಹ್ಮದ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲೆಯ ತಾಲ್ಲೂಕು ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಸಿಆರ್‌ಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT