ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಂದ್‌: ರಾಯಚೂರು ಜಿಲ್ಲೆಯಲ್ಲಿ ನೀರಸ

ರೈತಪರ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Last Updated 27 ಸೆಪ್ಟೆಂಬರ್ 2021, 14:34 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ್ದ ಭಾರತ ಬಂದ್‌ಗೆ ಸೋಮವಾರ ಸಿಂಧನೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನುಳಿದಂತೆ ಜಿಲ್ಲೆಯಾದ್ಯಂತ ನೀರಸವಾಗಿತ್ತು.

ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಮಧ್ಯಾಹ್ನದವರೆಗೂ ಯಥಾಸ್ಥಿತಿಯಲ್ಲಿ ಇರಲಿಲ್ಲ. ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರಿಲ್ಲದ ಕಾರಣ ಎಂದಿನಂತೆ ಬಸ್‌ಗಳು ಸಂಚರಿಸಲಿಲ್ಲ. ಗ್ರಾಮೀಣ ಭಾಗಗಳಿಗೆ ಹಾಗೂ ವಿವಿಧ ತಾಲ್ಲೂಕುಗಳಿಗೆ ಬಸ್‌ಗಳು ಪರ್ಯಾಯ ಮಾರ್ಗಗಳಿಂದ ಸಂಚರಿಸಿದವು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ರೈತಪರ ಸಂಘಟನೆಗಳು ಕೆಲಕಾಲ ರಸ್ತೆ ತಡೆ ನಡೆಸಿದವು. ಆನಂತರ ಧರಣಿ, ಮೆರವಣಿಣಿಗೆಗಳಿಗೆ ಭಾರತ್‌ ಬಂದ್‌ ಸಿಮೀತವಾಗಿತ್ತು. ಕಾಂಗ್ರೆಸ್‌ ಜಿಲ್ಲಾ ಮುಖಂಡರು, ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ,ಟ್ರೇಡ್‌ ಯುನಿಯನ್‌ ಸೆಂಟರ್‌ ಆಫ್‌ ಇಂಡಿಯಾ ರಾಜ್ಯ ಕಾರ್ಯದರ್ಶಿ ಆರ್‌.ಮಾನಸಯ್ಯ ಅವರು ಬಂದ್‌ ಬೆಂಬಲಿಸಿ ಮಾತನಾಡಿದರು. ಪೌರಕಾರ್ಮಿಕ ಸಂಘದ ಅಧ್ಯಕ್ಷ ಎಸ್‌.ಮಾರೆಪ್ಪ, ಸಂಯುಕ್ತ ಹೋರಾಟ ಸಮಿತಿಯ ಕೆ.ಜಿ.ವೀರೇಶ, ಎನ್‌.ಎಸ್‌.ವೀರೇಶ, ಶರಣಪ್ಪ ಮಳ್ಳಿ, ಡಿ.ಎಸ್‌.ಶರಣಬಸವ, ಮಾರೆಪ್ಪ ಹರವಿ ಇದ್ದರು.

ಕರ್ನಾಟಕ ರಕ್ಷಣಾ ಸೇನೆ: ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕದ ವಿಭಾಗೀಯ ಅಧ್ಯಕ್ಷ ರಾಜಶೇಖರ, ಎಚ್.ಕೆ. ರವಿಕುಮಾರ, ಜಿಲ್ಲಾಧ್ಯಕ್ಷ ರಾಘವೇಂದ್ರ, ಪದಾಧಿಕಾರಿ ವೆಂಕಟೇಶ ಚಿಕ್ಕಬಾದರದಿನ್ನಿ, ಎಚ್.ಸತ್ಯರಾಜ, ಕೆ.ಮಲ್ಲೇಶ, ಜೆ.ನಲ್ಲಾರೆಡ್ಡಿ ಇದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹಸಿರು ಶಾಲು ಪ್ರದರ್ಶಿಸಿ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಕಳೆದ 10 ತಿಂಗಳಿನಿಂದ ರೈತಪರ ಸಂಘಟನೆಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೇ ಮೊಂಡುತನ ಪ್ರದರ್ಶಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತ ಮುಖಂಡರೊಂದಿಗೆ ಸಭೆ ನಡೆಸದೇ ರೈತರಿಗೆ ಅವಮಾನಿಸುತ್ತಿದ್ದಾರೆ ಎಂದರು.

ಕೂಡಲೇ ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಸಿರುಸೇನೆ ರಾಯಚೂರು ಘಟಕದ ತಾಲ್ಲೂಕು ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ನರಸಿಂಹ ನಾಯಕ, ವಾಸು ನಾಯಕ, ಹನುಮೇಶ ನಾಯಕ, ಭಾಸ್ಕರ್, ಹನುಮಂತರೆಡ್ಡಿ, ಸತ್ಯರೆಡ್ಡಿ, ಶ್ರೀಕಾಂತ ರೆಡ್ಡಿ, ವೀರಣ್ಣ, ಬಸವರಾಜ, ತಿಮ್ಮಪ್ಪ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ರೈತ ವಿರೋಧಿ ಮೂರು ಮಸೂದೆಗಳನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಇತ್ಯಾದಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಕೋವಿಡ್ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರು ಹಾಗೂ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೀರೇಶ ಹೀರಾ, ತಾಲ್ಲೂಕು ಅಧ್ಯಕ್ಷ ವೆಂಕಟೇಶ ರೆಡ್ಡಿ, ವೀರೇಶ ರೆಡ್ಡಿ, ತುಲಜಾರಾಮ್, ಶ್ಯಾಮ್ ಮಹೆಂದ್ರಕರ್, ರಾಜು, ಭವಾನಿ, ವಿರನಗೌಡ, ರಮೇಶ, ವನಮಾಲಿ, ಎಂ.ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT