ರಾಯಚೂರು: ‘ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ದೇಶದ ಸ್ವಾತಂತ್ರ್ಯದ ಜೊತೆಗೆ ಜಾತಿ ಪದ್ಧತಿ, ಕೋಮುವಾದದಂಥ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿ ರಹಿತವಾಗಿ ಹೋರಾಟ ನಡೆಸಿದವರು’ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್ (ಎಐಡಿವೈಒ) ಜಿಲ್ಲಾ ಘಟಕದ ಕಾರ್ಯದರ್ಶಿ ವಿನೋದಕುಮಾರ ಅಭಿಪ್ರಾಯಪಟ್ಟರು.
ನಗರದ ಭಗತ್ ಸಿಂಗ್ ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ನೇತೃತ್ವದ ಕಾಂಗ್ರೆಸ್‌ನಿಂದ ಅಹಿಂಸಾ ಹೋರಾಟ ಹಾಗೂ ನೇತಾಜಿ, ಭಗತ್ ಸಿಂಗ್ ನೇತೃತ್ವದ ಕ್ರಾಂತಿಕಾರಿಗಳು ರಾಜಿ ರಹಿತವಾದ ಹೋರಾಟ ಮಾಡಿದ್ದರು. ಕ್ರಾಂತಿಕಾರಿ ಹೋರಾಟಗಾರರು ಬ್ರಿಟಿಷರ ಕಪಿಮುಷ್ಠಿಯಿಂದ ಭಾರತದ ಶ್ರೀಮಂತರಿಗೆ ಅಧಿಕಾರ ಹಸ್ತಾಂತರವನ್ನು ಬಯಸಲಿಲ್ಲ. ಬದಲಿಗೆ ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆ. ದೇಶದ ರೈತ-ಕಾರ್ಮಿಕರ ನೇತೃತ್ವದಲ್ಲಿ ಹೋರಾಟ ನಡೆಯಬೇಕು. ಸಮಾಜವಾದಿ ಭಾರತವನ್ನು ಸ್ಥಾಪಿಸುವುದೇ ಕ್ರಾಂತಿಕಾರಿ ಹೋರಾಟಗಾರರ ಆಶಯವಾಗಿತ್ತು’ ಎಂದು ಹೇಳಿದರು
ಕಾರ್ಮಿಕ ಮುಖಂಡ ವೀರೇಶ ಮಾತನಾಡಿ,‘ಭಗತ್ ಸಿಂಗ್ ಅವರು ಯಾವತ್ತೂ ಜೀವನದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಭಗತ್ ಸಿಂಗ್ ‘ನನ್ನನ್ನು ಗಲ್ಲಿಗೆ ಹಾಕಬಹುದು. ನನ್ನ ವಿಚಾರಗಳನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಅದರಂತೆ ನಮ್ಮ ಸಂಘಟನೆಗಳು ಅವರ ಕನಸಿನ ಭಾರತ ನಿರ್ಮಾಣ ಮಾಡಲು ಶ್ರಮಿಸುತ್ತಿವೆ’ ಎಂದು ತಿಳಿಸಿದರು.
‘ದೇಶ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಬಿಕ್ಕಟ್ಟಿನಲ್ಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸಂಪೂರ್ಣ ಖಾಸಗೀಕರಣವಾಗುತ್ತಿದೆ. ಹಣ ಇದ್ದವರಿಗೆ ಮಾತ್ರ ಸೇವೆ ಸಿಗುವಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾರ್ಮಿಕರನ್ನು ಮಾಲೀಕರು ಶೋಷಣೆ ಮಾಡುತ್ತಿದ್ದಾರೆ. ಭಗತ್ ಸಿಂಗ್ ಆಶಿಸಿದ್ದ ಶೋಷಣೆ ರಹಿತ ಸಮ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.
ಎಐಡಿಎಸ್‌ಒ ಜಿಲ್ಲಾ ಘಟಕದ ಉಪಾಧ್ಯಕ್ಷ ಪೀರಸಾಬ್ ಮಾತನಾಡಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ, ಅಮೋಘ, ಶಿವಪ್ಪ, ಮೌನೇಶ, ಚೋಟು ಬಾಯ್, ಜೈದ್, ಮೌನೇಶ ನಾಯಕ, ಕೃಷ್ಣ, ವೀರೇಶ, ನಂದು, ಅಶೋಕ, ಶಿವು, ನಾಗವೇಣಿ ಉಪಸ್ಥಿತರಿದ್ದರು.
ಕ್ರಾಂತಿಕಾರಿ ಯುವಜನ ಒಕ್ಕೂಟ:
ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ (ಎಐಆರ್‌ಎಸ್‌ಒ) ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (ಆರ್‌ವೈಎಫ್‌ಐ) ಜಂಟಿ ಸಂಘಟನೆಗಳ ನೇತೃತ್ವದಲ್ಲಿ ಭಾರತದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 117ನೇ ಜನ್ಮದಿನೋತ್ಸವ ಕಾರ್ಯಕ್ರಮ ನಗರದ ಆಶಾಪುರ ರಸ್ತೆಯ ಟಿಯುಸಿಐ ಕಾರ್ಮಿಕ ಕಚೇರಿಯಲ್ಲಿ ಜರುಗಿತು.
ವಿದ್ಯಾರ್ಥಿ-ಯುವಜನ ಸಂಘಟನೆಯ ರಾಜ್ಯ ಮುಖಂಡ ಅಜೀಜ್ ಜಾಗಿರದಾರ ಮಾತನಾಡಿ, ‘ಭಗತ್ ಸಿಂಗ್ ತಾರುಣ್ಯದಲ್ಲೇ ಕಟ್ಟಾ ಕ್ರಾಂತಿಕಾರಿಯಾಗಿದ್ದರು. ಕಾರ್ಲ್‌ಮಾರ್ಕ್ಸ್, ಲೆನಿನ್ ಮೊದಲಾದವರ ಚಿಂತನೆಗಳಿಂದ ತೀವ್ರ ಪ್ರಭಾವಿತರಾಗಿದ್ದ ಅವರು ಸಹಜವಾಗಿಯೇ ಸಮಾಜವಾದದೆಡೆಗೆ ಆಕರ್ಷಿತರಾಗಿದ್ದರು’ ಎಂದರು.
‘ಧರ್ಮವು ಅಫೀಮು ಆಗಬಲ್ಲುದು ಎಂಬ ಸತ್ಯವನ್ನು ಅರಿತು ತನ್ನ ಕ್ರಾಂತಿಕಾರಿ ಹೋರಾಟವನ್ನು ಧರ್ಮ ನಿರಪೇಕ್ಷತೆಯ ಆಧಾರದಲ್ಲೇ ನಡೆಸಬೇಕೆಂಬ ಧ್ಯೇಯ ಹೊಂದಿದ್ದರು. ನಾವು ಭಗತ್ ಸಿಂಗ್ ಅವರ ಆಶಯಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.
ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ. ಜಾತಿ, ಧರ್ಮದ ವಿಷ ಬೀಜ ಬಿತ್ತುತ್ತಿರುವ ಕಾರ್ಪೊರೇಟ್ ಶಕ್ತಿಗಳ ಕೃಪಾಪೋಷಿತ ಮನುವಾದವು ಜನರ ಭಾವೈಕ್ಯ, ಅಭಿವೃದ್ಧಿಗೆ ಕಂಟಕವಾಗಿದೆ. ಎಲ್ಲಾ ದುಡಿಯುವ ವರ್ಗವನ್ನು ಸಂಘಟಿಸಿ ಭಗತ್ ಸಿಂಗ್ ಕನಸು ಈಡೇರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಮುಖಂಡರಾದ ನಿರಂಜನಕುಮಾರ, ಯಲ್ಲಪ್ಪ, ರವಿಚಂದ್ರನ್, ಆನಂದಕುಮಾರ, ಹನೀಫ್ ಅಬಕಾರಿ, ಸಂತೋಷ ಹಾಗೂ ಮಾರೆಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.